ಮೈಸೂರು,ಸೆಪ್ಟಂಬರ್,11,2023(www.justkannada.in): 2023-24ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗೆ ಯುಜಿಸಿಯಿಂದ ಅಧಿಕೃತ ಮಾನ್ಯತೆ ಪತ್ರ ದೊರೆಯದಿದ್ದರೂ ಸಹ ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾಲಯವು (ಕೆಎಸ್‌ಒಯು) ವಿದ್ಯಾರ್ಥಿಗಳಿಗೆ ಪ್ರವೇಶಾತಿ ಆರಂಭಿಸಿ ಸಮಸ್ಯೆ ಸೃಷ್ಟಿಸುತ್ತಿದೆ’ ಎಂದು ವಿಶ್ವ ವಿದ್ಯಾನಿಲಯದ ಹಳೆಯ ವಿದ್ಯಾರ್ಥಿ ಎ.ಎಸ್ ನಂದೀಶ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯು.ಜಿ.ಸಿ ಮಾನ್ಯತೆ ಇರದಿದ್ದರೂ ಯು.ಜಿ.ಸಿ ಆದೇಶದ ವಿರುದ್ಧವಾಗಿ 2013-14 ಹಾಗೂ 2014-15ನೇ ಸಾಲಿನಲ್ಲಿ ಸಹಭಾಗಿತ್ವ ಸಂಸ್ಥೆಗಳಲ್ಲಿ (collaboration Institutions) Technical, Professional, Para medical ಕೋರ್ಸ್‌ಗಳನ್ನು ನಡೆಸುತ್ತಿದ್ದರಿಂದ ಜೂನ್ 2015ರಲ್ಲಿ 2013-14 ಹಾಗೂ 2014-2015ನೇ ಸಾಲಿನ ಪೂರ್ವಾನ್ವಯವಾಗುವ ಹಾಗೆ (Retrospective) ಮಾನ್ಯತೆಯನ್ನು ಹಿಂಪಡೆಯಿತು. ಇದರಿಂದ ನಾವು ಕೆ.ಎಸ್.ಒ.ಯುನಲ್ಲಿ ನೇರವಾಗಿ ಪ್ರವೇಶಾತಿ(In House) ಪಡೆದಿದ್ದರೂ ಹಾಗೂ ನಮ್ಮ ಕೋರ್ಸ್ (ನನ್ನದು ಎಂ ಎ ಅರ್ಥಶಾಸ್ತ್ರ) ನಾನ್ ಟೆಕ್ನಿಕಲ್ ಆಗಿದ್ದರೂ ಕೆಎಸ್‌ಒಯು ಮಾಡಿದ ತಪ್ಪಿಗೆ ನಮ್ಮ ಪದವಿಗಳೂ ಸಹಾ ಮಾನ್ಯತೆ ಕಳೆದುಕೊಂಡವು.
ಈಗ ಪ್ರವೇಶಾತಿಗೆ ಸಂಬಂಧಿಸಿದಂತೆ ಯುಜಿಸಿಯು ಇಮೇಲ್ ಪತ್ರಗಳಲ್ಲಿ ಶಿಫಾರಸ್ಸು ಮಾಡಿದ್ದು ಅದರ ಆಧಾರದ ಮೇಲೆ ಪ್ರವೇಶಾತಿ ಆರಂಭವಿಸಿದ್ದೇವೆ ಎಂದು ವಿವಿ ಹೇಳುತ್ತಿದೆ ಆದರೆ ಈ ಶಿಫಾರಸು ಅಧಿಕೃತವಾಗದೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಏಕೆ ಚೆಲ್ಲಾಟವಾಡಬೇಕು ಎಂದು ನಂದೀಶ್ ಪ್ರಶ್ನಿಸಿದರು.
ನನ್ನನ್ನೂ ಸೇರಿದಮತೆ 95 ಸಾವಿರ ವಿದ್ಯಾರ್ಥಿಗಳು 2013-14 ಹಾಗೂ 2014-15ರಲ್ಲಿ ಕೆಎಸ್ ಒಯುನಲ್ಲಿ ವ್ಯಾಸಂಗಕ್ಕೆ ಸೇರಿ ಯುಜಿಸಿ ಮಾನ್ಯತೆ ಇಲ್ಲದೇ ವಂಚನೆಗೀಡಾಗಿದ್ದೇವೆ. ಇನ್ನೂ ಪದವಿ ಪತ್ರ ದೊರೆಯದೇ ಸಂಕಷ್ಟಕ್ಕೆ ಸಿಲುಕಿದ್ದೇವೆ. ಇದೇ ಸಮಸ್ಯೆ ಮತ್ತೆ ಮರುಕಳಿಸುವ ಸಾಧ್ಯತೆ ಇದೆ. ಹೀಗಾಗಿ ಕೆಎಸ್ ಒಯು ಪ್ರವೇಶಾತಿಗೂ ಮುನ್ನ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು. ಅಧಿಕೃತವಾಗಿ ಮಾನ್ಯತೆ ಇಲ್ಲದೇ ಕೇವಲ ಶಿಫಾರಸ್ಸುಗಳ ಆಧಾರದಲ್ಲಿ ಪ್ರವೇಶಾತಿ ನೀಡುತ್ತಿರುವ ಕುಲಪತಿ, ಕುಲಸಚಿವ ಹಾಗೂ ಪರೀಕ್ಷಾಂಗ ಕುಲಸಚಿವರ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿ ವೇಳೆ ಪ್ರವೇಶಾತಿಗೆ ಇಚ್ಛಿಸುವ ವಿದ್ಯಾರ್ಥಿ ಎಸ್.ಜಿ ಚೇತನ್ ಮತ್ತು ಬಿ.ಜೆ ಸಂದೀಪ್ ಉಪಸ್ಥಿತರಿದ್ದರು.
Key words: KSOU- admission- lack – official recognition – UGC- Allegation