ಬೆಂಗಳೂರು, ಏ.25, 2024 : (www.justkannada.in news ) ಕರ್ನಾಟಕ ರಾಜ್ಯ ಕಾಂಗ್ರೆಸ್ ನ ಭದ್ರ ಕೋಟೆ. ತುರ್ತುಪರಿಸ್ಥಿತಿ ಯ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಪರಾಭವ ಅನುಭವಿಸಿದ ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಂತಿದ್ದೇ ಕರ್ನಾಟಕ. 1977 ರ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷವನ್ನು 26 ಕ್ಷೇತ್ರದಲ್ಲಿ ಗೆಲ್ಲಿಸಿದರು. 1952 ರಿಂದ 1991 ರಿಂದ ನಡೆದ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ್ದೆ ಅಧಿಪತ್ಯ ಕರ್ನಾಟಕದಲ್ಲಿ.
ಮತದಾರ, ಕಾಂಗ್ರೆಸ್ ಹಾಗೂ ಇಂದಿರಾಗಾಂಧಿ ಅವರ ನಾಯಕತ್ವದಲ್ಲಿ ಅಚಲ ನಂಬಿಕೆ ಇಟ್ಟಿದ್ದರು. ಕಾಂಗ್ರೆಸ್ ಚಿನ್ಹೆಯಡಿ ಯಾರು ಸ್ಪರ್ದೆ ಮಾಡಿದರೂ ಅವರ ಗೆಲುವು ಖಚಿತ ಎಂಬ ಭಾವನೆ ಆಳವಾಗಿ ಬೇರೂರಿದ್ದ ಕಾಲವದು.1967 ರ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ಹದಿನೆಂಟು ಸ್ಥಾನ ಗೆದ್ದು ಕೊಂಚ ಹಿನ್ನಡೆ ಅನುಭವಿಸಿತ್ತು.
1996 ಕಾಂಗ್ರೆಸ್ ಗೆ ಸಂಕಷ್ಟದ ಸ್ಥಿತಿಯನ್ನು ಸೃಷ್ಟಿ ಮಾಡಿತು. ಆಗ ಅಧಿಕಾರದಲ್ಲಿ ಇದ್ದ ದೇವೇಗೌಡರ ಜನತಾದಳ, 16 ಕ್ಷೇತ್ರದಲ್ಲಿ ಜಯಭೇರಿ ಬಾರಿಸಿತು. ಬಿಜೆಪಿ ಆರು ಕ್ಷೇತ್ರದಲ್ಲಿ ಗೆದ್ದರೆ, ಕಾಂಗ್ರೆಸ್ ಕೇವಲ ಐದು ಕ್ಷೇತ್ರದಲ್ಲಿ ಮಾತ್ರ ಜಯ ಸಾಧಿಸಿತು. ಆದರೆ 1999 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹದಿನೆಂಟು ಸ್ಥಾನ ಗೆದ್ದು, ತಾನಿನ್ನೂ ಬಲಶಾಲಿ ಎಂದು ಸಾರಿತು. ಬಿಜೆಪಿ ಏಳು, ಜೆಡಿಯು ಮೂರು ಕ್ಷೇತ್ರದಲ್ಲಿ ಗೆದ್ದವು.
ಕಾಂಗ್ರೆಸ್ ನ ಪಾರಮ್ಯ ಬಹುಶಃ 2004 ರಿಂದ ಕುಸಿಯತೊಡಗಿತು. ಆಗ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಗೆದ್ದದ್ದು ಮಾತ್ರ ಎಂಟು ಸ್ಥಾನ. ಅದೇ ಸಮಯದಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಎಸ್ ಎಮ್ ಕೃಷ್ಣ ನೇತ್ರತ್ವದಲ್ಲಿ ಕಾಂಗ್ರೆಸ್ ಸೋತಿತ್ತು.
2004 ಪ್ರಾರಂಭವಾಯಿತು ಕಮಲದ ಗಮಲ. ಆ ಚುನಾವಣೆಯಲ್ಲಿ ಬಿಜೆಪಿ ಹದಿನೆಂಟು ಕ್ಷೇತ್ರದಲ್ಲಿ ಜಯ ಕಂಡಿತು. 2009 ರ ಚುನಾವಣೆಯಲ್ಲಿ ಯೂ ಬಿಜೆಪಿ ನಾಗಾಲೋಟ ಮುಂದುವರೆದು ಹತ್ತೊಂಬತ್ತು ಸ್ಥಾನ ಗಳಿಸಿ, ಕಾಂಗ್ರೆಸ್ ನ ಓಟ ಕೇವಲ ಒಂಭತ್ತು ಸ್ಥಾನಕ್ಕೆ ಇಳಿಯುವ೦ತೆ ಮಾಡಿತು.
2014 ರಲ್ಲಿ ಬಿಜೆಪಿ 17 ಕ್ಷೇತ್ರದಲ್ಲಿ ಗೆದ್ದರೆ ಕಾಂಗ್ರೆಸ್ ಪಡೆದ ಸ್ಥಾನ ಒಂಭತ್ತು. 2019 ರಲ್ಲಿ ಬಿಜೆಪಿ ಪಕ್ಷ ಕರ್ನಾಟಕದಲ್ಲಿ ಸರ್ವಕಾಲಿಕ ದಾಖಲೆ ಬರೆದು 25 ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿತು. ಬಿಜೆಪಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸಹ ಮಂಡ್ಯದಲ್ಲಿ ಅಂದಿನ ಮುಖ್ಯ ಮಂತ್ರಿ ಕುಮಾರಸ್ವಾಮಿ ಯವರ ಪುತ್ರ ನಿಖಿಲ್ ಸೋಲಿಸಿ ಗೆದ್ದರು.
ಕಾಂಗ್ರೆಸ್ ಜೆಡಿಎಸ್ ಮೈತ್ರಿಯನ್ನು ಜನ ಸರಾಸಗಟಾಗಿ ತಿರಸ್ಕರಿಸಿದರು. ಎರಡೂ ಪಕ್ಷಗಳು ಒಂದೊಂದು ಕ್ಷೇತ್ರದಲ್ಲಿ ಗೆದ್ದು ಮುಖ ಭಂಗ ಅನುಭವಿಸಿದವು.
ಪ್ರಸ್ತುತ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತ್ರತ್ವದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಕಳೆದ ವರ್ಷ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿ ಅಧಿಕಾರ ಹಿಡಿದಿದೆ. ಕಾಂಗ್ರೆಸ್ ಪಕ್ಷ ವಿಧಾನ ಸಭಾ ಚುನಾವಣೆಯಲ್ಲಿ ನೀಡಿದ್ದ ಐದು ಗ್ಯಾರಂಟಿ ಗಳನ್ನು ಅನುಷ್ಠಾನಕ್ಕೆ ತಂದಿದೆ. ಬಹುತೇಕ ಜನ ಅವುಗಳ ಪಲಾನುಭವಿಗಳಾಗಿ ಖುಷಿ ವ್ಯಕ್ತ ಪಡಿಸಿದ್ದಾರೆ.
ಆ ಗ್ಯಾರಂಟಿ ಗಳ ಜೊತೆಗೆ ಕಾಂಗ್ರೆಸ್ ಕೇಂದ್ರ ದಲ್ಲಿ ಮರಳಿ ಅಧಿಕಾರಕ್ಕೆ ಬರಲು ಮತ್ತಷ್ಟು ಗ್ಯಾರಂಟಿ ಗಳನ್ನು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಯವರು ತಾವೇ ಗ್ಯಾರಂಟಿ ಎಂದು ವ್ಯಕ್ತಿಗತವಾಗಿ ಪ್ರಚಾರಕ್ಕೆ ಇಳಿದಿದ್ದಾರೆ.
“ ಫಿರ್ ಏಕ್ ಬಾರ್, ಮೋದಿ ಕಿ ಸರ್ಕಾರ್ ʼ ಎಂಬ ಘೋಷಣೆ ಮೊಳಗಿಸಿದ್ದಾರೆ. ಮೋದಿಯವರಿಗೆ ಪಕ್ಷಕ್ಕಿಂತ ತಮ್ಮ ವರ್ಷಸ್ಸೇ ಮೇಲು ಎಂಬ ಭಾವನೆ ಮೂಡಿದಂತೆ ಕಾಣುತ್ತಿದೆ.
ಬಿಜೆಪಿ ಗೆ ಹತ್ತಕ್ಕೂ ಹೆಚ್ಚು ಕ್ಷೇತ್ರದಲ್ಲಿ ಒಳ ಏಟಿನ ಭಯ ಕಾಡುತ್ತಿದೆ. ಬೆಳಗಾವಿಯಲ್ಲಿ ಕಮಲ ಪಕ್ಷಕ್ಕೆ ಸ್ಥಳಿಯ ವಾಗಿ ಸ್ಪರ್ದಿಸುವ ಅಭ್ಯರ್ಥಿ ಇರಲಿಲ್ಲಾ. ಹುಬ್ಬಳ್ಳಿ ಧಾರವಾಡ ಜಿಲ್ಲೆಯ ಜಗದೀಶ್ ಶೆಟ್ಟರ್ ರವರನ್ನು ಅಲ್ಲಿ ಕಣಕ್ಕಿಳಿಸಿದೆ, ದಾವಣಗೆರೆಯಲ್ಲಿ ಜಿ ಎಮ್ ಸಿದ್ದೇಶ್ವರ್ ಸ್ಪರ್ಧಿಸಿದರೆ ಸೋಲಾಗಬಹುದು ಎಂದು ಅಂದಾಜಿಸಿ ಅವರ ಪತ್ನಿಗೆ ಟಿಕೇಟ್ ನೀಡಿದೆ. ಇದು ಕಮಲ ಪಾಳಯದಲ್ಲಿ ಬಿರುಕು ಉಂಟು ಮಾಡಿದೆ.
ಉಡುಪಿ- ಚಿಕ್ಕಮಗಳೂರು ಕ್ಷೇತದಲ್ಲಿ ಪಕ್ಷದ ಕಾರ್ಯಕರ್ತರಿಂದಲೇ ಆಕ್ರೋಶ ಕ್ಕೆ ಗುರಿಯಾದ ಶೋಭಾ ಕರಾಂದ್ಲಾಜೆ ಅವರನ್ನು, ಮಾಜಿ ಸಿಎಂ ಡಿ ವಿ ಸದಾನಂದ ಗೌಡ ಪ್ರತಿನಿಧಿಸಿದ್ದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ವರ್ಗಾಯಿಸಲಾಯಿತು. ಆ ಮೂಲಕ ಸದಾನಂದ ಗೌಡರನ್ನು ಮೂಲೆಗೆ ಸರಿಸಲಾಯಿತು.
ಮೈಸೂರು – ಕೊಡಗು ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಗೆ ಕೊಕ್ ನೀಡಿ ರಾಜ ವಂಶದ ಯದುವೀರ್ ಗೆ ಟಿಕೇಟ್ ನೀಡಿದೆ. ಇನ್ನು ಚಿತ್ರದುರ್ಗದ ಸ್ಥಿತಿ ಶೋಚನೀಯ. ಬಾಗಲಕೋಟೆ ಯ ಪರಭಾವ ಅಭ್ಯರ್ಥಿ ಗೋವಿಂದ ಕಾರಜೋಳ ಚಿತ್ರದುರ್ಗದಲ್ಲಿ ಒಲ್ಲದ ಮನಸ್ಸಿನಿಂದ ಹುರಿಯಾಳು.
ಜೆಡಿಎಸ್ ಪಕ್ಷ ದೇವೇಗೌಡರ ಅಳಿಯ ಡಾ ಸಿ ಎನ್ ಮಂಜುನಾಥ್ ಅವರನ್ನು ಕಮಲ ಪಕ್ಷದ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಣಕ್ಕಿಳಿಸಿ ಉಪ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿ ಕೆ ಸುರೇಶ ಅಧಿಪತ್ಯಕ್ಕೆ ಅಂತ್ಯ ಹಾಡುವ ಸವಾಲು ಒಡ್ಡಿದ್ದಾರೆ.
ಇನ್ನು ಮೈಸೂರು – ಕೊಡಗು ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಜಯ ಸಾಧಿಸುವ ಹೊಣೆಗಾರಿಕೆ ಸಿದ್ದರಾಮಯ್ಯ ನವರ ಹೆಗಲ ಮೇಲಿದೆ. ಸಿದ್ದರಾಮಯ್ಯ ನವರ ನೇತ್ರತ್ವದಲ್ಲಿ 2009 ರ ಚುನಾವಣೆಯಲ್ಲಿ ಬಿಟ್ಟರೆ, ಬೇರೆಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿಲ್ಲಾ. 2014 ರಲ್ಲಿ ಸಿದ್ದರಾಮಯ್ಯ ನವರೆ ಮುಖ್ಯ ಮಂತ್ರಿ ಯಾಗಿದ್ದರು. ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತು. 2019 ರಲ್ಲೂ ಬಿಜೆಪಿಯ ಪ್ರತಾಪ್ ಸಿಂಹ ಗೆದ್ದು ಬೀಗಿದರು.
ಈ ಬಾರಿ ಸಿದ್ದರಾಮಯ್ಯ ಕಾಂಗ್ರೆಸ್ ಸಾಮಾನ್ಯ ಕಾರ್ಯಕರ್ತ ಲಕ್ಷ್ಮಣ ರನ್ನು ರಾಜವಂಶದ ಉತ್ತರಾಧಿಕಾರಿ ವಿರುದ್ಧ ಕಣಕ್ಕಿಳಿಸಿದ್ದಾರೆ. ಚಾಮರಾಜನಗರ ದಲ್ಲಿ ಸಚಿವ ಹೆಚ್ ಸಿ ಮಹಾದೇವಪ್ಪ ಹೋರಾಡಿ ತಮ್ಮ ಪುತ್ರ ಸುನಿಲ್ ಬೋಸ್ ಗೆ ಟಿಕೇಟ್ ಕೊಡಿಸಿದ್ದಾರೆ.ಮೈಸೂರು ಸಿದ್ದರಾಮಯ್ಯ ನವರ ತವರು ಜಿಲ್ಲೆ. ಇಲ್ಲೇ ಮುಖ್ಯ ಮಂತ್ರಿ ತನ್ನ ಅಭ್ಯರ್ಥಿ ಯನ್ನು ಗೆಲ್ಲಿಸದಿದ್ದರೆ ಹೇಗೆ. ಇದು ಸಿದ್ದರಾಮಯ್ಯ ನವರ ನಾಯಕತ್ವ ಕ್ಕೆ ಸವಾಲು. ಪಕ್ಕದ ಚಾಮರಾಜನಗರ ದಲ್ಲೂ ಕಾಂಗ್ರೆಸ್ ಗೆಲ್ಲಿಸುವ ಹೊಣೆ ಸಿದ್ದರಾಮಯ್ಯ ನವರ ಹೆಗಲಿಗೆ.
ಇದಲ್ಲದೆ, ಕರ್ನಾಟಕದಲ್ಲಿ ಇ ಬಾರಿ ಇಪ್ಪತ್ತು ಲೋಕಸಭಾ ಕ್ಷೇತ್ರದ ಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ, ಕಾಂಗ್ರೆಸ್ ಪಕ್ಷ ಕಳೆದುಕೊಂಡಿರುವ ಗತ ವೈಭವವನ್ನು ಮರಳಿ ಕೊಡಿಸಬೇಕಿದೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್. ಕಾಂಗ್ರೆಸ್ ಗೂ ಟಿಕೇಟ್ ಹಂಚಿಕೆಯ ಬೇಗುದಿ ತಟ್ಟದೆ ಬಿಟ್ಟಿಲ್ಲಾ.
ಇನ್ನು ಮಂಡ್ಯದಲ್ಲಿ ಒಕ್ಕಲಿಗರ ಹಿಡಿತ ಯಾರದು ಎಂದು ಸಾಬೀತು ಪಡಿಸುವ ಗುರಿ ಶಿವಕುಮಾರ್ ಮೇಲಿದೆ. ಮಂಡ್ಯ ಮತದಾರ ಸ್ವಾಭಿಮಾನಿಗಳು. ಇದುವರೆವಿಗೂ ಹೊರಗಿನವರನ್ನು ಗೆಲ್ಲಿಸಿದ ಉದಾಹರಣೆ ಇಲ್ಲಾ. ಸುಮಲತಾ ಗೆಲುವು ಸಾಧಿಸಿದ್ದು ಮಂಡ್ಯ ಸೊಸೆ ಅಂಬರೀಶ್ ಪತ್ನಿ ಎಂಬ ಕಾರಣಕ್ಕೆ. ಈ ಬಾರಿ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಯವರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸ್ಟಾರ್ ಚಂದ್ರು ಇಲ್ಲಿ ಕಾಂಗ್ರೆಸ್ ಹುರಿಯಾಳು. ಇಬ್ಬರೂ ಒಕ್ಕಲಿಗ ಸಮುದಾಯದವರೆ. ಮತದಾರ ಸ್ಥಳೀಯ ಅಭ್ಯರ್ಥಿ ಗೆ ಜೈ ಅನ್ನುವರೊ, ಕುಮಾರಸ್ವಾಮಿ ಯವರಿಗೆ ಗೆಲುವು ಕೊಡುವರೊ ಕಾದು ನೋಡಬೇಕು.
ಕಾಂಗ್ರೆಸ್ ಪಕ್ಷ ಗತ ವೈಭವ ಕಾಣಲು ಇದು ಸಕಾಲವಿರವಹುದೇ? ಜೂನ್ 4 ರ ವರೆಗೆ ಕಾಯಲೇಬೇಕು.
- ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು.
key words : Lok Sabha Elections, Will Congress Return, To Its Glory?
summary :
Lok Sabha Elections 2024: Will Congress Return To Its Glory?
Karnataka is a stronghold of the State Congress. Karnataka has stood behind the Congress party, which was defeated in the Lok Sabha elections held after the Emergency. In the 1977 elections, the people won the Congress party in 26 seats. In all the elections held from 1952 to 1991, the Congress party dominated Karnataka.