ಬೆಂಗಳೂರು:ಆ-31: ಖಾಸಗಿ ಅಭ್ಯರ್ಥಿಯಾಗಿ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಇಚ್ಛಿಸುತ್ತಿರುವ ಅಭ್ಯರ್ಥಿಗಳೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಪರೀಕ್ಷೆ ಪೂರೈಸಿರುವ ಅಭ್ಯರ್ಥಿಗಳು ವಯೋಮಿತಿ ಆಧಾರದಲ್ಲಿ ನೇರವಾಗಿ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಅವಕಾಶವಿದೆ.
ಆದರೆ, ಇದಕ್ಕೆ ಪದವಿಪೂರ್ವ ಶಿಕ್ಷಣ ಇಲಾಖೆ ಕೆಲ ಷರತ್ತುಗಳನ್ನು ವಿಧಿಸಿದೆ. ಅವುಗಳಲ್ಲಿ ಕೆಲವೊಂದು ಅಭ್ಯರ್ಥಿಗಳಿಗೆ ಪೂರಕವಾಗಿದ್ದರೆ, ಇನ್ನು ಹಲವು ಮಾರಕವಾಗಿವೆ. ಹೀಗಾಗಿ ಖಾಸಗಿ ಅಭ್ಯರ್ಥಿಗಳು ಸರ್ಕಾರಿ ಪಿಯು ಕಾಲೇಜಿನಲ್ಲಿ ಪರೀಕ್ಷೆಗೆ ನೋಂದಾಯಿಸಿಕೊಳ್ಳಲಾಗದ ಗೊಂದಲಕ್ಕೆ ಸಿಲುಕಿದ್ದಾರೆಂದು ಸರ್ಕಾರಿ ಕಾಲೇಜಿನ ಉಪನ್ಯಾಸಕರೊಬ್ಬರು ಮಾಹಿತಿ ನೀಡಿದರು.
ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಹಾಗೂ ಅರೇಬಿಕ್ ಭಾಷಾ ವಿಷಯ ಮತ್ತು ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ರಾಜ್ಯಶಾಸ್ತ್ರ, ಶಿಕ್ಷಣ, ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಸಂಖ್ಯಾಶಾಸ್ತ್ರ, ಮೂಲ ಗಣಿತ ವಿಷಯಗಳನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಳ್ಳಲು ಅವಕಾಶವಿದೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆಯಲು ಖಾಸಗಿ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ ಎಂದು ನಿಯಮ ಸ್ಪಷ್ಟವಾಗಿ ತಿಳಿಸುತ್ತದೆ.
ಎರಡು ಭಾಷಾ ವಿಷಯ ಹಾಗೂ ನಾಲ್ಕು ಐಚ್ಛಿಕ ವಿಷಯ ಸೇರಿ 6 ವಿಷಯಗಳಲ್ಲಿ ಖಾಸಗಿ ಅಭ್ಯರ್ಥಿ ಪರೀಕ್ಷೆ ಬರೆಯಬೇಕಾದರೆ ಕಡ್ಡಾಯವಾಗಿ ಸರ್ಕಾರಿ ಕಾಲೇಜಿನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಅಭ್ಯರ್ಥಿಯು ಆಯ್ಕೆ ಮಾಡಿಕೊಂಡಿರುವ ವಿಷಯ ಆ ಕಾಲೇಜಿನಲ್ಲಿ ಭೋಧನಾ ವಿಷಯವಾಗಿದ್ದರೆ ಮಾತ್ರ ನೋಂದಣಿ ಮಾಡಿಕೊಳ್ಳಲು ಸಾಧ್ಯ. ಆ ವಿಷಯವು ಬೋಧನಾ ವಿಷಯವಾಗಿಲ್ಲದೇ ಇದ್ದರೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ.
ಅದೇ ರೀತಿ ಖಾಸಗಿ ಅಭ್ಯರ್ಥಿ ತನ್ನ ಖಾಯಂ ವಿಳಾಸ ಎಲ್ಲಿ ಹೊಂದಿರುತ್ತಾನೋ ಅಲ್ಲಿಯೇ ಸಮೀಪವಿರುವ ಸರ್ಕಾರಿ ಕಾಲೇಜಿನಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಬೇಕು. ಖಾಸಗಿ ಅಭ್ಯರ್ಥಿ ಬರೆಯಬೇಕೆಂದಿರುವ ವಿಷಯ ಸ್ಥಳೀಯ ಕಾಲೇಜಿನಲ್ಲಿ ಬೋಧನಾ ವಿಷಯವಾಗಿಲ್ಲದೇ ಇದ್ದರೆ ಅಂತಹ ಅಭ್ಯರ್ಥಿ ಬೇರೆ ಕಾಲೇಜಿಗೆ ಹೋಗಲು ಸಾಧ್ಯವಿಲ್ಲ ಮತ್ತು ಸ್ಥಳೀಯ ಕಾಲೇಜಿಲ್ಲಿ ನೋಂದಾಯಿಸಿಕೊಳ್ಳಲು ಸಾಧ್ಯವಿಲ್ಲದಂತೆ ನಿಯಮ ರೂಪಿಸಲಾಗಿದೆ ಎಂದು ಖಾಸಗಿ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಇಲಾಖೆಯ ಅಧಿಕಾರಿಗಳಲ್ಲೂ ಸ್ಪಷ್ಟವಾದ ಮಾಹಿತಿ ಇಲ್ಲ. ಪರೀಕ್ಷಾ ವಿಭಾಗದ ಜಂಟಿ ನಿರ್ದೇಶಕರು ಮತ್ತು ಸಹ ನಿರ್ದೇಶಕರು ನಮ್ಮ ಮನವಿಗೂ ಸ್ಪಂದಿಸುತ್ತಿಲ್ಲ ಎಂದು ಖಾಸಗಿ ಅಭ್ಯರ್ಥಿಗಳು ಆರೋಪಿಸಿದ್ದಾರೆ. ಖಾಸಗಿ ಅಭ್ಯರ್ಥಿಗಳ ಅರ್ಜಿಗಳಿಗೂ ಆನ್‌ಲೈನ್ ಕ್ರಮಾಂಕ ನೀಡಲಾಗುತ್ತದೆ. ಆಧಾರ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕು.
17 ವರ್ಷ ಪೂರ್ತಿಯಾಗಿರುವ ಪಿಯು ಅನುತ್ತೀರ್ಣರಾಗಿರುವ, ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ, ಸಿಬಿಎಸ್ಸಿ, ಐಸಿಎಸ್ಸಿ 10ನೇ ತರಗತಿ ಮುಗಿಸಿದ ನಂತರ ಶಿಕ್ಷಣ ಮುಂದುವರಿಸದವರು ಖಾಸಗಿ ಅಭ್ಯರ್ಥಿಯಾಗಿ ಸೇರಿಕೊಳ್ಳಲು ಇಲಾಖೆಯ ಅವಕಾಶ ನೀಡಿದೆ. ಆದರೆ, ಪರೀಕ್ಷೆಗೆ ನೋಂದಾಣಿ ಮಾಡಿಕೊಳ್ಳುವಲ್ಲಿ ನೀಡಿರುವ ಕೆಲವೊಂದು ಷರತ್ತುಗಳು ಉಪನ್ಯಾಸಕರಿಗೆ, ಪ್ರಾಂಶುಪಾಲರಿಗೆ ಮತ್ತು ಖಾಸಗಿ ಅಭ್ಯರ್ಥಿಗಳಿಗೆ ಕಗ್ಗಂಟಾಗಿದೆ ಎಂದು ಪ್ರಾಂಶುಪಾಲರೊಬ್ಬರು ಮಾಹಿತಿ ನೀಡಿದರು.
ಹೊಸ ನಿಯಮ ಹೇಳುವುದೇನು?: ಖಾಸಗಿ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಳ್ಳುವ ಕಾರ್ಯ ಈಗ ಆರಂಭವಾಗಿದೆ. ರೆಗ್ಯುಲರ್ ಅಥವಾ ರಿಪೀಟರ್ ಅಭ್ಯರ್ಥಿಗಳಾಗಿ 2020ರ ವಾರ್ಷಿಕ ಪರೀಕ್ಷೆ ಬರೆಯುವವರು ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಈ ರೀತಿ ನೋಂದಣಿಮಾಡಿಸಿಕೊಂಡಲ್ಲಿ ಪ್ರಾಂಶುಪಾಲರ ವಿರುದ್ಧ ಇಲಾಖೆ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ.
ಖಾಸಗಿ ಅಭ್ಯರ್ಥಿಯನ್ನು ನೋಂದಾಯಿಸಿಕೊಳ್ಳುವಾಗ ಆ ಸರ್ಕಾರಿ ಪಿಯು ಕಾಲೇಜಿನಲ್ಲಿ ಬೋಧಿಸುತ್ತಿರುವ ಹಾಗೂ ಇಲಾಖೆ ನಿಗದಿಪಡಿಸಿರುವ ವಿಷಯಗಳನ್ನು ಮಾತ್ರ ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕು. ಇದರಲ್ಲಿ ಬದಲಾವಣೆಯಾದರೂ ಪ್ರಾಂಶುಪಾಲರೇ ಜವಾಬ್ದಾರರಾಗುತ್ತಾರೆ. ಜತೆಗೆ ಖಾಸಗಿ ಅಭ್ಯರ್ಥಿ ಆಯ್ಕೆ ಮಾಡಿಕೊಂಡ ಭಾಷೆ ಮತ್ತು ಐಚ್ಛಿಕ ವಿಷಯಗಳ ಬಗ್ಗೆ ಒಂದು ಪ್ರತ್ಯೇಕ ಮುತ್ಛಳಿಕೆ ಪತ್ರವನ್ನು ಕಡ್ಡಾಯವಾಗಿ ಬರೆಸಿಕೊಂಡು, ಅರ್ಜಿಯ ಜತೆಗೆ ಇದನ್ನು ಕಳುಹಿಸಲು ಪ್ರಾಂಶುಪಾಲರಿಗೆ ಇಲಾಖೆ ನಿರ್ದೇಶನ ನೀಡಿದೆ.
ಕೃಪೆ:ಉದಯವಾಣಿ