ಬೆಂಗಳೂರು,ಆಗಸ್ಟ್,23,2023(www.justkannada.in): ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ನೆಲ, ಜಲ ವಿಚಾರವಾಗಿ ನಾವು ರಾಜಕೀಯ ಬಿಟ್ಟು ಸಲಹೆ ಕೊಟ್ಟಿದ್ದೇವೆ. ತಮಿಳುನಾಡು ಸರ್ಕಾರದ ವಿರುದ್ಧ ಪ್ರಬಲ ವಾದ ಮಂಡಿಸಬೇಕಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸರ್ವಪಕ್ಷ ಸಭೆ ಬಳಿಕ ಮಾತನಾಡಿದ ಮಾಜಿಸಿಎಂ ಬಸವರಾಜ ಬೊಮ್ಮಾಯಿ, ಮೊದಲ ಹಂತದಲ್ಲಿ ಸರ್ಕಾರ ಕೆಲವು ಕಡೆ ಎಡವಿದೆ. ಅದನ್ನು ಹೇಳಿದ್ದೇವೆ, ಆದರೆ ಅದನ್ನು ಅವರು ಒಪ್ಪಿಲ್ಲ. ಆದರೂ 10 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿದ್ದು ತಪ್ಪು. ಸುಪ್ರೀಂಕೋರ್ಟ್ ನಲ್ಲಿ ಮನವರಿಕೆ ಮಾಡಿಕೊಡಲು ತಿಳಿಸಿದ್ದೇವೆ ಎಂದರು.
ರಾಜ್ಯದಲ್ಲಿ ಇರುವ ಸ್ಥಿತಿಯನ್ನು ತಿಳಿಸಬೇಕು ಅಂತ ಹೇಳಿದ್ದೇವೆ. ನೆಲ, ಜಲ ವಿಚಾರವಾಗಿ ನಾವು ರಾಜಕೀಯ ಬಿಟ್ಟು ಸಲಹೆ ಕೊಟ್ಟಿದ್ದೇವೆ. ಅದನ್ನು ಸರ್ಕಾರ ಸ್ವೀಕಾರ ಮಾಡಿ ಕೆಲಸ ಮಾಡುವಂತೆ ಹೇಳಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದರು.
ಮಹದಾಯಿ ಮತ್ತು ಮೇಕೆದಾಟು ವಿಚಾರವಾಗಿ ಹೆಚ್ಚು ಚರ್ಚೆ ಆಗಿಲ್ಲ. ಕೊನೆಯಲ್ಲಿ ಸಿಎಂ ಇದರ ಬಗ್ಗೆ ಚರ್ಚೆ ಮಾಡಿದರು. ಪ್ರಧಾನಿ ಬಳಿ ನಿಯೋಗ ಹೋಗೋಣ ಅಂದರು. ಆದರೆ ನಾವು ಎರಡು ಪ್ರಕರಣ ಕೋರ್ಟ್ನಲ್ಲಿ ಇದೆ, ಕೋರ್ಟ್ನಲ್ಲಿ ಇರುವಾಗ ನಿಯೋಗ ಹೋಗುವುದು ಸರಿಯಲ್ಲ ಅಂತ ಹೇಳಿದ್ದೇವೆ. ಕೋರ್ಟ್ನಲ್ಲಿ ಸರಿಯಾಗಿ ಇದರ ಬಗ್ಗೆ ಪ್ರಕ್ರಿಯೆ ನಡೆಸಿ ಅಂತ ಸಲಹೆ ಕೊಟ್ಟಿದ್ದೇವೆ ಎಂದು ಮಾಜಿ ಸಿಎಂ ಬೊಮ್ಮಾಯಿ ತಿಳಿಸಿದರು.
Key words: Cauvery dispute- present – strong – against – Tamil Nadu – Former CM Bommai.