ಮೈಸೂರು,ಜುಲೈ,24,2023(www.justkannada.in): ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ರಕ್ಷಣೆ ಮಾಡಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಮೈಸೂರಿಗೆ ಬರುವ ಪ್ರವಾಸಿಗರಿಗೆ ಕ್ಯೂ ಆರ್ ಕಾರ್ಡ್ ವಿತರಣೆಗೆ ಚಿಂತಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ತಿಳಿಸಿದರು.
ಇಂದು ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಹೆಚ್.ಕೆ ಪಾಟೀಲ್, ನಾನು ಪ್ರವಾಸೋದ್ಯಮ ಮತ್ತು ಕಾನೂನು ವ್ಯವಹಾರ ಸಚಿವನಾದ ಮೇಲೆ ಮೈಸೂರಿಗೆ ಮೊದಲ ಭೇಟಿ ಕೊಟ್ಟಿದ್ದೇನೆ. ನಾನು ಮೈಸೂರಿಗೆ ಬಂದ ಉದ್ದೇಶವೇ ಪ್ರವಾಸೋದ್ಯಮ ಬಗ್ಗೆ ಅಧ್ಯಯನ ಮಾಡಲು. ಮೈಸೂರು ಜಿಲ್ಲೆ ಒಂದು ಸಾಂಸ್ಕೃತಿಕ ರಾಜಧಾನಿ. ಕರ್ನಾಟಕದ ಪರಂಪರೆಯಲ್ಲಿ ವಿಶ್ವ ವಿಖ್ಯಾತ ತಾಣವಾಗಿದೆ. ಪ್ರವಾಸೋದ್ಯಮ ಅಧ್ಯಯನ ಮಾಡಲು ಮೈಸೂರು ಉತ್ತಮ ಕೇಂದ್ರ. ಮೈಸೂರು ಪ್ರವಾಸೋದ್ಯಮ ಅಭಿವೃದ್ದಿ ಮಾಡಲು ಸಾಕಷ್ಟು ಮಾಹಿತಿಗಳನ್ನು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದರು.
ಮೈಸೂರಿಗೆ ವಾರ್ಷಿಕ 50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬರ್ತಾರೆ. ಹಾಗಾಗಿ ಬರುವಂತ ಪ್ರವಾಸಿಗರಿಗೆ ಜನಸ್ನೇಹಿ ಪ್ರವಾಸೋದ್ಯಮ ಕಲ್ಪಿಸಬೇಕು. ಪ್ರವಾಸಿಗರಿಗೆ ಟೂರಿಸ್ಟ್ ಪೊಲೀಸ್ ವ್ಯವಸ್ಥೆ ಕಲ್ಪಿಸಲು ಆಲೋಚನೆ ಮಾಡಲಾಗಿದೆ. ಪ್ರವಾಸಿಗರ ಅನುಕೂಲ ಮಾಡಿಕೊಡಲು ಟೂರಿಸ್ಟ್ ಪೊಲೀಸ್ ಅವಶ್ಯಕತೆ ಇದೇ ಅನ್ನಿಸುತ್ತಿದೆ. ಟೂರಿಸ್ಟ್ ಎಂಟ್ರಿ ಪಾಸ್ ಕೊಡಲು ಸಹ ಚಿಂತನೆ ನಡೆಸಲಾಗಿದೆ. ಇದರಿಂದ ಮೈಸೂರಿನ ಎಲ್ಲಾ ಕಡೆ ಟಿಕೆಟ್ ಪಡೆಯುವುದು ತಪ್ಪುತ್ತೆ. ಪಾಸ್ ನಲ್ಲಿ QR ಕೊಡ್ ತರುವ ಚಿಂತನೆಯೂ ಇದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಸಚಿವ ಹೆಚ್.ಕೆ ಪಾಟೀಲ್ ಹೇಳಿದರು.
ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಜಂಗಲ್ ರೆಸಾರ್ಟ್ ಟೂರಿಸಮ್ ಡೆವಲಪ್ ಮೆಂಟ್ ಗೆ ಹಿರಿಯ ನಾಗರಿಕರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ಯಾಕೇಜ್ ಟೂರ್ ಮೂಲಕ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಚಿಂತನೆ ಮಾಡಲಾಗಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
10 ವರ್ಷಗಳ ಬಳಿಕ ಇಂದು ಮೈಸೂರು ಅರಮನೆಯ ಟ್ರಜರಿ ತೆರೆದು ಪರಿಶೀಲನೆ ನಡೆಸಲಾಗಿದೆ. 2014ರಿಂದಲೂ ಅದನ್ನು ಮುಚ್ಚಲಾಗಿದೆ. ಅಲ್ಲಿ 369 ಪುರಾತನ, ಪ್ರಾಚೀನ ವಸ್ತುಗಳು ಅಲ್ಲಿವೆ. ಅವುಗಳನ್ನು ನಾನು ನೋಡಿದ ಮೇಲೆ, ಅವುಗಳನ್ನು ಜನರೂ ನೋಡಲು ಅವಕಾಶ ಕಲ್ಪಿಸಬೇಕು. ಅಧ್ಯಯನ ಶೀಲರು ಅಧ್ಯಯನ ಮಾಡಬೇಕು, ಮಾಹಿತಿ ಸಂಗ್ರಹಕಾರರು ಮಾಹಿತಿ ಸಂಗ್ರಹ ಮಾಡಲು ಅನುಕೂಲವಾಗಲಿದೆ. ಹೀಗಾಗಿ ಅವುಗಳನ್ನು ಸಾರ್ವಜನಿಕ ವೀಕ್ಷಣೆಗೆ ಇಡಲು ಚಿಂತಿಸಲಾಗಿದೆ. ಹಳೇ ಜಿಲ್ಲಾಧಿಕಾರಿ ಕಚೇರಿಯನ್ನ ಇವುಗಳ ಪ್ರದರ್ಶನ ಇಡಲು ಅದನ್ನು ಒಂದು ಉತ್ತಮ ಮ್ಯೂಸಿಯಂ ಮಾಡುವ ಚಿಂತನೆ ಇದೆ. ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಎಚ್ ಕೆ ಪಾಟೀಲ್ ಮೈಸೂರಿನಲ್ಲಿ ಹೇಳಿದರು.
ಮೈಸೂರು ವಸ್ತು ಪ್ರದರ್ಶನದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಸ್ವದೇಶಿ ದರ್ಶನ್ ಯೋಜನೆಯಡಿ 80 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಕೆ ಪಾಟೀಲ್, ಈ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಈ ಸಂಬಂಧ ಪ್ರತಾಪ್ ಸಿಂಹ ಸಭೆ ನಡೆಸಿರುವ ವಿಚಾರವು ನನ್ನ ಗಮನಕ್ಕೆ ಬಂದಿಲ್ಲ. ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕಳೆದ 5 ವರ್ಷಗಳಿಂದ ನಯಾ ಪೈಸೆ ಬಿಡುಗಡೆ ಮಾಡಿಲ್ಲ ಎಂದರು.
Key words: protect –heritage- buildings –Mysore-Minister- HK Patil