2007ರ ನಿಯಮದಂತೆ ಶಿಕ್ಷಕರ ವರ್ಗಾವಣೆ : ಕೋರ್ಟ್ ಗೆ ಸ್ಪಷ್ಟಪಡಿಸಿದ ಹೆಚ್ಚುವರಿ ಅಡ್ವೋಕೇಟ್ ಜನರಲ್

 

ಬೆಂಗಳೂರು, ಸೆ. 02 , 2019 : ( www.justkannada.in news ) ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಕೌನ್ಸೆಲಿಂಗ್ ವರ್ಗಾವಣೆಯನ್ನು 2007 ರ ವರ್ಗಾವಣೆ ನಿಯಮದಂತೆ ಮಾಡುವುದಾಗಿ ನ್ಯಾಯಾಲಯಕ್ಕೆ ಸರಕಾರ ಹೇಳಿಕೆ ನೀಡಿದೆ.
ಈ ಸಂಬಂಧ ಸರಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರು ಕೋರ್ಟ್ ಗೆ ಹೇಳಿಕೆ ನೀಡಿದ್ದು, ಅದರ ಪ್ರಕಾರವೇ ಅಂದ್ರೆ 2007 ರ ವರ್ಗಾವಣೆ ನೀತಿ-ನಿಯಮದಂತೆಯೇ ಶಿಕ್ಷಕರ ಟ್ರಾನ್ಸ್ ಫರ್ ಪ್ರಕ್ರಿಯೆ ನಡೆಯಬೇಕಾಗಿದೆ. ಕೋರ್ಟ್ ಗೆ ಹೇಳಿಕೆ ನೀಡಿರುವ ಹೇಳಿಕೆಗೆ ವಿರುದ್ಧವಾಗಿ ರಾಜ್ಯ ಸರಕಾರ ಶಿಕ್ಷಕರ ವರ್ಗಾವಣೆ ಮಾಡಿದಲ್ಲಿ ಅದು ಕಾನೂನು ಉಲ್ಲಂಘನೆಯಾಗಿ ‘ ಕಂಟೆಪ್ಟ್ ಆಫ್ ಕೋರ್ಟ್ ‘ ಭೀತಿ ಎದುರಿಸುವ ಅಪಾಯ ತಲೆ ದೋರಲಿದೆ.
ಶಿಕ್ಷಕರ ವರ್ಗಾವಣೆ ಗೊಂದಲ ನಿವಾರಣೆಗಾಗಿ ವರ್ಗಾವಣೆ ಪ್ರಕ್ರಿಯೆಯನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೂ ತಡೆ ಹಿಡಿಯಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಳೆದ ವಾರವಷ್ಟೆ ಆದೇಶಿಸಿದ್ದರು. ಇದೀಗ ಸೆ. 3 ರಂದು ಈ ಸಂಬಂಧ ಅಂತಿಮ ನಿರ್ಧಾರದ ಆದೇಶ ಹೊರಡಿಸಲಾಗುವುದು ಎಂದು ಸಚಿವರು ಆಶ್ವಾಸನೆ ನೀಡಿದ್ದಾರೆ.
ಈ ನಡುವೆ ಸರಕಾರದ ವರ್ಗಾವಣೆಯಲ್ಲಿನ ತಾರತಮ್ಯ ಧೋರಣೆ ಪ್ರಶ್ನಿಸಿ ಕೆಲ ಶಿಕ್ಷಕರು ಕೋರ್ಟ್ ಮೆಟ್ಟಿಲು ಹತ್ತಿದ್ದರು. 10 ವರ್ಷ ಪೂರೈಸಿದ ಶಿಕ್ಷಕರನ್ನ ಕಡ್ಡಾಯ ವರ್ಗಾವಣೆ ಮಾಡುವ ವೇಳೆ ಯಾವುದೇ ವಿನಾಯಿತಿ ನೀಡಬಾರದು. ಸೇವೆ ಸಲ್ಲಿಸಿರುವ ವರ್ಷವೇ ಮಾನದಂಡವಾಗಬೇಕು ಎಂದು ಅರ್ಜಿಯಲ್ಲಿ ವಿನಂತಿಸಿದ್ದರು. ಶಿಕ್ಷಕರ ಮನವಿ ಆಲಿಸಿದ ನ್ಯಾಯಾಲಯ, ವರ್ಗಾವಣೆ ವೇಳೆ ಶಿಕ್ಷಕರ ಬೇಡಿಕೆಯನ್ನು ಸೂಕ್ತವಾಗಿ ಪರಿಗಣಿಸುವಂತೆ ಹೇಳಿದೆ. ಜತೆಗೆ ನ್ಯಾಯಾಲಯಕ್ಕೆ ತಿಳಿಸಿರುವಂತೆ 2007 ರ ವರ್ಗಾವಣೆ ನೀತಿ-ನಿಯಮದಂತೆಯೇ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆಯೂ ಸೂಚಿಸಿದೆ.

teachers-transfer-court-2007-actteachers-transfer-court-2007-act

ಏನಿದು ವಿವಾದ :
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ 10 ವರ್ಷ ಸೇವೆ ಪೂರೈಸಿರುವ ಶಿಕ್ಷಕರನ್ನು ಕಡ್ಡಾಯ ವರ್ಗಾವಣೆ ಮಾಡುವುದು ಸೇರಿತ್ತು. ಆದರೆ ಕೆಲ ಪಟ್ಟಭದ್ರರ ಕಾರಣದಿಂದ, ಕಡ್ಡಾಯ ವರ್ಗಾವಣೆ ಮಾರ್ಗಸೂಚಿಗೆ ನಿಯಮ ಬಾಹಿರವಾಗಿ ಬದಲಾವಣೆ ತರಲಾಯಿತು. ಇದರಿಂದ ಕಡ್ಡಾಯ ವರ್ಗಾವಣೆಯಲ್ಲಿ ‘ವಿನಾಯಿತಿ’ ಸವಲತ್ತು ಪಡೆಯುವವರು ಹೆಚ್ಚಾದರು. ಕಡ್ಡಾಯ ವರ್ಗಾವಣೆ ಅನ್ನೋದು ಎಲ್ಲರಿಗೂ ಆಗಲಿ. ಯಾರು A ವಲಯದಲ್ಲಿ 10 ವರ್ಷ ಸೇವೆ ಸಲ್ಲಿಸಿರುತ್ತಾರೋ ಅವರು ಸಿನಿಯಾರಿಟಿ ಪ್ರಕಾರ ಸಿ ಮತ್ತು ಬಿ ವಲಯಕ್ಕೆ ವರ್ಗಾವಾಗಬೇಕು ಎಂಬುದು ಅನ್ಯಾಯಕ್ಕೊಳಗಾದ ಶಿಕ್ಷಕರ ಆಗ್ರಹ

2007 ರ ನಿಯಮದಲ್ಲಿ ಏನಿದೆ..?
ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ 2007 ರಲ್ಲಿ ಜಾರಿಗೆ ತಂದ ವರ್ಗಾವಣೆ ನೀತಿ-ನಿಯಮದ ಪ್ರಕಾರ, ಶಿಕ್ಷಕರ ಸೇವಾವಧಿಯ ಆಧಾರದ ಮೇಲೆ ಆಧ್ಯತಾಪಟ್ಟಿ ತಯಾರಿಸಿ ಅದರಂತೆ ವರ್ಗಾವಣೆ ನಡೆಸಬೇಕು. ವಿವಾಹಿತ ಶಿಕ್ಷಕರ ಸಂದರ್ಭದಲ್ಲಿ
a) ಪತಿ ಅಥವಾ ಪತ್ನಿ ಇಬ್ಬರು ಸರಕಾರಿ ನೌಕರರಾಗಿರುವ ಪ್ರಕರಣಗಳು, b) ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಸರಕಾರಿ ನೌಕರರಾಗಿರದ ಪ್ರಕರಣಗಳು, c) ಇತರೆ ಪ್ರಕರಣಗಳು ಎಂದು ಉಲ್ಲೇಖಿಸಲಾಗಿದೆ.
ಇದರಂತೆ ಕೇವಲ ಸರಕಾರಿ ನೌಕರಿಯಲ್ಲಿರುವ ದಂಪತಿಗಳು ಮಾತ್ರವಲ್ಲದೆ, ಒರ್ವ ರೈತ, ಶ್ರಮಿಕ ಅಥವಾ ಸಾಮಾನ್ಯ ವ್ಯಕ್ತಿಯ ಪತಿ ಅಥವಾ ಪತ್ನಿಗೂ ವರ್ಗಾವಣೆ ಸಂದರ್ಭದಲ್ಲಿ ನ್ಯಾಯಯುತ ಹಕ್ಕನ್ನು ಪ್ರತಿಪಾಧಿಸುವ
ಅವಕಾಶ ಲಭಿಸುತ್ತದೆ.

ಈ ವರ್ಷ ಅಸಾಧ್ಯ..?

teachers-transfer-court-2007-act

2007 ರ ಶಿಕ್ಷಕರ ವರ್ಗಾವಣೆ ನೀತಿ-ನಿಯಮದ ಪ್ರಕಾರ ಶಿಕ್ಷಕರ ಸಾಮಾನ್ಯ ವರ್ಗಾವಣೆಯನ್ನು ಪ್ರತಿ ವರ್ಷ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಮಾತ್ರ ನಡೆಸಬೇಕು. ಆದರೆ ಈಗ ಸೆಪ್ಟಂಬರ್ ತಿಂಗಳು ಚಾಲ್ತಿಯಲ್ಲಿದೆ. ಇನ್ನೇನು ಕೆಲವೇ ಕೆಲ ದಿನಗಳಲ್ಲಿ ಮಧ್ಯವಾರ್ಷಿಕ ಪರೀಕ್ಷೆ ಹಾಗೂ ದಸರ ರಜೆ ಎದುರಾಗಲಿದೆ. ಈ ಹಂತದಲ್ಲಿ ಶಿಕ್ಷಕರ ವರ್ಗಾವಣೆ ಮಾಡುತ್ತಿರುವುದು 2007 ರ ವರ್ಗಾವಣೆ ನಿಯಮಕ್ಕೆ ವಿರುದ್ಧವಾದದ್ದು.
ಈಗಾಗಲೇ ರಾಜ್ಯದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರು ಕೋರ್ಟ್ ಗೆ ಸಲ್ಲಿಸಿರುವ ಹೇಳಿಕೆಯಲ್ಲಿ 2007 ರ ನಿಯಮದಂತೆ ಶಿಕ್ಷಕರ ವರ್ಗಾವಣೆ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ. ಅದರ ಪ್ರಕಾರ ಈಗ ವರ್ಗಾವಣೆಗೆ ಸೂಕ್ತ ಸಮಯವಲ್ಲ. ಒಂದು ವೇಳೆ ವರ್ಗಾವಣೆ ಮಾಡಿದರೆ ಅದು ನ್ಯಾಯಾಂಗ ನಿಂಧನೆ ಪ್ರಕರಣವಾಗುವ ಸಾಧ್ಯತೆ ಇದೆ. ಹಾಗಾಗಿ ಇದನ್ನು ಸರಕಾರ ಹೇಗೆ ನಿಭಾಯಿಸುತ್ತದೆಯೋ ಕಾದು ನೋಡಬೇಕಿದೆ.


key words : teachers-transfer-court-2007-act