ವಿಜಯಪುರ,ಜುಲೈ,29,2023(www.justkannada.in): ನಿರ್ಮಾಣ ಹಂತದಲ್ಲಿರುವ ಇಲ್ಲಿನ ವಿಮಾನ ನಿಲ್ದಾಣ ಕಾಮಗಾರಿಗಳು ಭರದಿಂದ ಸಾಗಿದ್ದು, 2024ರ ಏಪ್ರಿಲ್ ವೇಳೆಗೆ ಉದ್ಘಾಟನೆಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಮೂಲಸೌಲಭ್ಯ ಅಭಿವೃದ್ಧಿ ಸಚಿವ, ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದರು.
ವಿಮಾನ ನಿಲ್ದಾಣ ಕಾಮಗಾರಿಯನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, 727 ಎಕರೆ ವಿಸ್ತೀರ್ಣದಲ್ಲಿ ತಲೆಯೆತ್ತುತ್ತಿರುವ ವಿಮಾನ ನಿಲ್ದಾಣದ ಸಿವಿಲ್ ಕಾಮಗಾರಿಗಳು ಈ ವರ್ಷದ ಡಿಸೆಂಬರ್ ಹೊತ್ತಿಗೆ ಮುಗಿಯಲಿವೆ. ಅದರ ನಂತರ ಇತರ ತಾಂತ್ರಿಕ ಕೆಲಸಗಳು ನಡೆದು ಏಪ್ರಿಲ್ ವೇಳೆಗೆ ಎಲ್ಲವೂ ಮುಗಿಯುವ ವಿಶ್ವಾಸ ಇದೆ ಎಂದು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರ, ಇಲ್ಲಿ ಬೆಳಗಿನ ಹೊತ್ತು ಮಾತ್ರ ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ ನಾನು ಸಚಿವನಾದ ನಂತರ ರಾತ್ರಿ ಹೊತ್ತು ಕೂಡ ವಿಮಾನ ಬಂದಿಳಿಯುವ ಹಾಗೆ ಸೌಲಭ್ಯಗಳಿರಬೇಕೆಂದು ನಿರ್ದೇಶನ ನೀಡಿದ್ದೇನೆ. ಇದಷ್ಟೇ ಅಲ್ಲ ಏರ್ ಬಸ್ ಮಾದರಿಯ ದೊಡ್ಡ ವಿಮಾನಗಳು ಕೂಡ ಇಲ್ಲಿಗೆ ಬಂದಿಳಿಯಲು ಅನುಕೂಲವಾಗುವ ಹಾಗೆ ಯೋಜನೆಯಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಕಾಮಗಾರಿಗಳು ತಾಂತ್ರಿಕ ಕಾರಣಗಳಿಂದ ನಿಲ್ಲಬಾರದೆಂಬ ಉದ್ದೇಶದಿಂದ ಎರಡು ದಿನಗಳ ಹಿಂದೆ ಈ ಯೋಜನೆಗೆ 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿ ಶೌಚಾಲಯ, ಕ್ಯಾಂಟೀನ್ ಸೇರಿದಂತೆ ಪ್ರತಿಯೊಂದು ಸೌಲಭ್ಯವೂ ದೊಡ್ಡ ವಿಮಾನ ನಿಲ್ದಾಣದಲ್ಲಿ ಇರುವಂತೆಯೇ ಇರಲಿದೆ. ಜತೆಗೆ ಏರ್ ಬಸ್ ಮಾದರಿಯ ವಿಮಾನಗಳು ಬಂದಿಳಿಯಲು ಅಗತ್ಯವಿರುವ ಭೂಸ್ವಾಧೀನ ಕೂಡ ನಡೆಯಲಿದ್ದು, ಈ ಸಂಬಂಧ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ವಿವರಿಸಿದರು.
ಡಿಜಿಸಿಎ ಮಾನದಂಡಗಳ ಪ್ರಕಾರ ಇಲ್ಲಿನ ವಿಮಾನ ನಿಲ್ದಾಣಕ್ಕೆ ಎರಡು ವಿಮಾನ ರಕ್ಷಣಾ ಅಗ್ನಿಶಾಮಕ ವಾಹನಗಳು ಅಗತ್ಯವಿವೆ. ರಾತ್ರಿ ವೇಳೆ ಇಳಿಯುವ ಸೌಲಭ್ಯ ಕಲ್ಪಿಸಲು ಬೇಕಾಗುವ ಉಪಕರಣಗಳ ಸಂಗ್ರಹಣೆಗೆ ಕೂಡ ಸ್ಪಷ್ಟ ನಿರ್ದೇಶನ ಕೊಡಲಾಗಿದೆ. ಇದರ ಜತೆಗೆ ಹವಾಮಾನ ಕುರಿತ ಮಾಹಿತಿ ನೀಡುವ ಉಪಕರಣಗಳನ್ನು ಅಳವಡಿಸಬೇಕಾಗಿದೆ. ಈ ಎಲ್ಲದಕ್ಕೂ ಅಂದಾಜು 50 ಕೋಟಿ ರೂಪಾಯಿ ಬೇಕಾಗುತ್ತದೆ. ಹೀಗಾಗಿ ವಿಮಾನ ನಿಲ್ದಾಣದ ಅಂದಾಜು ವೆಚ್ಚ 400 ಕೋಟಿ ರೂ. ಆಗುವ ಸಾಧ್ಯತೆ ಇದೆ ಎಂದು ಅವರು ನುಡಿದರು.
ಇದುವರೆಗೂ 300 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಪರಿಸರ ಇಲಾಖೆಯ ಅನುಮತಿಗಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಕಾಮಗಾರಿಗಳು ಮುಕ್ತಾಯದ ಹಂತಕ್ಕೆ ಬಂದಿರುವುದರಿಂದ ಈ ಪ್ರಕ್ರಿಯೆ ಸುಗಮವಾಗಿ ನಡೆಯಲಿದೆ. ಜತೆಗೆ ಕೇಂದ್ರ ಸರಕಾರದ ಮಲ್ಟಿ ಡಿಸಿಪ್ಲಿನರಿ ತಂಡದಿಂದ ವಿಮಾನ ನಿಲ್ದಾಣ ಕಾಮಗಾರಿಯ ಪರಿಶೀಲನೆ ನಡೆಸುವಂತೆ ಕೋರಲಾಗಿದ್ದು, ಈ ತಂಡವು ಆಗಸ್ಟ್ ತಿಂಗಳಲ್ಲಿ ವಿಜಯಪುರಕ್ಕೆ ಭೇಟಿ ನೀಡಬಹುದು ಎಂದು ಸಚಿವ ಎಂ.ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ವಿಮಾನ ನಿಲ್ದಾಣದ ಕಾಮಗಾರಿಗಳು ಒಟ್ಟು ಮೂರು ಪ್ಯಾಕೇಜ್ ಗಳಲ್ಲಿ ನಡೆಯುತ್ತಿವೆ. ಪ್ಯಾಕೇಜ್-1ರಲ್ಲಿ 222.92 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಪೆರಿಫೆರಲ್ ರಸ್ತೆ, ಏಪ್ರಾನ್, ಟ್ಯಾಕ್ಸಿವೇ, ಅಪ್ರೋಚ್ ರಸ್ತೆಗಳ ಕೆಲಸ ನಡೆಯುತ್ತಿದೆ. ಪ್ಯಾಕೇಜ್-2ರಲ್ಲಿ 86.20 ಕೋಟಿ ರೂ. ವೆಚ್ಚದಲ್ಲಿ ಪ್ಯಾಸೆಂಜರ್ ಟರ್ಮಿನಲ್, ಎಟಿಸಿ ಕಟ್ಟಡ, ವಿದ್ಯುತ್ ಉಪಕೇಂದ್ರ, ಕಾಂಪೌಂಡ್, ವೀಕ್ಷಣಾ ಗೋಪುರ, ಅಂಡರ್ ಗ್ರೌಂಡ್ ಟ್ಯಾಂಕ್ ಕಾಮಗಾರಿ ಪ್ರಗತಿಯಲ್ಲಿದೆ. ಪ್ಯಾಕೇಜ್-3ರಲ್ಲಿ 19.30 ಕೋಟಿ ರೂ. ವಿನಿಯೋಗಿಸಿ ಎಲೆಕ್ಟ್ರೋ-ಮೆಕ್ಯಾನಿಕಲ್ ಸಾಧನಗಳ ಕೆಲಸ ಚಾಲ್ತಿಯಲ್ಲಿದೆ. ಮಿಕ್ಕಂತೆ ವಿದ್ಯುತ್ ಪೂರೈಕೆ, ಸರ್ವೇ ಇತ್ಯಾದಿ ಕೆಲಸಗಳಿಗಾಗಿ 19.41 ಕೋಟಿ ರೂ. ವಿನಿಯೋಗಿಸಲಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ ಮಾಹಿತಿ ನೀಡಿದರು.
ನಾಗಠಾಣ ಶಾಸಕ ವಿಠಲ ಕಟಕದೊಂಡ, ಕೆಎಸ್ ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್ ರವಿ, ಜಿಲ್ಲಾಧಿಕಾರಿಗಳಾರಿ ಟಿ. ಭೂಬಾಲನ್, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದ ಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.
ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ
ಕಲಬುರಗಿ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಹಲವು ವಿಮಾನ ನಿಲ್ದಾಣಗಳ ಕಾಮಗಾರಿಗಳಿಗೆ ಕೇಂದ್ರ ಸರಕಾರ ಹಣ ಕೊಟ್ಟಿಲ್ಲ. ಕಲ್ಬುರ್ಗಿ ಮಾತ್ರವಲ್ಲದೆ, ಶಿವಮೊಗ್ಗ, ವಿಜಯಪುರ ಮತ್ತು ಹಾಸನ ವಿಮಾನ ನಿಲ್ದಾಣ ಗಳಿಗೂ ಹಣ ಕೊಟ್ಟಿಲ್ಲ. ಎಲ್ಲದಕ್ಕೂ ರಾಜ್ಯ ಸರ್ಕಾರವೇ ಹಣ ನೀಡಿದೆ. ಹೀಗಾಗಿ ನಾವು ಹಣ ಹಾಕಿ ಭಾರತೀಯ ವಿಮಾನ ಪ್ರಾಧಿಕಾರಕ್ಕೆ ವಹಿಸುವುದರಲ್ಲಿ ಅರ್ಥ ಇಲ್ಲ ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರದಿಂದಲೇ ಏಕೆ ಇವುಗಳ ನಿರ್ವಹಣೆ ಮಾಡಬಾರದು ಎನ್ನುವ ಚಿಂತನೆ ಇದೆ ಎಂದು ಸಚಿವ ಎಂ.ಬಿ ಪಾಟೀಲ್ ವಿವರಿಸಿದರು
ಕಾರ್ಗೋ, ಪ್ರವಾಸೋದ್ಯಮಕ್ಕೆ ಒತ್ತು
ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ನಂತರ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ದ್ರಾಕ್ಷಿ ಸೇರಿದಂತೆ ಇತರ ಕೃಷಿ ಉತ್ಪನ್ನಗಳ ರಫ್ತಿಗೂ ಅನುಕೂಲ ಆಗುವ ವಿಶ್ವಾಸ ಇದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರ ಜತೆ ಮಾತುಕತೆ ನಡೆಸಿ, ನಮ್ಮ ರೈತರಿಗೆ ಅನುಕೂಲ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಪ್ರವಾಸೋದ್ಯಮ ಕ್ಷೇತ್ರದಲ್ಲೂ ಜಿಲ್ಲೆ ಹಿಂದುಳಿದಿದೆ. ಹೀಗಾಗಿ ವಿಮಾನ ನಿಲ್ದಾಣ ಆದ ಮೇಲೆ ಪ್ರವಾಸಿಗರನ್ನು ಆಕರ್ಷಿಸಲು ವಿಶೇಷ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಎಂಬಿ ಪಾಟೀಲ್ ವಿವರಿಸಿದರು.
Key words: Inauguration – Vijayapura Airport – April 2024-Minister -MB Patil