ಮೈಸೂರು,ಆಗಸ್ಟ್,14,2023(www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಕಾರ್ಯಕಾರಿ ಸಮಿತಿ ಸಭೆ ಅಂತ್ಯವಾಗಿದ್ದು, ಸೆಪ್ಟಂಬರ್ 1ಕ್ಕೆ ಗಜಪಯಣ ನಡೆಯಲಿದ್ದು, ದಸರಾ ಆಚರಣೆಗಾಗಿ 16 ಉಪ ಸಮಿತಿ ರಚನೆ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆಚರಣೆ ಸಂಬಂಧ ಸಚಿವ ಹೆಚ್.ಸಿ ಮಹದೇವಪ್ಪ ನೇತೃತ್ವದಲ್ಲಿ ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ಸಭೆ ಮುಗಿದ ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ ಹೆಚ್ ಸಿ ಮಹದೇವಪ್ಪ, ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಭಾಗಿಯಾಗಿ ಹಲವು ಸಲಹೆಗಳನ್ನು ಕೊಟ್ಟಿದ್ದಾರೆ. ಈ ಬಾರಿಯ ದಸರಾ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸಲಾಗುವುದು. ಸೆಪ್ಟೆಂಬರ್ 1ಕ್ಕೆ ಗಜಪಯಣ ಸಮಾರಂಭ ನಡೆಯಲಿದೆ. ದಸರಾ ಆನೆಗಳು ಸೆಪ್ಟೆಂಬರ್ 4ಕ್ಕೆ ಅರಮನೆ ಆವರಣ ಪ್ರವೇಶಿಸಲಿವೆ. ದಸರಾ ಆಚರಣೆಗಾಗಿ 16 ಉಪ ಸಮಿತಿ ರಚಿಸಲಾಗಿದೆ. ಅಗತ್ಯ ಬಿದ್ದರೆ ಮತ್ತೆ ಮೂರು ಸಮಿತಿಗಳನ್ನು ರಚಿಸಲಾಗುತ್ತದೆ. ಈ ಬಾರಿ ಬ್ಯ್ರಾಂಡ್ ಮೈಸೂರು ಸ್ಪರ್ಧೆ ಆಯೋಜಿಸಲಾಗುವುದು. ದಸರಾಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ. ಕಳೆದ ಸಲಕ್ಕಿಂತ ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಏಳು ತಿಂಗಳಿನಲ್ಲಿ ಸರ್ಕಾರ ಬೀಳುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ, ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ. ಆನೆ ಹೋಗುತ್ತಿರುತ್ತದೆ, ನರಿ ಅದೇ ಬೀಳುತ್ತದೆ ಎಂದು ಕಾಯುತ್ತಿರುತ್ತದೆ. ಬಿಜೆಪಿಯವರ ಪಾಡು ಈ ರೀತಿ ಯಾಗಿದೆ. ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತಿದೆ. ಅದನ್ನ ಕೆಡಿಸಲು ಈ ರೀತಿ ಹೇಳಿಕೆಗಳನ್ನ ಹೇಳುತ್ತಿದ್ದಾರೆ. ಅಪರೇಷನ್ ಕಮಲ ಯಾವುದು ಕರ್ನಾಟಕದಲ್ಲಿ ನಡೆಯುವುದಿಲ್ಲ. ಅಂತಹ ಅಪರೇಷನ್ ನಡೆಸಿದ್ದಕ್ಕೆ ಅವರಿಗೆ ಇವತ್ತು ಈ ಸ್ಥಿತಿ ಬಂದಿದೆ. ಇಲ್ಲಿ ಬಿಜೆಪಿಯ ಯಾವ ಆಟವೂ ನಡೆಯುವುದಿಲ್ಲ. ಸರ್ಕಾರ ಸುಭದ್ರವಾಗಿದೆ ಎಂದು ತಿರುಗೇಟು ನೀಡಿದರು.
ಬಿಜೆಪಿ,ಜೆಡಿಎಸ್ ನಿಂದಲೇ ನಮ್ಮ ಕಡೆಗೆ ಬರುವವರು ತಯಾರಿದ್ದಾರೆ- ಸಚಿವ ಕೆ.ವೆಂಕಟೇಶ್
ಈ ಕುರಿತು ಮಾತನಾಡಿದ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಬಿಜೆಪಿ, ಜೆಡಿಎಸ್ ನಿಂದಲೇ ನಮ್ಮ ಕಡೆಗೆ ಬರುವವರು ತಯಾರಿದ್ದಾರೆ. ನಾವೇನೂ ಕರೆಯುತ್ತಿಲ್ಲ. ಅವರಾಗಿ ಅವರೇ ನಮ್ಮ ಕಡೆ ಬರುತ್ತಿದ್ದಾರೆ. ಇನ್ನೂ ಈ ಸ್ಥಿತಿಯಲ್ಲಿ ಸರ್ಕಾರ ಹೇಗೆ ಅಸ್ಥಿರವಾಗುತ್ತದೆ. ನೂರು ಸುಳ್ಳು ಹೇಳಿ ಒಂದು ಸತ್ಯ ಮಾಡಲು ಹೊರಟಿದ್ದಾರೆ. ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ.ಹೇಗಾದರೂ ಸರಿ ಈ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು ಬಿಜೆಪಿಯವರು ಪ್ರಯತ್ನ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
Key words: mysore dasara-Gajapayan – September 1 – Minister -HC Mahadevappa.