ಮೈಸೂರು,ಸೆ,13,2019(www.justkannada.in): ಸಚಿವ ಸೋಮಣ್ಣ ಗೆ ಅನುಭವ ಕಡಿಮೆ ಎಂಬ ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ರಾಜಕಾರಣಕ್ಕೆ ಬಂದಿದ್ದು 96ರಲ್ಲಿ. ನಾನು ರಾಜಕಾರಣಕ್ಕೆ ಬಂದಿದ್ದು 83ರಲ್ಲಿ. ಕುಮಾರಸ್ವಾಮಿ ಅದೃಷ್ಠದಿಂದ ಮುಖ್ಯಮಂತ್ರಿ ಆದವರು. ಅದೃಷ್ಠ ಯಾರ ಅಪ್ಪನ ಮನೆ ಸ್ವತ್ತು ಅಲ್ಲ ಎಂದು ಹೆಚ್.ಡಿಕೆಗೆ ಸೋಮಣ್ಣ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ವಿ.ಸೋಮಣ್ಣ, ಕುಮಾರಸ್ವಾಮಿ ಅವರಿಗೆ ಅದೃಷ್ಟ ಇತ್ತು ಮುಖ್ಯಮಂತ್ರಿ ಆದರು. ನಾನು ಮಂತ್ರಿ ಆದೆ ಅಷ್ಟೇ. ದಸರಾ ಮುಗಿದ ನಂತರ ಒಂದು ಕ್ಷಣ ವ್ಯರ್ಥ ಮಾಡದೆ ವಸತಿ ಇಲಾಖೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
: ಅಧಿಕಾರಿಗಳು ಮಾಡುವ ದಸರಾ ಕೆಲಸಕ್ಕೆ ಸೋಮಣ್ಣ ತಲೆ ಕೆಡಿಸಿಕೊಂಡಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸ್ವಾಮಿ ಇದು ನಾಡಹಬ್ಬ. ಅಧಿಕಾರಿಗಳುಗಾಗಿ ಇರುವ ಹಬ್ಬ ಅಲ್ಲ. ರಾಜ್ಯದ 6.5 ಕೋಟಿ ಕನ್ನಡಿಗರು ಮಾಡುವ ಹಬ್ಬ.ಇಡೀ ವಿಶ್ವಕ್ಕೆ ಮೈಸೂರು ಮಹಾರಾಜರು ಕೊಟ್ಟ ಕಾಣಿಕೆ. ಇಂದು ದೇಶದಲ್ಲೇಲ್ಲ ಕೇವಲ ಮೈಸೂರಿನಲ್ಲಿ ಮಾತ್ರ ಇಷ್ಟು ವಿಜೃಂಭಣೆಯಿಂದ ನಡೆಯುತ್ತೆ. ಇದನ್ನ ಕುಮಾರಸ್ವಾಮಿ ಅರಿತುಕೊಂಡರೆ ಒಳ್ಳೆಯದು. ನಾನು ಇನ್ನೇನೂ ಹೇಳುವುದಿಲ್ಲ ಎಂದು ಕಿಡಿಕಾರಿದರು.
ನಾನು ದಸರಾ ಜೊತೆ ಇಲಾಖೆ ಕಾರ್ಯಗಳನ್ನೂ ಮಾಡುತ್ತಿದ್ದೇನೆ. ಹಾನಿಗೊಳಗಾದ 40 ಸಾವಿರಕ್ಕೂ ಅಧಿಕ ಮನೆಗಳ ನಿರ್ಮಾಣಕ್ಕೆ ನಮ್ಮ ಇಲಾಖೆಯಿಂದ ಕೆಲಸಗಳು ಆಗುತ್ತಿವೆ. ಇಂದು ಸಂಜೆ 5ಗಂಟೆಗೆ ಬೆಂಗಳೂರಿನಲ್ಲಿ ಸಿಎಂ ಜೊತೆ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸುತ್ತೇನೆ.ಕುಮಾರಸ್ವಾಮಿ ಎರಡು ಭಾರಿ ಮುಖ್ಯಮಂತ್ರಿ ಆಗಿದ್ದೀರಿ. ನಿಮ್ಮ ಕಾರ್ಯವೈಖರಿ ಬಗ್ಗೆ ನಾನು ಟೀಕೆ ಮಾಡೋದಿಲ್ಲ. ನೀವೇ ಆತ್ಮಾವಲೋಕನ ಮಾಡಿಕೊಂಡರೆ ಸಾಕಾಗಿದೆ. ಈ ಪಾರಂಪರಿಕ ಹಬ್ಬವನ್ನು ಎಲ್ಲರ ಸಹಕಾರದಿಂದ ಮಾಡುತ್ತಿದ್ದೇನೆ. ರಾಜ್ಯದಲ್ಲಿ ನೆರೆಯಿಂದ32 ಸಾವಿರ ಕೋಟಿ ನಷ್ಟವಾಗಿದ್ದು, ಇದನ್ನ ಕೇಂದ್ರದ ಗಮನಕ್ಕೆ ತಂದಿದ್ದೇವೆ. ಅವರು ಇನ್ನೆರಡು ದಿನದಲ್ಲಿ ನೆರವಾಗುತ್ತಾರೆ ಎನ್ನುವ ಭರವಸೆ ಇದೆ ಎಂದು ವಿ.ಸೋಮಣ್ಣ ತಿಳಿಸಿದರು.
Key words: mysore-Minister V Somanna –tong- Former CM- HD Kumaraswamy-luck