ಮೈಸೂರು,ನವೆಂಬರ್,11,2023(www.justkannada.in): ಪದವಿಪೂರ್ವ ಶಿಕ್ಷಣ ಇಲಾಖೆಯನ್ನ ಜಿಲ್ಲಾ ಪಂಚಾಯತಿಗೆ ವ್ಯಾಪ್ತಿಗೆ ವಹಿಸುವುದಕ್ಕೆ ಸರ್ಕಾರ ಮುಂದಾಗಿದೆ. ಇದು ಒಂದು ಅವೈಜ್ಞಾನಿಕ ನಿರ್ಧಾರ. ಇದನ್ನು ಕೂಡಲೇ ಕೈ ಬಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂಎಲ್ ಸಿ ಮರಿತಿಬ್ಬೇಗೌಡ , ಪದವಿಪೂರ್ವ ಶಿಕ್ಷಣ ಇಲಾಖೆಯನ್ನ ಸಿಇಓ ಅಧಿಕಾರ ವ್ಯಾಪ್ತಿಗೆ ಸೇರಿಸಲು ಮುಂದಾಗಿರುವ ಸರ್ಕಾರದ ಈ ಆದೇಶವನ್ನ ಕೂಡಲೇ ವಾಪಸ್ ಪಡೆಯಬೇಕು. ಇದರಿಂದ ವಿದ್ಯಾರ್ಥಿಗಳಿಗೆ ತುಂಬ ತೊಂದರೆಯಾಗುತ್ತದೆ. ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯವಾಗುತ್ತದೆ. ವಿದ್ಯಾರ್ಥಿಗಳಿಗೆ ಸಿಗಬೇಕಾದ ಸೌಲಭ್ಯ ,ಸವಲತ್ತುಗಳು ವಿಳಂಬವಾಗುತ್ತದೆ. ಹಾಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನ ಜಿ.ಪಂಗೆ ವಹಿಸುವುದರಿಂದ ಶಿಕ್ಷಣ ಇಲಾಖೆಯ ಅಭಿವೃದ್ಧಿಗೆ ಕುಂಠಿತವಾಗುತ್ತದೆ. ಕೂಡಲೇ ಸರ್ಕಾರ ತಮ್ಮ ಸುತ್ತೋಲೆಯನ್ನ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಉನ್ನತ ಶಿಕ್ಷಣ ಸಚಿವರಾದ ಸುಧಾಕರ್ ಅವರು ಕಳೆದ ಆಯುಧಾಪೂಜೆ ದಿನ ಮಹಾರಾಣಿ ಕಾಲೇಜು ಮತ್ತು ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದರು. ಕುಸಿದ ಕಟ್ಟಡವನ್ನು ಹೊಸದಾಗಿ ನಿರ್ಮಾಣ ಮತ್ತು ವಿದ್ಯಾರ್ಥಿ ನಿಲಯದ ನಿರ್ಮಾಣಕ್ಕೆ 51 ಕೋಟಿ ರೂ. ಅನುದಾನ ಕೊಡುತ್ತೇವೆ ಎಂದಿದ್ದಾರೆ. ಹೊಸ ವಿದ್ಯಾರ್ಥಿ ನಿಲಯದ ನಿರ್ಮಾಣಕ್ಕೆ 91 ಕೋಟಿ ರೂ. ಅನುದಾನ ಕೊಡುತ್ತೇವೆ ಎಂಬ ಭರವಸೆ ಕೊಟ್ಟಿದ್ದಾರೆ. ಪಡುವಾರಹಳ್ಳಿ ಬಳಿ ಇರುವ ವಾಣಿಜ್ಯ ಕಟ್ಟಡ ಬಳಿ ನೂತನ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡುವುದಕ್ಕೆ ಮತ್ತು ಕಾಲೇಜಿನ ವಿಸ್ತರಣೆಗಾಗಿ ಮತ್ತಷ್ಟು ಅನುದಾನ ಕೊಡುವ ಭರವಸೆ ನೀಡಿದ್ದಾರೆ.
ಮೂಲ ಭೂತ ಸೌಕರ್ಯಗಳನ್ನು ಒದಗಿಸಲು ಒಟ್ಟು 209 ಕೋಟಿ ರೂ. ಅನುದಾನ ಕೊಡಲು ಮುಂದಾಗಿರುವುದಕ್ಕೆ ನಾನು ಮುಖ್ಯಮಂತ್ರಿಗಳಿಗೆ ಮತ್ತು ಉನ್ನತ ಶಿಕ್ಷಣ ಸಚಿವರಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದು ಮರಿತಿಬ್ಬೇಗೌಡ ತಿಳಿಸಿದರು.
Key words: Addition – Undergraduate Education Department –ZP- Marithibbe Gowda