ಬೆಂಗಳೂರು, ಮಾರ್ಚ್ 30,2024 (www.justkannada.in): ಆದಾಯ ತೆರಿಗೆ ಇಲಾಖೆ ನಿನ್ನೆ 1823.08 ಕೋಟಿ ರೂ ಪಾವತಿಸುವಂತೆ ಕಾಂಗ್ರೆಸ್ ಗೆ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೆ ಇದೀಗ ನಿನ್ನೆ ರಾತ್ರಿ ಕೂಡ ಐಟಿ ಇಲಾಖೆ ಮತ್ತೆರಡು ನೋಟಿಸ್ ಕಳುಹಿಸಿದೆ.
ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಇತ್ಯರ್ಥವಾದ ವಿಷಯಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ) ಶುಕ್ರವಾರ ರಾತ್ರಿ ನನಗೆ ನೋಟಿಸ್ ನೀಡಿದೆ. ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಬಿಜೆಪಿಯವರಿಗೆ ಗೊತ್ತು. ಹೀಗಾಗಿ ಭಯ ಹುಟ್ಟಿಸಲು ಈ ರೀತಿ ಪ್ರಯತ್ನ ಮಾಡುತ್ತಿದ್ದಾರ ಎಂದರು.
ಕೇಂದ್ರ ಸರ್ಕಾರ ವಿರೋಧ ಪಕ್ಷಗಳನ್ನು ಟಾರ್ಗೆಟ್ ಮಾಡಿದೆ. ನಾನು ಸೇರಿದಂತೆ ವಿಪಕ್ಷಗಳ ಅನೇಕ ನಾಯಕರಿಗೆ ಸಿಬಿಐ, ಐಟಿ, ಇಡಿ ದಾಳಿ ಮೂಲಕ ಕಿರುಕುಳ ನೀಡುತ್ತಿದೆ. ಆದರೆ ದಾಳಿ ಸಂಬಂಧ ಇದುವರೆಗೂ ಸೂಕ್ತ ದಾಖಲೆ ಸಲ್ಲಿಸಿಲ್ಲ. ಕೇಂದ್ರದ ತನಿಖಾ ಸಂಸ್ಥೆಗಳ ದಾಳಿಯನ್ನು ನಾವು ಎದುರಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಪರ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಮೋರ್ ಸ್ಟ್ರಾಂಗ್ ಮೋರ್ ಎನಿಮಿಸ್, ಮೋರ್ ಸ್ಟ್ರಾಂಗ್ ಮೋರ್ ಪವರ್. ಅಮಿತ್ ಶಾ ಆದರೂ ಬರಲಿ ಪ್ರಧಾನಿ ಮೋದಿ ಆದರೂ ಬರಲಿ, ನಮಗೆ ಇದೆಲ್ಲಾ ಹೊಸದು ಅಲ್ಲ. ಗೌಡರನ್ನು ಎದುರಿಸಿದ್ದೇವೆ, ಗೌಡರ ಮಗ ಹೆಚ್ಡಿ ಕುಮಾರಸ್ವಾಮಿಯವರನ್ನು ಎದರಿಸಿದ್ದೇವೆ. ಗೌಡರ ಮೊಮ್ಮಗನನ್ನು ಎದುರಿಸಿದ್ದೇವೆ, ಸೊಸೆಯನ್ನು ಎದುರಿಸಿದ್ದೇವೆ. ಈಗ ಗೌಡರ ಅಳಿಯನನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದರು.
Key words: Notice, IT, DCM, DK Shivakumar.