KSOU ಸರ್ಟಿಫಿಕೆಟ್‌ :  ಪ್ರತಾಪ್‌ ಸಿಂಹ ಹೇಳಿಕೆ ಖಂಡಿಸಿದ ಕುಲಪತಿ, ಮಾಜಿ ಕುಲಪತಿಗಳು..!

ksou, certificate, recognized, Prathap Simha

 

ಮೈಸೂರು, ಏ.03, 2024 : (www.justkannada.in news )  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಮಾಣಪತ್ರದ ಬಗ್ಗೆ  ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಲಘುವಾಗಿ ನೀಡಿದ ಹೇಳಿಕೆ ಬಗ್ಗೆ ಶೈಕ್ಷಣಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಾಂಗ್ರೆಸ್‌ ನ ಲೋಕಸಭಾ ಅಭ್ಯರ್ಥಿ ಎಂ.ಲಕ್ಷ್ಮಣ್‌ ಟೀಕಿಸುವ ಭರದಲ್ಲಿ ಪ್ರತಾಪ್‌ ಸಿಂಹ, ವಿವಾದಾತ್ಮಕ ಹೇಳಿಕೆ ನೀಡಿದ್ದರು. ʼ ನಿಮ್ಮ ಅಭ್ಯರ್ಥಿ ಈಗ ನಾನು ಒಕ್ಕಲಿಗ ಅಂತ ಪ್ರಮಾಣ ಪತ್ರ ಹಿಡಿದುಕೊಂಡು ಬಂದಿದ್ದಾನೆ. ಆ ಪ್ರಮಾಣ ಪತ್ರ ಯಾವುದು. ಯಾವುದೋ ಕೆ.ಎಸ್.ಓ.ಯು ಅಲ್ಲಿ ಇಲ್ಲಿ ಸಿಗುತ್ತಿತ್ತಲ್ಲ ಆ ಪ್ರಮಾಣ ಪತ್ರನಾ..? ಎಂದು ವ್ಯಂಗ್ಯವಾಡಿದ್ದರು.

ಲಕ್ಷ್ಮಣ್‌ ಜಾತಿ ಪ್ರಮಾಣ ಪತ್ರ ಟೀಕಿಸುವ ಭರದಲ್ಲಿ ದೂರ ಶಿಕ್ಷಣದಲ್ಲಿ ದಾಖಲೆ ನಿರ್ಮಿಸಿರುವ, ಮೈಸೂರಿನಲ್ಲಿ ಸ್ಥಾಪಿತವಾದ ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಮಾಣಪತ್ರದ ಬಗ್ಗೆ ಲಘುವಾಗಿ ಹೇಳಿಕೆ ನೀಡಿದ್ದು ಶೈಕ್ಷಣಿಕ ವಲಯದಲ್ಲಿನ ಸಿಟ್ಟಿಗೆ ಕಾರಣವಾಗಿದೆ.

ಪ್ರತಾಪ್‌ ಸಿಂಹ ಹೇಳಿಕೆ ಸಂಬಂದ ಕೆಎಸ್‌ ಒಯು ಕುಲಪತಿಗಳು ಹಾಗೂ ವಿಶ್ರಾಂತ ಕುಲಪತಿಗಳು ಜಸ್ಟ್‌ ಕನ್ನಡಗೆ ಪ್ರತಿಕ್ರಿಯಿಸಿದ್ದು ಹೀಗೆ…

ಯುಜಿಸಿ ಮಾನ್ಯತೆ ಪಡೆದಿದೆ :

ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ಹಲಸೆ ಮಾತನಾಡಿ, ಮುಕ್ತ ವಿವಿ ಯುಜಿಸಿ ಮಾನ್ಯತೆ ಹೊಂದಿದೆ. ಜತೆಗೆ ನ್ಯಾಕ್‌ ನಿಂದ ಎ ಪ್ಲಸ್‌ ಪ್ರಮಾಣೀಕೃತಗೊಂಡಿದೆ. ಇದರಿಂದ  ಅಕಾಡೆಮಿಕ್‌ ಸ್ಟೇಟಸ್‌ ಬಂದಿದೆ. ವಿವಿಗೆ ಅದರದ್ದೆ ಆದ ಗೌರವ, ಮಾನ್ಯತೆ ಇದೆ. ನಾವು ಬೇಕಾಬಿಟ್ಟಿ ಪ್ರಮಾಣಪತ್ರಗಳನ್ನು ಕೊಡಲಾಗದು. ನಮಗೆ ನಮ್ಮದೆ ಆದ ಜವಾಬ್ದಾರಿ ಇದೆ. ವಿವಿ ಬಗ್ಗೆ ಯಾರೇ ಹಗುರವಾಗಿ ಹೇಳಿಕೆ ನೀಡಿದರೂ ಅದು ತಪ್ಪು.

 

ಪರಿಶೀಲಿಸಿ ಹೇಳಿಕೆ ನೀಡಲಿ :

ಸಂಸತ್‌ ಸದಸ್ಯ ಸ್ಥಾನದಲ್ಲಿರುವವರು ಬಹಿರಂಗ ಹೇಳಿಕೆ ನೀಡುವ ಮುನ್ನ ಜವಾಬ್ದಾರಿ ಅರಿತು ಮಾತನಾಡಬೇಕು. ಯಾವುದೇ ಹೇಳಿಕೆ ನೀಡುವ ಮುನ್ನ ಪರಿಶೀಲನೆ ನಡೆಸಿ ಹೇಳಿಕೆ ನೀಡಬೇಕಾಗುತ್ತದೆ. ಮುಕ್ತ ವಿವಿಗೆ ತನ್ನದೇ ಆದ ಘನತೆ, ಗೌರವವಿದೆ. ಇದಕ್ಕೆ ವಿರುದ್ಧವಾದ ಹೇಳಿಕೆ ಖಂಡನೀಯ, ಎಂದು ವಿಶ್ರಾಂತ ಕುಲಪತಿ ಹಾಗೂ ಹೆಸರಾಂತ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ ಅಭ್ಯರ್ಥಿ ಟೀಕಿಸುವ ಭರದಲ್ಲಿ KSOU  ಸರ್ಟಿಫಿಕೆಟ್‌ ಲೇವಡಿ ಮಾಡಿದ ಪ್ರತಾಪ್‌ ಸಿಂಹ..

 

 

ವ್ಯತ್ಯಾಸವಿಲ್ಲ :

ಸಾಂಪ್ರದಾಯಿಕ ವಿವಿಗಳು ನೀಡುವ ಸರ್ಟಿಫಿಕೆಟ್‌ ಗಳಿಗೂ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿ ನೀಡುವ ಸರ್ಟಿಫಿಕೆಟ್‌ ಗೂ ಯಾವುದೇ ವ್ಯತ್ಯಾಸವಿಲ್ಲ. ಎರಡು ಒಂದೇ ಸಮಾನವಾದದ್ದು ಎಂದು ಯುಜಿಸಿಯೇ ಸ್ಪಷ್ಟಪಡಿಸಿದೆ. ಕೆಎಸ್‌ ಒಯುವಿನಿಂದ ಪ್ರಮಾಣ ಪತ್ರ ಪಡೆದ ಅನೇಕರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಐಎಎಸ್‌, ಕೆಎಎಸ್‌ ಹುದ್ದೆಗಳನ್ನು ಅಲಂಕರಿಸಿದ್ದಾರೆ.  ಎಂಬಿಎ ಪದವಿಗೆ ಎಐಸಿಟಿಇ ಹಾಗೂ ಬಿಎಡ್‌ ಕೋರ್ಸ್‌ ಗಳಿಗೆ ಎಂಸಿಟಿಎ ಮಾನ್ಯತೆ ನೀಡಿದೆ.  ಆದ್ದರಿಂದ ಕೆಎಸ್‌ ಒಯು ಸರ್ಟಿಫಿಕೇಟ್‌ ಬಗ್ಗೆ ಲಘು ಹೇಳಿಕೆ ಸರಿಯಲ್ಲ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ವಿಶ್ರಾಂತ ಕುಲಪತಿ ಪ್ರೊ.ಶಿವಲಿಂಗಯ್ಯ ಅಭಿಪ್ರಾಯಪಟ್ಟರು.

KEY WORDS : ksou, certificate, recognized, Prathap Simha

 

ENGLISH SUMMARY : 

Bjp MP Pratap Simha’s light-hearted remarks on the Karnataka State Open University certificate (KSOU) have sparked outrage in academic circles.

Karnataka State Open University (KSOU) Vice-Chancellor Prof. Sharanappa Halase said that the Open University is ugc accredited. It has also been certified A plus by NAAC. This has resulted in academic status. The university has its own respect and recognition. We cannot issue arbitrary certificates. We have our own responsibility. Anyone who makes a light-hearted statement about the university is wrong.