ಬೆಂಗಳೂರು,ಸೆ,10,2019(www.justkannada.in): ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ಖಂಡಿಸಿ ಬೆಂಗಳೂರಿನಲ್ಲಿ ಅವರ ಬೆಂಬಲಿಗರಿಂದ ಪ್ರತಿಭಟನೆ ಹಿನ್ನೆಲೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.
ಸುದ್ದಿಗೋಷ್ಠಿ ನಡೆಸಿ ಭದ್ರತೆ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಡಿಕೆ ಶಿವಕುಮಾರ ಬಂಧನ ಖಂಡಿಸಿ ನಾಳೆ ಒಕ್ಕಲಿಗರ ಸಮುದಾಯ ನ್ಯಾಷನಲ್ ಕಾಲೇಜು ಮೈದಾನದಿಂದ ಸುಮಾರು 5 ಕಿಮೀ ವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲಿದ್ದಾರೆ. ನಂತರ ಫ್ರೀಡಂಪಾರ್ಕ್ ನಲ್ಲಿ ಸೇರಲಿದ್ದಾರೆ. ಸುಮಾರು 35 ಸಾವಿರ ಮಂದಿ ಭಾಗವಹಿಸುವ ಸಾಧ್ಯತೆ ಇದೆ. ಹೀಗಾಗಿ 15 ಷರತ್ತುಗಳನ್ನ ವಿಧಿಸಿ ಪ್ರತಿಭಟನೆಗೆ ಅವಕಾಶ ನೀಡಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆದರೇ ಅರ್ಜಿದಾರರೇ ನೇರ ಹೊಣೆಯಾಗುತ್ತಾರೆ ಎಂದರು.
ಹಾಗೆಯೇ ಬೃಹತ್ ಪ್ರತಿಭಟನೆ ಹಿನ್ನೆಲೆ ಭದ್ರತೆಗಾಗಿ 12 ಡಿಸಿಪಿ, 40 ಎಸಿಪಿ, 50 ಕೆಎಸ್ ಆರ್ ಪಿ, 40 ಸಿಎಆರ್ ತುಕಡಿ, 106 ಇನ್ಸ್ ಪೆಕ್ಟರ್, 2ಸಾವಿರ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. 25 ರಸ್ತೆಗಳಲ್ಲಿ ಪಾರ್ಕಿಂಗ್ ನಿಷೇಧ ಮಾಡಲಾಗಿದ್ದು, 9 ಕಡೆಗಳಲ್ಲಿ ಪಾರ್ಕಿಂಗ್ ಅವಕಾಶ ನೀಡಿದ್ದೇವೆ. 12 ರಸ್ತೆಗಳ ಮಾರ್ಗ ಬದಲಾಯಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದರು.
Key words: Protests -tomorrow – Police- tight security – Bangalore.-City Police Commissioner- Bhaskar Rao.