ಮೈಸೂರು,ಮೇ,15,2024 (www.justkannada.in): ರಾಜ್ಯದಲ್ಲಿ ಎನ್ ಇಪಿ ಕಿತ್ತುಹಾಕಿ ಎಸ್ ಇಪಿ ಜಾರಿಗೊಳಿಸುತ್ತೇವೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪರೀಕ್ಷೆ ವಿಚಾರದಲ್ಲಿ ಸರ್ಕಾರ ತುಘಲಕ್ ಆಡಳಿತ ನಡೆಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ಶಿಕ್ಷಣ ಕ್ಷೇತ್ರವನ್ನು ಹಾಳುಮಾಡಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಎಂಎಲ್ ಸಿ ಅರುಣ್ ಶಹಾಪುರ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅರುಣ್ ಶಹಾಪುರ, ಪಠ್ಯ ಪುಸ್ತಕದಲ್ಲಿ ಬದಲಾವಣೆ ಮಾಡುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿ ಮಾಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ಧಿಕ್ಕರಿಸಿದೆ. 5, 8, 9ನೇ ತರಗತಿಗಳ ಪರೀಕ್ಷೆ ನಡೆಸುವ ವಿಚಾರದಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡಲಾಯಿತು. ಪರೀಕ್ಷೆ ವಿಚಾರ ನ್ಯಾಯಾಲಯದ ಮೆಟ್ಟಿಲೇರುವಂತಾಯಿತು. ಇಂದಿಗೂ ಪರೀಕ್ಷಾ ಫಲಿತಾಂಶ ಕೊಡಲು ಸಾಧ್ಯವಾಗಿಲ್ಲ. ಶಿಕ್ಷಣ ಸಚಿವ ಮಧುಬಂಗಾರಪ್ಪಗೂ, ಶಿಕ್ಷಣಕ್ಕೂ ಸಂಬಂಧವೇ ಇಲ್ಲದಂತಾಗಿದೆ. ವೆಬ್ ಕಾಸ್ಟಿಂಗ್ ಬಗ್ಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಐದು ದಿನಗಳಿರುವಾಗ ಶಿಕ್ಷಕರಿಗೆ ಮಾಹಿತಿ ನೀಡಲಾಯಿತು. ಕ್ಯಾಮರಾ ಕಣ್ಗಾವಲಿನಲ್ಲಿನ ಭೀತಿಯಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆದ ಕಾರಣ ಫಲಿತಾಂಶ ಕುಸಿತ ಕಂಡಿದೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಪರೀಕ್ಷೆ ವಿಚಾರದಲ್ಲಿ ಸರ್ಕಾರ ತುಘಲಕ್ ಆಡಳಿತ ನಡೆಸಿದೆ. ಶಿಕ್ಷಕರ ಮೇಲೆ ಗದಾಪ್ರಹಾರ ನಡೆಸಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಮಧುಬಂಗಾರಪ್ಪರನ್ನು ಸಂಪುಟದಿಂದ ವಜಾಗೊಳಿಸಿ.
ರಾಜ್ಯದಲ್ಲಿ ಎನ್ ಇ ಪಿ ಕಿತ್ತುಹಾಕಿ ಎಸ್ ಇ ಪಿ ಜಾರಿಗೊಳಿಸುತ್ತೇವೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಾಲ್ಕು ವರ್ಷದ ಪದವಿ ಬದಲು ಮೂರು ವರ್ಷದ ಪದವಿ ಕಡ್ಡಾಯ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಇದರಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಲಿದೆ. ಕೆಲವೊಂದು ಶೈಕ್ಷಣಿಕ ಸೌಲಭ್ಯಗಳಿಂದ ರಾಜ್ಯದ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ. ಎನ್ ಇಪಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದಾರೆ. ರಾಜ್ಯ ಸರ್ಕಾರ ಸಂವೇದನಾಶೀಲತೆಯನ್ನು ಕಳೆದುಕೊಂಡಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅಸಮರ್ಥರಾಗಿದ್ದಾರೆ. ಮಧುಬಂಗಾರಪ್ಪರನ್ನು ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದಿಂದ ಕಿತ್ತು ಹಾಕಬೇಕು ಎಂದು ಒತ್ತಾಯಿಸಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ಅಥವಾ ಜೆಡಿಎಸ್ ನವರು ಸ್ಪರ್ಧಿಸುತ್ತಾರಾ? ಎಂಬ ವಿಚಾರವನ್ನು ಪಕ್ಷದ ಹಿರಿಯ ನಾಯಕರು ಸ್ಪಷ್ಟಪಡಿಸುತ್ತಾರೆ. ಬಿಜೆಪಿ ಹಾಗೂ ಜೆಡಿಎಸ್ ಎನ್ನುವುದಕ್ಕಿಂತ ಎನ್ ಡಿಎ ಅಭ್ಯರ್ಥಿ ಸ್ಪರ್ಧಿಸುತ್ತಾರೆ. ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿದ್ದರೂ ಪಕ್ಷ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಎಲ್ಲವೂ ಸುಖಾಂತ್ಯ ಕಾಣಲಿದೆ ಎಂಬ ವಿಶ್ವಾಸವಿದೆ. ಯಾರೇ ಅಭ್ಯರ್ಥಿಯಾದರೂ ನಮ್ಮ ಬೆಂಬಲ ಇರಲಿದೆ. ಪಕ್ಷದ ವರಿಷ್ಠರು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮಾಜಿ ಎಂಎಲ್ಸಿ ಅರುಣ್ ಶಹಾಪುರ ಹೇಳಿದರು.
Key words: government -ruined -education sector- BJP-Arun Shahpur