ಮೈಸೂರು ಸೆ.12,(www.justkannada.in): ಆದಿವಾಸಿ ಜನಾಂಗದವರು ಸಾವಿರಾರು ವರ್ಷಗಳಿಂದ ಸರ್ಕಾರದ ಯೋಜನೆಗಳು ಪಡೆಯುವಲ್ಲಿ ವಂಚಿತರಾಗಿದ್ದು, ಈ ಸಮಾಜದ ಜನರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ವಸತಿ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಹೇಳಿದರು.
ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ನಡೆದ ಮೂಲ ಆದಿವಾಸಿಗಳ ಹಕ್ಕು ಮತ್ತು ಅಧಿಕಾರ ದಿನಾಚರಣೆಯನ್ನು ಉದ್ಘಾಟಿಸಿ ಸಚಿವ ವಿ.ಸೋಮಣ್ಣ ಮಾತನಾಡಿದರು.
ದೇಶದಲ್ಲಿ ಆದಿವಾಸಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ, ಅವರು ಸರ್ಕಾರದ ಸವಲತ್ತುಗಳನ್ನು ಪಡೆದು, ಉತ್ತಮ ಜೀವನ ಸಾಧಿಸಬೇಕು ಹಾಗೂ ಅವರ ಮಕ್ಕಳು ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಬೇಕು ಇದಕ್ಕಾಗಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ನಿಮಗೆ ದೊರೆಯಬೇಕಾದ ಸವಲತ್ತುಗಳನ್ನು ನೀಡಿಸುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲೆಯ ಹೆಚ್.ಡಿ ಕೋಟೆ ಭಾಗದಲ್ಲೂ ಆದಿವಾಸಿಗಳು ಇದ್ದಾರೆ. ಹಲವಾರು ಹಾಡಿಗಳಲ್ಲಿ ವಾಸವಿದ್ದು, ಅವರು ವಾಸಿಸುವ ಮನೆಗಳಿಗೆ ವಿದ್ಯುತ್ ವ್ಯವಸ್ಥೆ ಇರುವುದಿಲ್ಲ. ಇದನ್ನು ಪರಿಶೀಲನೆ ಮಾಡಿ ಯಾವ ಹಾಡಿಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲ ಎಂಬುದನ್ನು ಸರ್ವೆ ಮಾಡಿ ಆ ಭಾಗಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಅವರು ಹೇಳಿದರು.
ನಂತರ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್ ಅವರು ದೇಶದಲ್ಲಿ ಸುಮಾರು ೧೦ ಕೋಟಿ ಗೂ ಹೆಚ್ಚು ಆದಿವಾಸಿಗಳಿದ್ದಾರೆ. ಈ ಕಾರ್ಯಕ್ರಮಕ್ಕೆ ೨೦ ರಾಜ್ಯಗಳಿಂದ ಆದಿವಾಸಿಗಳು ಆಗಮಿಸಿದ್ದು, ಇಂತಹ ಜನಾಂಗಕ್ಕೆ ಎಲ್ಲಾ ಅಧಿಕಾರಿಗಳು ಸರ್ಕಾರದ ಸವಲತ್ತುಗಳನ್ನು ತಲುಪಿಸಲು ಮುಂದಾಗಬೇಕು ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಬುಡಕಟ್ಟು ಜನಾಂಗದ ಅಧ್ಯಯನ ವಿಭಾಗವನ್ನು ಚಾಮರಾಜನಗರ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ವಿಶ್ವವಿದ್ಯಾನಿಲಯವು ಹಲವಾರು ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುತ್ತಿದೆ ಅದೇ ರೀತಿ ಬುಡಕಟ್ಟು ಹಾಡಿಗಳನ್ನು ಮುಂದಿನ ದಿನಗಳಲ್ಲಿ ದತ್ತು ಪಡೆದು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿದಿದರು.
ಸಭೆಯಲ್ಲಿ ಆದಿವಾಸಿ ಸಮನ್ವಯ ಮಂಚ್ ಅಧ್ಯಕ್ಷ ಗುಜರಾತಿನ ಅಮರ್ ಸಿಂಗ್ ಚೌಧರಿ, ಕಾರ್ಯದರ್ಶಿ ಅಶೋಕ್ ಚೌಧರಿ, ಕರ್ನಾಟಕ ರಾಜ್ಯದ ಆದಿವಾಸಿ ವೇದಿಕೆಯ ಅಧ್ಯಕ್ಷ ವಿಠ್ಠಲ್, ಕಾರ್ಯದರ್ಶಿ ಮುತ್ತಯ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Key words: sincere -effort -deliver – government’s privileges – adivasis-Minister -V. Somanna