ಬೆಂಗಳೂರು,ಜುಲೈ,4,2023(www.justkannada.in): ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು ಅಧಿವೇಶನವನ್ನ ಜುಲೈ 21ರವರೆಗೆ ನಡೆಸಲು ಬಿಎಸಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸ್ಪೀಕರ್ ಯುಟಿ ಖಾದರ್ ತಿಳಿಸಿದರು.
ಇಂದಿನ ವಿಧಾನಸಭೆ ಕಲಾಪದಲ್ಲಿ ಗ್ಯಾರಂಟಿ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಪಟ್ಟು ಹಿಡಿದು ಪ್ರತಿಭಟನೆ ನಡೆಸಿತು. ಇನ್ನೊಂದೆಡೆ, ಮೊದಲು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಪ್ರಾರಂಭಿಸೋಣ. ನಿಯಮ ಬಿಟ್ಟು ಚರ್ಚೆಗೆ ಕೊಟ್ಟರೆ ಸಂಪ್ರದಾಯ ಮುರಿದಂತಾಗುತ್ತದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಸಲಹೆ ನೀಡಿದರು. ರಾಜ್ಯಪಾಲರ ಭಾಷಣದಲ್ಲೇ ಎಲ್ಲಾ ಅಂಶಗಳು ಇವೆ. ಚರ್ಚೆಗೆ ಅವಕಾಶ ನೀಡದಿದ್ದರೆ ಸರಿಯಾದ ಸಂದೇಶ ರವಾನೆ ಆಗಲ್ಲ ಎಂದು ಸಚಿವ ಪರಮೇಶ್ವರ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಅಜೆಂಡಾ ಪ್ರಕಾರವೇ ಎಲ್ಲವೂ ನಡೆದಿದೆ ಎಂದರು. ಈ ವೇಳೆ ಮಾತನಾಡಿದ ಸ್ಪೀಕರ್ ಯುಟಿ ಖಾದರ್, ನಾನು ವಿಪಕ್ಷ ಮಿತ್ರ, ಆದರೆ ನಿಯಮ ಮೀರಿ ಹೋಗುವುದು ಬೇಡ. ಕೆಟ್ಟ ಸಂಪ್ರದಾಯಕ್ಕೆ ಅವಕಾಶ ನೀಡಿದಂತಾಗುತ್ತೆ ಎಂದರು.
ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಗರಂ ಆದ ಬಿಜೆಪಿ ಸದಸ್ಯರು, ಓನ್ ಸೈಡ್ ಸ್ಪೀಕರ್, ಓನ್ ಸೈಡ್ ಸ್ಪೀಕರ್ ಎಂದು ಘೋಷಣೆ ಕೂಗಲು ಆರಂಭಿಸಿದ್ದು, ವಿಧಾನಸಭೆ ಪರಂಪರೆ ಹಾಳು ಮಾಡಬೇಡಿ, ಆ ಸ್ಥಾನದ ಘನತೆ ಉಳಿಸಿ, ಒತ್ತಡಕ್ಕೆ ಮಣಿದು ಸದನ ನಡೆಸಬೇಡಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಇದೇನು ಕಾಂಗ್ರೆಸ್ ಅಧಿವೇಶನ ಅಲ್ಲ, ಸ್ಪೀಕರ್ ಓನ್ ಸೈಡ್ ಆಗಿ ವರ್ತಿಸುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದರು.
ವಿಧಾನಸಭೆಯಲ್ಲಿ ವಿಪಕ್ಷ ಬಿಜೆಪಿ ಗದ್ದಲ ಮುಂದುವರಿದ ಹಿನ್ನೆಲೆ ಕಲಾಪವನ್ನು ಸ್ಪೀಕರ್ ಯು.ಟಿ.ಖಾದರ್ ಅವರು ನಾಳೆ ಬೆಳಗ್ಗೆ 10.30ಕ್ಕೆ ಮುಂದೂಡಿಕೆ ಮಾಡಿದರು.
ಇನ್ನು ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆಗೆ ಆಗ್ರಹಿಸಿ ಬಿಜೆಪಿ ಸದಸ್ಯರ ಧರಣಿ ನಡೆಸಿದ ಹಿನ್ನೆಲೆ ವಿಧಾನಪರಿಷತ್ ಕಲಾಪವನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ನಾಳೆಗೆ ಮುಂದೂಡಿಕೆ ಮಾಡಿದರು.
Key words: Decision – hold -legislative session -till -July 21