ಮೈಸೂರು, ಜುಲೈ 28, 2023 (www.justkannada.in):ಹುಣಸೂರಿನ ಆಯುರ್ವೇದಿಕ್ ವೆಸ್ಟೀಜ್ ಕಂಪನಿಯ ಮಹಿಳೆಯನ್ನು ಕೊಲೆ ಮಾಡಿದ್ದ ವ್ಯಕ್ತಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಹುಣಸೂರಿನ ನರಸಿಂಹ ಸ್ವಾಮಿ ಬಡಾವಣೆಯ ನಿವಾಸಿ ಪ್ರವೀಣ್ ಕುಮಾರ್ ಅಲಿಯಾಸ್ ಪ್ರವೀಣ್’ಗೆ ಹುಣಸೂರಿನಲ್ಲಿರುವ ಮೈಸೂರಿನ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣದ ವಿವರ: ಹುಣಸೂರು ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಂಜುನಾಥ ಬಡಾವಣೆಯ ನಿವಾಸಿ ರಾಮಕೃಷ್ಣಗೌಡ ರವರು ತನ್ನ ಕುಟುಂಬದೊಂದಿಗೆ ಬಾಡಿಗೆಯ ಮನೆಯಲ್ಲಿ ವಾಸವಾಗಿದ್ದು,ಅವರು ಆಯುರ್ವೇದಿಕ್ ವೆಸ್ಟೀಜ್ ಕಂಪನಿಯಲ್ಲಿ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡಿಕೊಂಡಿದ್ದರು.ಅದೇ ಕಂಪನಿಯಲ್ಲಿ ಹುಣಸೂರಿನ ನರಸಿಂಹ ಸ್ವಾಮಿ ಬಡಾವಣೆಯ ನಿವಾಸಿ ಮಹದೇವ ಅವರ ಮಗನಾದ ಪ್ರವೀಣ್ ಕುಮಾರ್ ಅಲಿಯಾಸ್ ಪ್ರವೀಣ್ ಕೂಡ ಉದ್ಯೋಗಿಯಾಗಿದ್ದರು.
ಕೆಲಸದ ವಿಚಾರದಲ್ಲಿ ರಾಮಕೃಷ್ಣಗೌಡರವರ ಮನೆಗೆ ಆಗಾಗ್ಗೆ ಕಂಪನಿಯ ಸದಸ್ಯರು ಮೀಟಿಂಗ್ಗೆ ಬಂದು ಹೋಗುತ್ತಿದ್ದರು. ಕೆಲಸದ ವಿಚಾರದಲ್ಲಿ ಆಗಾಗ್ಗೆ ಆರೋಪಿ ಪ್ರವೀಣ್ ಕುಮಾರ್ ರಾಮಕೃಷ್ಣ ಗೌಡರ ಮನೆಗೆ ಬಂದು ಊಟ ತಿಂಡಿ ಸೇವಿಸುತ್ತಿದ್ದರು. ರಾಮಕೃಷ್ಣಗೌಡ ರವರು ಕೆಲಸದ ಮೇಲೆ ಬೇರೆ ಊರುಗಳಿಗೆ ಹೋದಾಗ ಆರೋಪಿ ಪ್ರವೀಣ್ ಕುಮಾರ್ ರಾಮಕೃಷ್ಣ ಗೌಡರ ಮನೆಗೆ ಹೋಗಿ ಅವರ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ಈ ವಿಚಾರವನ್ನು ತಿಳಿದ ರಾಮಕೃಷ್ಣಗೌಡ ರವರು ಆರೋಪಿ ಪ್ರವೀಣ್ ಕುಮಾರ್ ಗೆ ಅನೇಕ ಬಾರಿ ಬುದ್ಧಿ ಹೇಳಿದರೂ ಸಹ ಕೇಳದೇ ಪದೇ ಪದೇ ಈ ರೀತಿ ಮಾಡುತ್ತಿದ್ದರಿಂದ ರಾಮಕೃಷ್ಣಗೌಡ ರವರು ತಮ್ಮ ಕಂಪನಿಯ ಹಿರಿಯರಿಗೆ ಈ ವಿಚಾರ ತಿಳಿಸಿ ಈ ಬಗ್ಗೆ ನ್ಯಾಯ ಪಂಚಾಯಿತಿ ಮಾಡಿ ಆರೋಪಿ ಪ್ರವೀಣ್ ಕುಮಾರನನ್ನು ಕೆಲಸದಿಂದ ತೆಗೆದು ಹಾಕಿದ್ದರು.
ಈ ವಿಚಾರವಾಗಿ ಆರೋಪಿಯು ದ್ವೇಷವಿಟ್ಟುಕೊಂಡು ಪದೇ ಪದೇ ರಾಮಕೃಷ್ಣಗೌಡ ರವರ ಮನೆಗೆ ಹೋಗಿ ಯಾರೂ ಇಲ್ಲದ ಸಮಯದಲ್ಲಿ ಗಲಾಟೆ ಮಾಡುತ್ತಿದ್ದನು. 08-12-2017 ರಂದು ರಾಮಕೃಷ್ಣಗೌಡ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಆರೋಪಿಯು ರಾಮಕೃಷ್ಣಗೌಡ ರವರ ಮನೆಗೆ ಹೋಗಿ ಅವರ ಪತ್ನಿ ಜ್ಯೋತಿ ರವರೊಂದಿಗೆ ಅಸಭ್ಯವಾಗಿ ವರ್ತಿಸಿದಾಗ ಜ್ಯೋತಿ ರವರು ಬೇಸರಗೊಂಡು ಅದೇ ದಿನ ರಾತ್ರಿ ಸುಮಾರು 10-30 ಗಂಟೆಯಲ್ಲಿ ಆರೋಪಿ ಪ್ರವೀಣ್ ಕುಮಾರ್ ಅವರ ಮನೆಗೆ ಹೋಗಿ ಅವರ ತಂದೆ-ತಾಯಿಗೆ ನಿಮ್ಮ ಮಗ ಪ್ರವೀಣ್ ಎಲ್ಲಿ ಹೋದ? ಅವನು ನಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಂದು ನನಗೆ ತುಂಬಾ ತೊಂದರೆ ಮಾಡುತ್ತಾನೆ. ಅವನಿಗೆ ಸರಿಯಾಗಿ ಬುದ್ದಿ ಹೇಳಿ. ಇಲ್ಲದಿದ್ದರೆ ನಾನು ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ಎಚ್ಚರಿಸಿ ಬಂದಿದ್ದರು. 09-12-2017 ರಂದು ಬೆಳಿಗ್ಗೆ 6-15 ಗಂಟೆ ಸಮಯದಲ್ಲಿ ಜ್ಯೋತಿ ರವರು ಪ್ರವೀಣನ ಮನೆಯ ಹತ್ತಿರ ಹೋಗಿ ಗಲಾಟೆ ಮಾಡಿ ತಮ್ಮ ಮನೆಗೆ ಹಿಂದಿರುಗಿ ಬಂದಿದ್ದು, ಆರೋಪಿ ಪ್ರವೀಣ್ ಈ ವಿಚಾರವನ್ನು ತಿಳಿದುಕೊಂಡು ಜ್ಯೋತಿರವರ ಮೇಲೆ ದ್ವೇಷವಿಟ್ಟುಕೊಂಡು ರಾಮಕೃಷ್ಣಗೌಡ ರವರ ಮನೆಗೆ ಹೋಗಿ ಅವರ ಮನೆಯ ಮೇಲ್ಛಾವಣಿಯ ಮೇಲೆ ಬೆಳಿಗ್ಗೆ 6-50 ಗಂಟೆಯಲ್ಲಿ ಜ್ಯೋತಿಯನ್ನು ಕರೆದುಕೊಂಡು ಹೋಗಿ ಜಗಳ ತೆಗೆದು ಆಕೆಯು ಹಾಕಿಕೊಂಡಿದ್ದ ಚಿನ್ನದ ಮಾಂಗಲ್ಯ ಸರದಿಂದ ಕುತ್ತಿಗೆ ಬಿಗಿದು ಹಿಡಿದು ಕೊಲೆ ಮಾಡಿ ಅಲ್ಲಿಂದ ಹೊರಟು ಹೋಗಿದ್ದಾನೆಂದು ಆರೋಪಿಸಿ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,ತನಿಖೆ ನಡೆಸಿದ ಹುಣಸೂರು ಪಟ್ಟಣ ಪೊಲೀಸ್ ಠಾಣೆ ಪೊಲೀಸರು ಪ್ರವೀಣ್ ಕುಮಾರ್ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹುಣಸೂರಿನ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ‘ಪಾಟೀಲ್ ಮೋಹನಕುಮಾರ ಭೀಮನಗೌಡ’ ಅವರು ಪ್ರಕರಣದ ಆರೋಪಿ ಪ್ರವೀಣ್ ಕುಮಾರ್ ಅಲಿಯಾಸ್ ಪ್ರವೀಣ್ ಮೇಲೆ ಹೊರಿಸಲಾದ ಆಪಾದನೆ ಸಾಬೀತಾಗಿದೆ ಎಂದು ಪರಿಗಣಿಸಿ ಆರೋಪಿ ಪ್ರವೀಣ್ ಕುಮಾರ್ ಅಲಿಯಾಸ್ ಪ್ರವೀಣ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅದರೊಂದಿಗೆ ರೂ.10,000-ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ 3 ತಿಂಗಳ ಶಿಕ್ಷೆ ವಿಧಿಸಿ 28-07-2023 ರಂದು ತೀರ್ಪು ನೀಡಿರುತ್ತಾರೆ. ಸದರಿ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಕೆ.ಎಂ.ಸಿ.ಶಿವಶಂಕರಮೂರ್ತಿ ರವರು ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ.