ಮೈಸೂರು, ಮೇ 13, 2019 : (www.justkannada.in news) : ನಗರದ ಬೃಹತ್ ಕೆರೆ ಎಂದೇ ಹೆಸರು ಪಡೆದಿರುವ ‘ ಲಿಂಗಾಂಬುದ್ದಿ ಕೆರೆ ‘ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಕ್ರೀಯಾಯೋಜನೆ ಸಿದ್ಧಪಡಿಲು ಹಸಿರು ನಿಶಾನೆ ದೊರೆತಿದೆ.
ಸಣ್ಣ ನೀರಾವರಿ ಇಲಾಖೆಯ ಒಂದು ಕೋಟಿ ರೂ.ಗಳ ಅನುದಾನದಡಿ ಕ್ರೀಯಾ ಯೋಜನೆ ಸಿದ್ಧಪಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಸಂಬಂಧ ಜಸ್ಟ್ ಕನ್ನಡ ಡಾಟ್ ಇನ್ ಜತೆ ಮಾತನಾಡಿದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮರಿಸ್ವಾಮಿ ಅವರು ಹೇಳಿದಿಷ್ಟು..
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರ ಸೂಚನೆಯಂತೆ ಸಣ್ಣ ನೀರಾವರಿ ಇಲಾಖೆಯ ಅನುದಾನದಡಿ ಕ್ರೀಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಮುಂದಿನ ಎರಡು ವಾರಗಳಲ್ಲಿ ಈ ಯೋಜನೆ ಸಿದ್ಧಗೊಳ್ಳಲಿದೆ. ಬಳಿಕ ಸರಕಾರದಿಂದ ಅನುಮೋದನೆ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಲು ಟೆಂಡರ್ ಕರೆದು ಅಗತ್ಯ ಕ್ರಮ ಜರುಗಿಸಲಾಗುತ್ತದೆ ಎಂದರು.
ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೂಳು ತೆಗೆಯುವುದು ಸೇರಿದಂತೆ ಕಳೆಗಳನ್ನು ತೆಗೆಯುವುದು, ವಾಕಿಂಗ್ ಪಾಥ್ ಅಭಿವೃದ್ಧಿ ಪಡಿಸುವುದು, ಕೋಡಿ ನೀರು ಸರಾಗ ಹರಿಯುವಿಕೆಗೆ ಪೂರಕ ಕ್ರಮ ಕೈಗೊಳ್ಳುವುದು ಹಾಗೂ ಪ್ರಮುಖವಾಗಿ ಫೀಡರ್ ಕಾಲುವೆಗಳ ಒತ್ತುವರಿ ತೆರವುಗೊಳಿಸಿ ಮಳೆ ನೀರು ಕೆರೆಗೆ ಹರಿದು ಬರುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು ಕ್ರೀಯಾ ಯೋಜನೆಯ ಪ್ರಮುಖ ಅಂಶಗಳು ಎಂದು ಸಹಾಯಕ ಇಂಜಿನಿಯರ್ ಮರಿಸ್ವಾಮಿ ವಿವರಿಸಿದರು.
ಈಗಾಗಲೇ ಕೆಲ ರಾಜ ಕಾಲುವೆಗಳನ್ನು ಖಾಸಗಿ ಬಡಾವಣೆ ಮಾಲೀಕರು ಒತ್ತುವರಿ ಮಾಡಿಕೊಂಡಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಎಲ್ಲಾ ಒತ್ತುವರಿಗಳನ್ನು ಶೀಘ್ರದಲ್ಲೇ ತೆರೆವುಗೊಳಿಸಿ ಮಳೆ ನೀರು ಕೆರೆಗೆ ಹರಿದು ಬರುವಂತೆ ಮಾಡಲಾಗುವುದು ಎಂದರು.
ಹಿನ್ನೆಲೆ :
ಮೈಸೂರಿನ ದಟ್ಟಗಳ್ಳಿ, ರಾಮಕೃಷ್ಣ ನಗರ, ಲಿಂಬಾಂಬುದ್ದಿ ಪಾಳ್ಯ ಹಾಗೂ ಯೂನಿವರ್ಸಿಟಿ ಲೇಔಟ್ ಪ್ರದೇಶಗಳ ವ್ಯಾಪ್ತಿಯಲ್ಲಿನ ಲಿಂಗಾಂಬುದ್ದಿ ಕೆರೆ ವಿಸ್ತೀರ್ಣದಲ್ಲಿ ಅತೀ ದೊಡ್ಡ ಕೆರೆ. ಆದರೆ ಈ ಬಾರಿ ವರುಣನ ಮುನಿಸಿನಿಂದ ಕೆರೆ ನೀರು ಬತ್ತಿ ಹೋಗಿದ್ದು, ಆಟದ ಮೈದಾನದಂತಾಗಿದೆ.
ಈ ಹಿನ್ನೆಲೆಯಲ್ಲಿ ಕೆರೆ ಸಂರಕ್ಷಣೆ ಮಾಡುವಂತೆ ಯೂನಿವರ್ಸಿಟಿ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ನಿವೃತ್ತ ಪ್ರಾಧ್ಯಾಪಕ ನಾಣಯ್ಯ ಅವರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ,ದೇವೇಗೌಡ ಅವರ ಮೊರೆ ಹೋಗಿದ್ದರು.
ಸಂಘಧ ಸದಸ್ಯರ ಮನವಿಗೆ ಪೂರಕವಾಗಿ ಸ್ಪಂಧಿಸಿದ ಸಚಿವ ಜಿಟಿಡಿ, ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದರು. ಅದರಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕೆರೆ ಪರಿಶೀಲಿಸಿ ವರದಿ ನೀಡಿದರು. ಆದರೆ ಕೆರೆ ಸಂರಕ್ಷಣೆಗೆ ಯಾವ ಅನುದಾನದಡಿ ಹಣ ವೆಚ್ಚ ಮಾಡಬೇಕು ಎಂಬ ಗೊಂದಲದಲ್ಲಿದ್ದಾಗ, ಜಿಲ್ಲಾ ಉಸ್ತುವಾರಿ ಸಚಿವರೇ ಮಧ್ಯಪ್ರವೇಶಿಸಿ ಸಣ್ಣ ನೀರಾವರಿ ಇಲಾಖೆಯ ಅನುದಾನವನ್ನು ಸದುಪಯೋಗ ಪಡಿಸಿಕೊಂಡು ಕೆರೆ ಸಂರಕ್ಷಣೆಗೆ ಸೂಚಿಸಿದರು.
ಈಗ ಅದರಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕ್ರೀಯಾಯೋಜನೆ ಸಿದ್ಧಪಡಿಸುತ್ತಿದ್ದು ಮುಂದಿನ ಕೆಲ ದಿನಗಳಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಕಾರ್ಯರೂಪಕ್ಕೆ ಬರಲಿದೆ.
key words : mysore-lingabudi-lake-restoration-g.t.devegowda