ನಾಡಹಬ್ಬ ದಸರಾಗೆ ಸಿಎಂ ಬಿಎಸ್ ವೈ ಅಧಿಕೃತ ಅಹ್ವಾನ: ಶಾಸಕ ರಾಮದಾಸ್ ಗೈರಿಗೆ ಕಾರಣ ಕೊಟ್ಟ ಸಚಿವ ವಿ. ಸೋಮಣ್ಣ…

ಬೆಂಗಳೂರು,ಸೆ,14,2019(www.justkannada.in): ಮೈಸೂರು ದಸರಾ ಸ್ವಾಗತ ಸಮಿತಿಯಿಂದ ಸಿಎಂ ಯಡಿಯೂರಪ್ಪ ಅವರಿಗೆ ನಾಡಹಬ್ಬ ದಸರಾಗೆ ಅಧಿಕೃತ ಆಹ್ವಾನ ಕೊಟ್ಟಿದ್ದೇವೆ ಎಂದು  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಜನಪ್ರತಿನಿಧಿಗಳು ವಿಧ್ಯುಕ್ತವಾಗಿ ಆಹ್ವಾನ ನೀಡಿದರು.

ಬಳಿಕ ಮಾತನಾಡಿದ ಸಚಿವ ವಿ.ಸೋಮಣ್ಣ, ದಸರಾ ಹಬ್ಬಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ  ಮೈಸೂರಿನ‌ ಎಲ್ಲಾ ಪಕ್ಷಗಳ ಶಾಸಕರೂ ಜಿಲ್ಲಾಧಿಕಾರಿಗಳೂ ಆಹ್ವಾನಿಸಿದ್ದೇವೆ. ಸೆ. 29 ರ ಬೆಳಗ್ಗೆ  9 ಗಂಟೆ ನಂತರ ಚಾಮುಂಡೇಶ್ವರಿ ಪೂಜೆ ಬಳಿಕ ದಸರಾ ಉದ್ಘಾಟನೆ ಇದೆ. ಅಕ್ಟೋಬರ್ 8 ರವರೆಗೂ ವಿವಿಧ ಕಾರ್ಯಕ್ರಮ ಗಳು ನಡೆಯುತ್ತವೆ.  ರಾಜ್ಯಪಾಲರನ್ನು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಈಗಾಗಲೇ ಆಹ್ವಾನ ಕೊಟ್ಟಿದ್ದು,  ದಸರಾ ಉತ್ಸವವನ್ನು ವ್ಯವಸ್ಥಿತವಾಗಿ ನಡೆಯುವಂತೆ ಯೋಜಿಸಿದ್ದೇವೆ. ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧೂ ಅವರನ್ನು ಆಹ್ವಾನಿಸಲು ಒಂದು ನಿಯೋಗ ಹೋಗಿದ್ದು, ಪಿ‌ ವಿ ಸಿಂಧೂ ಸರ್ಕಾರಿ ಅತಿಥಿಯಾಗಿ ದಸರಾದಲ್ಲಿ ಭಾಗವಹಿಸ್ತಾರೆ ಎಂದು ತಿಳಿಸಿದರು.

ಸಿಎಂ ಆಹ್ವಾನ ಕಾರ್ಯಕ್ರಮಕ್ಕೆ ಶಾಸಕ ಎಸ್ ಎ ರಾಮದಾಸ್ ಗೈರಾಗಿದ್ದಕ್ಕೆ ಕಾರಣ ನೀಡಿದ ಸಚಿವ ವಿ.ಸೋಮಣ್ಣ, ರಾಮದಾಸ್ ಅವರಿಗೆ  ದಸರಾ ಸಮಿತಿಯಲ್ಲಿ ಬೇರೆ ಬೇರೆ ಜವಾಬ್ದಾರಿ ಗಳಿವೆ. ಹಾಗಾಗಿ ರಾಮದಾಸ್ ಇವತ್ತು ನಮ್ ಜೊತೆ ಬಂದಿಲ್ಲ ಎಂದು ಸಬೂಬು ಹೇಳಿದರು.

ಜಿ ಟಿ ದೇವೇಗೌಡರು ಹಿರಿಯರು, ದಸರಾ ನಡೆಸಿ ಅನುಭವ ಇರೋರು. ಹಾಗಾಗಿ ಜಿಟಿಡಿಯವರೂ ನಮಗೆ ಉತ್ತಮ ಸಹಕಾರ ಕೊಡ್ತಿದ್ದಾರೆ ಎಂದರು.

Key words: CM BSY –official- invitation –mysore- Dasara-Minister –v.Somanna