ಮೈಸೂರು,ಆಗಸ್ಟ್,30,2023(www.justkannada.in): ಐದು ಗ್ಯಾರಂಟಿ ಈಡೇರಿಸಲು ಆಗಲ್ಲ ಅಂತ ಪ್ರಧಾನಿ ಮೋದಿ, ಜೆಡಿಎಸ್ ನವರು ಹೇಳುತ್ತಿದ್ದರು. ಯಾರು ಏನೇ ಹೇಳಿದ್ರೂ ಕಾಂಗ್ರೆಸ್ ನುಡಿದಂತೆ ನಡೆದಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಈ ತಿಂಗಳು 27ಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳು ತುಂಬುತ್ತಿದೆ. ಈ ಸಂದರ್ಭದಲ್ಲಿ ನಾವು 100 ದಿನ ಸಾಧನೆ ತಿಳಿಸಲು ಸಣ್ಣ ಕೈಪಿಡಿ ಮಾಡಿದ್ದೇವೆ. ನಮ್ಮ ಸಾಧನೆ ಒಳಗೊಂಡ ಪುಸ್ತಕ ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ದಾರೆ. ಹಿಂದೆ ಯಾವ ಸರ್ಕಾರ ಕೂಡ ಕೊಟ್ಟ ಮಾತಿನಂತೆ ನಡೆದುಕೊಂಡಿರಲಿಲ್ಲ. ಅನೇಕ ಭರವಸೆಯನ್ನು ಚುನಾವಣಾ ಸಂದರ್ಭದಲ್ಲಿ ಜನರ ಮುಂದೆ ಇಟ್ಟಿದ್ದೇವು. ಕೊಟ್ಟ ಮಾತಿನಂತೆ ಕಳೆದ ಬಾರಿ ಇದ್ದ ವೇಳೆಯೂ ಕೊಟ್ಟ ಭರವಸೆ ಈಡೆರಿಸಿದ್ದೇವೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದರು.
ಮುಂದಿನ ಐದು ವರ್ಷಗಳಲ್ಲಿ ನಾವು ನೂರಕ್ಕೆ ನೂರರಷ್ಟು ಭರವಸೆ ಈಡೇರಿಸುತ್ತೇವೆ. ಕರ್ನಾಟಕದಲ್ಲಿ 1 ಕೋಟಿ 26 ಲಕ್ಷ ಕುಟುಂಬಗಳು ಇವೆ. ನೊಂದಣಿ ಆಗಿರುವ ಕುಟುಂಬ 1 ಕೋಟಿ 10 ಲಕ್ಷ. ಈ ಕುಟುಂಬದ ಯಜಮಾನಿಗೆ 2 ಸಾವಿರ ರೂ. ಅಕೌಂಟ್ ಗೆ ಜಮಾ ಮಾಡುವ ಕೆಲಸ ಮಾಡಿದ್ದೇವೆ. ಭಾರತದಲ್ಲಿ ಯಾವ ರಾಜ್ಯವೂ ಕೂಡ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಕೊಡುವ ಕೆಲಸ ಮಾಡಿಲ್ಲ. ಬಡವರಿಗೆ ತಿಂಗಳಿಗೆ 2 ಸಾವಿರ ವರ್ಷಕ್ಕೆ 24 ಸಾವಿರ ಹಣ ಜಮೆ ಮಾಡಲಾಗುತ್ತಿದೆ. ಇಷ್ಟೊಂದು ದೊಡ್ಡ ಮೊತ್ತ ಹಣ ಹಾಕ್ತಿರೋದು ನಮ್ಮ ಸರ್ಕಾರ ಬಿಟ್ಟರೇ ಬೇರಾವುದೇ ಸರ್ಕಾರ ದೇಶದಲ್ಲಿ ಮಾಡುತ್ತಿಲ್ಲ ಎಂದು ಶ್ಲಾಘಿಸಿದರು.
ಐದು ಗ್ಯಾರಂಟಿ ಈಡೇರಿಸಲು ಆಗಲ್ಲ ಅಂತಾ ಮೋದಿ, ಜೆಡಿಎಸ್ ನವರು ಹೇಳುತ್ತಿದ್ದರು. ನಾವು ನಾಲ್ಕು ಗ್ಯಾರಂಟಿ ಜಾರಿ ಮಾಡಿದ್ದೇವೆ. ಐದನೇ ಗ್ಯಾರಂಟಿ ಯುವನಿಧಿ ಡಿಸೆಂಬರ್, ಜನವರಿಯಲ್ಲಿ ಜಾರಿ ಮಾಡ್ತೇವೆ. ಆದರೆ ಕರ್ನಾಟಕ ರಾಜ್ಯ ದಿವಾಳಿ ಆಗಲಿಲ್ಲ ಎಲ್ಲ ಕಾರ್ಯಕ್ರಮಗಳು ನಿಂತಿಲ್ಲ. 56 ಸಾವಿರ ಕೋಟಿ ಹಣ ಐದು ಗ್ಯಾರಂಟಿಗೆ ಬೇಕಿದೆ. ಕಾಂಗ್ರೆಸ್ ಪಕ್ಷ ಯಾವತ್ತೂ ಬಡವರು, ಹಿಂದುಳಿದ ಅಲ್ಪಸಂಖ್ಯಾತ, ರೈತರು ಕಾರ್ಮಿಕ ಜೊತೆಗೆ ಇರುವ ಪಕ್ಷ ಅನ್ನೋದನ್ನ ನಮ್ಮ ಸರ್ಕಾರ ಸಾಬೀತು ಮಾಡಿದೆ ಎಂದು ತಿಳಿಸಿದರು.
Key words: Inauguration -ceremony – Grihalahakshmi Yojana-mysore-CM Siddaramaiah