ಮೈಸೂರು,ಆಗಸ್ಟ್,1,2023(www.justkannada.in): ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕುರಿತು ಮರು ತನಿಖೆಗೆ ಆಗ್ರಹಿಸಿ ಆಗಸ್ಟ್ 3ರಂದು ಮೇಣದ ಬತ್ತಿ ಹಿಡಿದು ಮೌನ ಮೆರವಣಿಗೆ ನಡೆಸಲಾಗುತ್ತದೆ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ ತಿಳಿಸಿದರು.
ಸೌಜನ್ಯ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಇಂದು ನಗರದ ಪತ್ರಕರ್ತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮರಿಸ್ವಾಮಿ, 11 ವರ್ಷ ಕಳೆದರೂ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ. ಸಂತೋಷ್ ರಾವ್ ಅಪರಾಧಿ ಅಲ್ಲ ಎಂದು ಕೋರ್ಟ್ ತೀರ್ಪು ಕೊಟ್ಟಿದೆ. ನಿಜ ಅಪರಾಧಿಗಳ ಪತ್ತೆ ಆಗಬೇಕು ಸೌಜನ್ಯಾಗೆ ನ್ಯಾಯ ಸಿಗಬೇಕು. ಹಾಗಾಗಿ ಇದೆ ಆಗಸ್ಟ್ 3ನೇ ತಾರೀಖು ಸಂಜೆ 6 ಗಂಟೆಗೆ ಮೇಣದ ಬತ್ತಿ ಹಿಡಿದು ಮೌನ ಮೆರವಣಿಗೆ ನಡೆಸಲಿದ್ದೇವೆ. ಮೈಸೂರು ಅರಮನೆ ಮುಂಭಾಗದಿಂದ ಗಾಂಧಿ ವೃತ್ತದವರೆಗೆ ಮೌನ ಮೆರವಣಿಗೆ ಮಾಡುತ್ತೇವೆ. ಈ ಮೂಲಕ ಸೌಜನ್ಯ ಪ್ರಕರಣದ ಮರು ತನಿಖೆ ಮಾಡುವಂತೆ ಆಗ್ರಹ ಮಾಡುತ್ತೇವೆ ಎಂದು ತಿಳಿಸಿದರು.
ಸೌಜನ್ಯ ಕೊಲೆಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಲ್ಲ-ನಟ ದುನಿಯಾ ವಿಜಯ್ ಟ್ವೀಟ್.
ಪ್ರಕರಣ ಕುರಿತು ಟ್ವೀಟ್ ಮಾಡಿರುವ ನಟ ದುನಿಯಾ ವಿಜಯ್, ಸೌಜನ್ಯ ಕೊಲೆಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಲ್ಲ ಎಂದಿದ್ದಾರೆ.
ಪ್ರತಿ ವರ್ಷ ಧರ್ಮಸ್ಥಳ ಮಂಜುನಾಥಸ್ವಾಮಿ ದರ್ಶನ ಪಡೆಯುವುದು ವಾಡಿಕೆಯಾಗಿತ್ತು. ಆದರೆ ಸೌಜನ್ಯಳ ಪ್ರಕರಣ ಇಂದಿನ ಬೆಳವಣಿಗೆ ನೋಡಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತದೆ. ಸತ್ಯ ಎಂಬುದು ಸೂರ್ಯನ ಬೆಳಕಿದ್ದಂತೆ ಯಾರು ಹೆಚ್ಚು ಸಮಯ ಮರೆಮಾಚಲಾಗದು ಎಂದು ಟ್ವಿಟ್ ಮೂಲಕ ದುನಿಯಾ ವಿಜಯ್ ಬೇಸರ ವ್ಯಕ್ತಪಡಿಸಿದರು.
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಆ ಭಾಗದಲ್ಲಿ ಅದೊಂದೆ ಅಲ್ಲ, ಇಪ್ಪತ್ತಕ್ಕೂ ಹೆಚ್ಚು ಅಂತಹ ಘಟನೆಗಳು ನಡೆದಿವೆ. ಸೌಜನ್ಯ ಪ್ರಕರಣದಲ್ಲಿ ಅಮಾಯಕನಿಗೆ ಹತ್ತು ವರ್ಷ ಶಿಕ್ಷೆ ಆಗಿದೆ. ಸೌಜನ್ಯ ಕುಟುಂಬಕ್ಕೆ ಅನ್ಯಾಯವಾಗಿದೆ. ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚಿಸಿ ಸಮಗ್ರವಾದ ತನಿಖೆ ಮಾಡಬೇಕು. ಸೌಜನ್ಯ ಪ್ರಕರಣ ಮರು ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು.
Key words: Silent march – Mysore – August 3- demanding- re-investigation –sowjannya- killing case.