ಬೆಂಗಳೂರು, ಫೆಬ್ರುವರಿ 29,2024(www.justkannada.in): ಗ್ಯಾರಂಟಿ ಯೋಜನೆಗಳ ಹೊರತಾದ ಅಭಿವೃದ್ಧಿಯ ವಿವರಗಳನ್ನು ಅಂಕಿ ಅಂಶಗಳ ಸಮೇತ ಬಿಚ್ಚಿಟ್ಟು ಬಿಜೆಪಿಗೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ, ಅಭಿವೃದ್ಧಿ ಇಲ್ಲದೆ ಜಿಡಿಪಿ, ಆಯವ್ಯಯ ಗಾತ್ರ ಹೆಚ್ಚಳವಾಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಇಂದು ವಿಧಾನಸಭೆಯಲ್ಲಿ ಆಯವ್ಯಯ ಭಾಷಣ ಕುರಿತ ಚರ್ಚೆಗೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ಹಿಂದಿನ ಬಿಜೆಪಿ ಸರ್ಕಾರದವರು ಏನೂ ಅಭಿವೃದ್ಧಿ ಮಾಡಿರಲಿಲ್ಲ. ಬರೀ ಲೂಟಿ ಹೊಡೆದರು. ನಾವು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಯನ್ನೂ ಮಾಡಿದ್ದೇವೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಕ್ಕೆ ಇರುವ ವ್ಯತ್ಯಾಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಬಸವರಾಜ ಬೊಮ್ಮಾಯಿ ಅವರು 2023ರ ಫೆಬ್ರುವರಿಯಲ್ಲಿ 3.09 ಲಕ್ಷ ಕೋಟಿ ರೂ. ಗಾತ್ರದ ಆಯವ್ಯಯ ಮಂಡಿಸಿದರು. 2024-25ನೇ ಸಾಲಿಗೆ ನಾನು ಮಂಡಿಸಿದ ಆಯವ್ಯಯದ ಗಾತ್ರ 3,71,343 ಕೋಟಿ ರೂ. ನಷ್ಟಿದ್ದು, ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಗಿಂತ 62,200 ಕೋಟಿ ರೂ. ನಷ್ಟು ಗಾತ್ರ ಹೆಚ್ಚಳವಾಗಿದೆ. ನಾನು ಜುಲೈ 2023 ರಲ್ಲಿ ಮಂಡಿಸಿದ ಬಜೆಟ್‌ಗಿಂತ ಇದು 43,601 ಕೋಟಿ ರೂ. ಹೆಚ್ಚಳವಾಗಿದೆ.
ಅಂತೆಯೇ ರಾಜ್ಯದ ಜಿಡಿಪಿ 25,63,247 ಕೋಟಿ ರೂ. ಇತ್ತು. 2024- 25 ಕ್ಕೆ 28,09,063 ಕೋಟಿ ರೂ. ಆಗುವ ನಿರೀಕ್ಷೆ ಇದೆ. ಅಂದರೆ 2,41,723 ಕೋಟಿ ರೂ. ಹೆಚ್ಚು. ಅಭಿವೃದ್ಧಿ ಇಲ್ಲದೆ ಆಯವ್ಯಯ ಗಾತ್ರ ಹಾಗೂ ಜಿಡಿಪಿ ಹೆಚ್ಚಳವಾಗಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಬಜೆಟ್ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರದ ಇತರೆ ಅಂಶಗಳು ಈ ಕೆಳಕಂಡಂತಿವೆ.
ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿ ಬಜೆಟ್ ಓದುವಾಗ ವಿರೋಧ ಪಕ್ಷದವರು ಗೈರು ಹಾಜರಾದದ್ದು. ಇವರಿಗೆ ರಾಜ್ಯದ ಆರ್ಥಿಕತೆ ಬಗ್ಗೆ ಕಾಳಜಿ ಇಲ್ಲ. ಕಾಂಗ್ರೆಸ್ ನವರು 9 ಜನ , ಬಿಜೆಪಿ 13 ಜನ ಹಾಗೂ ಜೆಡಿಎಸ್ 3 ಜನ ಭಾಗವಹಿಸಿದ್ದಾರೆ. ಇಷ್ಟೂ ಸದಸ್ಯರು ಬಜೆಟ್ ಬಗ್ಗೆ ಅನೇಕ ಸಲಹೆ ಸೂಚನೆ ನೀಡಿದ್ದಾರೆ. ಬಜೆಟ್‌ನ್ನು ಟೀಕಿಸಿದ್ದಾರೆ. ಕೇಂದ್ರ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದೆಲ್ಲವನ್ನೂ ಸ್ವಾಗತ ಮಾಡುತ್ತೇನೆ. ಅವರ ಸಲಹೆ- ಸೂಚನೆಗಳನ್ನು ಸರ್ಕಾರ ಮುಂದಿನ ವರ್ಷದಲ್ಲಿ ಆರ್ಥಿಕ ವರ್ಷದಲ್ಲಿ ಏನೇನು ಮಾಡಬೇಕು ಅದೆಲ್ಲವನ್ನೂ ಮಾಡುತ್ತೇವೆಂದು ಹೇಳಬಯಸುತ್ತೇನೆ ಎಂದರು.
2024-25ನೇ ಆಯವ್ಯಯದಲ್ಲಿ ಒಟ್ಟು ಬಜೆಟ್ ಗಾತ್ರ 3,71,343 ಕೋಟಿ ರೂ. ಗಳಾಗಿದ್ದು, ಇದರಲ್ಲಿ ರಾಜಸ್ವ ವೆಚ್ಚ 2,90,531 ಕೋಟಿ, ಬಂಡವಾಳ ವೆಚ್ಚ ಕೋಟಿ ರೂ.ಗಳಾಗಿದ್ದು, ನಾವು ಅಭಿವೃದ್ಧಿಗೂ ಆದ್ಯತೆ ನೀಡಿರುವುದಕ್ಕೆ ಇದು ಸಾಕ್ಷಿ. ವಿರೋಧ ಪಕ್ಷದವರು ಅಭಿವೃದ್ಧಿ ಶೂನ್ಯ ಎಂದಿದ್ದಾರೆ. ಒಟ್ಟು ಅಭಿವೃದ್ಧಿ ಕಾರ್ಯಕ್ರಮಗಳಿಗೆ 1,20,000 ಕೋಟಿ ರೂ. ವೆಚ್ಚದ ಹಂಚಿಕೆ ಮಾಡಿದ್ದೇವೆ. 52,009 ಕೋಟಿ ರೂ. ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿರಿಸಿದ್ದು, ಉಳಿದ ಮೊತ್ತ ಅಭಿವೃದ್ಧಿ ಕಾರ್ಯಗಳಿಗೆ ಹಂಚಿಕೆ ಮಾಡಲಾಗಿದೆ. ವಿರೋಧ ಪಕ್ಷದವರು ಮಾಡಿರುವ ಆಪಾದನೆ ಸತ್ಯಕ್ಕೆ ದೂರವಾದದ್ದು ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಮತದಾರರು ಬಿಜೆಪಿಯವರನ್ನು ತಿರಸ್ಕಾರ ಮಾಡಿದರು. ನಮಗೆ 136 ಸೀಟು ಕೊಟ್ಟರು ಹಾಗೂ 43% ಮತ ನೀಡಿದರು. ಇವರು ಭ್ರಷ್ಟಾಚಾರ ಮಾಡಿದ್ದರಿಂದ ಕೇವಲ 66 ಜನ ಗೆಲ್ಲಲು ಸಾಧ್ಯವಾಯಿತು. ಇವರು ಜನರ ಸಂಪೂರ್ಣ ಆಶೀರ್ವಾದದೊಂದಿಗೆ ಅಧಿಕಾರ ಮಾಡಲಿಲ್ಲ. ಇವರು ಆಪರೇಷನ್ ಕಮಲದ ಮೂಲಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರು. ಇದಕ್ಕೆ ಕಾರಣ ಮಿ. ಯಡಿಯೂರಪ್ಪ ಮತ್ತು ಇತರರು. ಇವರು ಯಾವತ್ತೂ ಮುಂಬಾಗಿಲಿನಿಂದ ಅಧಿಕಾರಕ್ಕೆ ಬರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.
ಜಿಡಿಪಿ- 2023- 24 ರಲ್ಲಿ 25,63,247 ಕೋಟಿ ರೂ. ಇತ್ತು. 2024- 25 ಕ್ಕೆ 28,09,063 ಕೋಟಿ ರೂ. ಆಗುವ ನಿರೀಕ್ಷೆ ಇದೆ. ಅಂರೆ 2,41,723 ಕೋಟಿ ರೂ. ಹೆಚ್ಚು. ಆದ್ದರಿಂದ ಜಿಡಿಪಿಯೂ ಹೆಚ್ಚಾಗಿದೆ, ಬಜೆಟ್ ಗಾತ್ರವೂ ಹೆಚ್ಚಾಗಿದೆ. ಇದರಿಂದ ರಾಜ್ಯದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ವಿರೋಧ ಪಕ್ಷದವರು ಮಾಡಿರುವ ಆಪಾದನೆಯಲ್ಲಿ ಯಾವುದೇ ತಿರುಳಿಲ್ಲ ಎಂಬುದು ಸಾಬೀತಾಗುತ್ತದೆ.
ಗ್ಯಾರಂಟಿ ಯೋಜನೆಗಳಿಗೆ ಈ ವರ್ಷ 36,000 ಕೋಟಿ ರೂ. ವೆಚ್ಚ ಮಾಡಿದ್ದೇವೆ. ಶಕ್ತಿ ಯೋಜನೆ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ – ಈ ಕಾರ್ಯಕ್ರಮಗಳಿಗೆ 36,000 ಕೋಟಿ ರೂ. ಬಳಸಲಾಗಿದೆ. ಮುಂದಿನ ಬಜೆಟ್ ನಲ್ಲಿ 52,009 ಕೋಟಿ ಒದಗಿಸಿದ್ದು, ಇದರೊಂದಿಗೆ ಶಿಕ್ಷಣ, ಆರೋಗ್ಯ, ರಸ್ತೆಗಳು, ಶಾಂತಿ ಸುವ್ಯವಸ್ಥೆ ಎಲ್ಲದಕ್ಕೂ ಆದ್ಯತೆ ನೀಡಲಾಗಿದೆ.
ಹಿಂದಿನ ಬಿಜೆಪಿ ಸರ್ಕಾರದವರು ಏನೂ ಅಭಿವೃದ್ಧಿ ಮಾಡಿರಲಿಲ್ಲ. ಬರೀ ಲೂಟಿ ಹೊಡೆದರು. ನಾವು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿಯನ್ನೂ ಮಾಡಿದ್ದೇವೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಕ್ಕೆ ಇರುವ ವ್ಯತ್ಯಾಸ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯವರಿಗೆ ಜನರ ಆಶೀರ್ವಾದ ಪಡೆಯುವ ಯೋಗ್ಯತೆ ಇಲ್ಲ. ಇವರು ನಮಗೆ ದೇಶಭಕ್ತಿ ಪಾಠ ಹೇಳಿ ಕೊಡಲು ಬರುತ್ತಾರೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಕಾಂಗ್ರೆಸ್. ಹಿಂಬಾಗಿಲಿನಿಂದ ಅಧಿಕಾರ ಅನುಭವಿಸಲು ಬಂದವರು ಇವರು.
ಆರ್. ಎಸ್. ಎಸ್ 1925ರಲ್ಲೇ ಅಸ್ತಿತ್ವಕ್ಕೆ ಬಂತು. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಅನಂತಕುಮಾರ್ ಹೆಗಡೆ ಕೇಂದ್ರ ಸಚಿವರಾಗಿದ್ದಾಗ, ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸಲು ಎಂದು ಹೇಳಿಕೆ ನೀಡಿದ್ದರು. ಇದರ ಬಗ್ಗೆ ಮೋದಿ ಅವರಾಗಲಿ, ಪಕ್ಷದ ಹಿರಿಯರಾಗಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಕೇಂದ್ರದ ವಿರುದ್ದ ಗುಡುಗಿದರು.
Key words: possible – increase- GDP – budget–without- development- CM Siddaramaiah