ಮೈಸೂರು,ಸೆ,6,2019(www.justkannada.in): ತಮ್ಮನ್ನ ಮಹಾಜ್ಞಾನಿ ಎಂದು ಕರೆದಿದ್ದ ಸಚಿವ ವಿ.ಸೋಮಣ್ಣಗೆ ಟಾಂಗ್ ನೀಡಿರುವ ಮಾಜಿ ಸಚಿವ ಸಾ.ರಾ ಮಹೇಶ್, ಸಚಿವ ಸೋಮಣ್ಣ ನನ್ನನ್ನು ಮಹಾಜ್ಞಾನಿ ಎಂದಿದ್ದಾರೆ. ನಮ್ಮಂತಹ ಜ್ಞಾನ ಇರುವವರು ಅವರ ಜೊತೆ ಹೇಗೆ ಕೂರುವುದು. ಹೀಗಾಗಿ ದಸರಾ ಕಾರ್ಯಕ್ರಮದಿಂದ ನಾನು ದೂರವಿದ್ದೇನೆ ಎಂದು ತಿರುಗೇಟು ನೀಡಿದರು.
ಮೈಸೂರಲ್ಲಿ ನಗರ ಪಾಲಿಕೆ ಸದಸ್ಯರ ಪೂರ್ವ ಭಾವಿ ಸಭೆ ಬಳಿಕ ಮಾತನಾಡಿದ ಮಾಜಿ ಸಚಿವ ಸಾರಾ ಮಹೇಶ್, ಮೈಸೂರು ದಸರಾದಲ್ಲಿ ನಾನು ಪಾಲ್ಗೊಳ್ಳುವುದಿಲ್ಲ. ನಮಗೆ ಅರ್ಹತೆ ಇಲ್ಲ ಎಂದು, ಜನಾದೇಶ ಇಲ್ಲದಿದ್ದರೂ ಅವರು ಸರ್ಕಾರ ಮಾಡಿದ್ದಾರೆ. ನಮಗೆ ಅರ್ಹತೆ ಇಲ್ಲ ಎಂದ ಮೇಲೆ ಅವರ ಜೊತೆ ಸೇರಿ ಹೇಗೆ ದಸರಾ ಮಾಡುವುದು ನನಗೆ ಜಿ.ಟಿ. ದೇವೆಗೌಡರಷ್ಟು ವಿಶಾಲ ಹೃದಯ ಇಲ್ಲ ಎಂದರು.
ಜಿ.ಟಿ ದೇವೇಗೌಡರ ಹೇಳಿಕೆಯಲ್ಲಿ ತಪ್ಪೇನಿದೆ.
ನಾನು ಈಗ ಆರಾಮವಾಗಿದ್ದೇನೆ ಎಂಬ ಮಾಜಿ ಸಚಿವ ಜಿ,ಟಿ ದೇವೇಗೌಡ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಸಾ,ರಾ ಮಹೇಶ್, ಸಚಿವರಾಗಿದ್ದಾಗ ಜಿ.ಟಿ ದೇವೇಗೌಡರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿತ್ತು. ಈಗ ಒತ್ತಡ ಕಡಿಮೆಯಾಗಿದೆ. ಹೀಗಾಗಿ ಹೀಗೆ ಹೇಳಿದ್ದಾರೆ ಅವರ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಇನ್ನು ನನಗೆ ಆ್ಯಕ್ಟಿಂಗ್ ಸಿಎಂ ಸ್ಥಾನ ನೀಡಿದ್ದಕ್ಕೆ ಧನ್ಯವಾದಗಳು. ಈಗಲೂ ಮುಂದೆಯೂ ಜಿ,ಟಿ ದೇವೇಗೌಡರೇ ನಮ್ಮ ನಾಯಕರು. ಅವರು ಜೆಡಿಎಸ್ ಬಿಟ್ಟು ಹೋಗಲ್ಲ ಎಂದು ಸಾ.ರಾ ಮಹೇಶ್ ತಿಳಿಸಿದರು.
ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಪಕ್ಷದ ವರಿಷ್ಠರು ಸೂಚಿಸಿದ್ದಾರೆ. ಎರಡು ದಿನಗಳ ಕಾಲ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮೈಸೂರು ಜಿಲ್ಲೆಯಲ್ಲಿ ಸಭೆ ನಡೆಸಲಿದ್ದಾರೆ. ಹಾಗಾಗಿ ಮೊದಲ ಹಂತದಲ್ಲಿ ನಗರ ಭಾಗದ ಪಾಲಿಕೆ ಸದಸ್ಯರ ಕರೆದು ಮಾತನಾಡಿದ್ದೇನೆ. ಮೊದಲು ಒಂದು ದಿನವಿಡಿ ನಗರ ಮಟ್ಟದಲ್ಲಿ ಎರಡನೇ ದಿನ ಗ್ರಾಮೀಣ ಭಾಗದಲ್ಲಿ ಸಭೆ ನಡೆಸಲಾಗುತ್ತದೆ ಎಂದು ಸಾ.ರಾ ಮಹೇಶ್ ಮಾಹಿತಿ ನೀಡಿದರು.
ಜಿಟಿಡಿ ಮಗನಿಗೆ ಟಿಕೇಟ್ ನೀಡಲು ಹೋಗಿದ್ದು ಸತ್ಯ…
ಹುಣಸೂರಲ್ಲಿ ಉಪಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, ಜಿ.ಟಿ ದೇವೇಗೌಡರ ಮಗನಿಗೆ ಟಿಕೇಟ್ ನೀಡಲು ಹೋಗಿದ್ದು ಸತ್ಯ. ಕಳೆದ ಭಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಜಿಟಿಡಿ ಮಗನಿಗೆ ಟಿಕೇಟ್ ಕೇಳಿದ್ದರು. ಈ ಭಾರಿ ವರಿಷ್ಠರು ಟಿಕೇಟ್ ಕೊಡಲು ಹೇಳಿದ್ದರು ಎಂದು ತಿಳಿಸಿದರು.
ಇದೇ ವೇಳೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಮಾಜಿ ಸಚಿವ ಸಾ,ರಾ ಮಹೇಶ್, ಕಳೆದ ಬಾರಿ ಚುನಾವಣೆ ಒಂದು ತಿಂಗಳಿದ್ದಾಗ ಹಿರಿಯರೋಬ್ಬರನ್ನ ಕರೆತಂದಿದ್ವಿ. ಅವರು ಕೊನೆಗೆ ಪಕ್ಷ ಬಿಟ್ಟು ಹೋಗಿದ್ದಾರೆ ಸದ್ಯ ಏನಾಗಿದೆ ಅಂತ ಎಲ್ಲರಿಗೂ ಗೊತ್ತಿದೆ. ಹುಣಸೂರಲ್ಲಿ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಮುಂದಿನ ದಿನಗಳಲ್ಲಿ ಜನ ಇದಕ್ಕೆಲ್ಲ ಉತ್ತರ ಕೊಡ್ತಾರೆ. ಹುಣಸೂರಲ್ಲಿ ಯಾರು ಗೆಲ್ತಾರೆ ಅಂತ ಉತ್ತರ ಕೊಡ್ತಾರೆ ಎಂದು ಹೇಳಿದರು.
Key words: former minister- Sara Mahesh-tong-Minister –v.Somanna –mysore-GT devegowda