ಬಿಜೆಪಿಯಿಂದ ಅಪಪ್ರಚಾರ: ಯಾವುದೇ ಕಾರಣಕ್ಕೂ ‘ಗ್ಯಾರಂಟಿ’ ನಿಲ್ಲುವುದಿಲ್ಲ- ಸಿಎಂ ಸಿದ್ದರಾಮಯ್ಯ ಭರವಸೆ.

ಬೆಂಗಳೂರು,ಮೇ,20,2024 (www.justkannada.in):  ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುವುದಿಲ್ಲ, ಎಂದು ಸಿಎಂ ಸಿದ್ದರಾಮಯ್ಯ  ಭರವಸೆ ನೀಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಪ್ರೆಸ್‌ ಕ್ಲಬ್‌ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಲೋಕಸಭೆ ಚುನಾವಣೆ ನೀತಿ ಸಂಹಿತೆ ಇರುವುದರಿಂದ ವರ್ಷದ ಸಂಭ್ರಮಾಚಾರಣೆಯನ್ನು ಮಾಡಲು ಆಗುತ್ತಿಲ್ಲ. ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುವುದು ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಖಜಾನೆ  ಖಾಲಿ ಆಗುತ್ತೆ, ಪಾಪರ್‌ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಅದು ಸತ್ಯಕ್ಕೆ ದೂರವಾದ ಮಾತು. ಐದು ಗ್ಯಾರಂಟಿ ಯೋಜನೆಗಳಿಗೆ 36 ಸಾವಿರ ಕೋಟಿ ರೂ, ಖರ್ಚಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿ ಮಾಡಲು ಸಹಕರಿಸಲಿಲ್ಲ ದಾಸ್ತಾನು ಇದ್ರೂ ಕೂಡ ಅಕ್ಕಿ ಕೊಡಲು ತಾತ್ಸಾರ ಮಾಡಿದರು. ಮೊದಲು ಅಕ್ಕಿ ಕೊಡುತ್ತೇವೆ ಅಂದರು.  ಬಳಿಕ ಅಕ್ಕಿ ಕೊಡಲ್ಲ ಎಂದು  ಕೇಂದ್ರದಿಂದ ಪತ್ರ ಬಂತು. ಯಾಕೆ ಕೊಡಲ್ಲ ಎಂದು ಕೇಳಿದವು ಮೇಲಿಂದ ನಮಗೆ ಆದೇಶ ಬಂದಿದೆ ಎಂದರು ನಾವು ಬೇರೆ ರಾಜ್ಯಗಳಲ್ಲೂ ಅಕ್ಕಿ ಖರೀದಿಗೆ ಯತ್ನಿಸಿದವು. ಆಗಲಿಲ್ಲ ಹೀಗಾಗಿ ಹಣ ನೀಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.

ಅನ್ನಭಾಗ್ಯ ಅಕ್ಕಿ ಹಣವನ್ನ ನಾವು ಮಧ್ಯವರ್ತಿಗಳ ಹಾವಳಿ ಇಲ್ಲದೆ ಖಾತೆಗೆ ಹಣ ಹಾಕಲಾಗುತ್ತಿದೆ.   ನೇರವಾಗಿ ಹಣ ಜಮೆ ಮಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Key words: Guarantee, not, stop, CM Siddaramaiah