ಭೋಪಾಲ್: ಆ-31:(www.justkannada.in) ಪತಿಯ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಗೀಳಿಗೆ ಬೇಸತ್ತ ಪತ್ನಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೆಟ್ತಿಲೇರಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ಯುಪಿಎಸ್‍ಸಿ ಹಾಗೂ ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಪತಿ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಇದರಿಂದ ಪತಿ ಸದಾ ತನ್ನನ್ನು ನಿರ್ಲಕ್ಷಿಸುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆ ವಿಚಾರ ಬಿಟ್ಟು ಬೇರೆ ವಿಷಯಗಳತ್ತ ಗಮನಹರಿಸುತ್ತಿಲ್ಲ ಎಂದು ಪತ್ನಿ ಆರೋಪಿಸಿದ್ದಾಳೆ ಎಂದು ಕುಟುಂಬ ಸಮಾಲೋಚನೆ ಅಧಿವೇಶನ ನಡೆಸುತ್ತಿರುವ ಮಧ್ಯಪ್ರದೇಶದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ(ಡಿಎಲ್‍ಎಸ್‍ಎ)ದ ಸಲಹೆಗಾರರು ಮಾಹಿತಿ ನೀಡಿದ್ದಾರೆ.
ಪರೀಕ್ಷೆ ಸಿದ್ಧತೆಗಳನ್ನು ಬಿಟ್ಟರೆ ಪತ್ನಿಯ ಬೇಕು ಬೇಡಗಳಿಗಾಗಲೀ, ಆಕೆಯನ್ನು ಶಾಪಿಂಗ್, ಸಿನಿಮಾ, ಹೊರಗೆ ಕರೆದುಕೊಂಡು ಹೋಗುವುದಾಗಲಿ, ಆಕೆಯ ಸಂಬಂಧಿಕರಮನೆಗಳಿಗೆ ಹೋಗುವುದಾಗಲಿ ಏನನ್ನೂ ಮಾಡುವುದಿಲ್ಲ. ಕೊನೆ ಪಕ್ಷ ತನ್ನ ಜತೆಗೆ ಮಾತನಾಡುವುದೂ ಇಲ್ಲ, ಪತಿಯತ್ತ ತಾನು ಹಲವುಬಾರಿ ತೆರಳಿದರೂ ನಿರ್ಲಕ್ಷ್ಯವಹಿಸುತ್ತಿದ್ದಾನೆ ಎಂದು ಇದರಿಂದ ಬೇಸತ್ತು ತಾನು ವಿಚ್ಛೇದನಕ್ಕೆ ನಿರ್ಧರಿಸಿದ್ದಾಗಿ ಪತ್ನಿ ಕೌನ್ಸಲರ್ ಬಳಿ ಹೇಳಿಕೆ ನೀಡಿದ್ದಾಳೆ.
ಆಕೆಯ ಪತಿಯು ಈಗಾಗಲೇ ಪಿಎಚ್‍ಡಿ ಪದವಿ ಪಡೆದಿದ್ದು, ಅವರ ತಂದೆ, ತಾಯಿಗೆ ಒಬ್ಬನೇ ಮಗ. ಹೆತ್ತವರಲ್ಲಿ ಒಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಪೋಷಕರ ಒತ್ತಾಯದ ಮೇರೆಗೆ ಆತ ಮದುವೆ ಆಗಿದ್ದ.
ಕೌನ್ಸಿಲಿಂಗ್‍ಗಾಗಿ ಆಕೆಯ ಪತಿಯನ್ನು ಕೂಡ ಕರೆಸಲಾಗಿದ್ದು, ಆತ ತನ್ನ ಪತ್ನಿ ವಿರುದ್ಧ ಯಾವುದೇ ಆರೋಪ ಮಾದುತ್ತಿಲ್ಲ. ಆದರೆ ತನಗೆ ಯುಪಿಎಸ್ ಸಿ ಪರೀಕ್ಷೆ ಬರೆಯುವುದು ತನ್ನ ಬಲ್ಯದ ಕನಸು. ಇದೇಕಾರಣಕ್ಕಾಗಿ ಪರೀಕ್ಷೆ ಸಿದ್ಧತೆಗಾಗಿ ಹೆಚ್ಚು ಗಮನಕೊಡುತ್ತಿದ್ದೇಎ ಹೊರತು ಬೇರಾವ ಕಾರಣಕ್ಕೂ ಅಲ್ಲ ಎಂದು ಆತ ಸ್ಪಷ್ಟಪಡಿಸಿದ್ದಾನೆ. ಅವರು ತಮ್ಮ ವೈವಾಹಿಕ ಜೀವನವನ್ನು ಅಸ್ಥಿರವಾಗಿದ್ದು, ಅದು ಇನ್ನಷ್ಟು ಜಟಿಲವಾಗುವುದನ್ನು ತಾನು ಬಯಸುವುದಿಲ್ಲ ಎಂದು ಸಲಹೆಗಾರರ ಬಳಿ ತಿಳಿಸಿದ್ದಾರೆ.
ನ್ಯಾಯಾಲಯವು ಪ್ರಕರಣದ ವಿಚಾರಣೆ ಆರಂಭಿಸುವುದಕ್ಕೂ ಮುನ್ನ ಪತಿ-ಪತ್ನಿ ನಡುವೆ ಇನ್ನೂ ನಾಲ್ಕು ಸುತ್ತು ಸಮಾಲೋಚನೆ ನಡೆಯಬೇಕಿದ್ದು, ಅವರ ಮದುವೆಯ ಬಂಧವನ್ನು ಉಳಿಸಲು ನಾವು ಪ್ರಯತ್ನಿಸುತ್ತೇವೆ. ಅಲ್ಲದೇ ಇನ್ನಷ್ಟು ಸಮಗಳನ್ನು ತೆಗೆದುಕೊಂಡು ಪತಿ-ಪತ್ನಿ ಪರಸ್ಪರ ಅರ್ಥಮಾಡಿಕೊಳ್ಳಲು ಯತ್ನಿಸುವಂತೆ ಸಲಹೆ ನೀಡಿದ್ದಾಗಿ ಕಾನೂನು ಸೇವಾ ಪ್ರಾಧಿಕಾರದ ಸಲಹೆಗಾರರು ತಿಳಿಸಿದ್ದಾರೆ.