ಮೈಸೂರು,ಮೇ,21,2024 (www.justkannada.in): ಬಂಗಾಳ ಜೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನಲೆ, ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ವರುಣಾರ್ಭಟ ಮುಂದುವರೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯದಲ್ಲಿ ಪೂರ್ವ ಮುಂಗಾರು ಮತ್ತಷ್ಟು ಚುರುಕುಗೊಂಡಿದ್ದು, ಮೈಸೂರು, ಚಾಮರಾಜನಗರ ಭಾಗದಲ್ಲಿ ಎಡ ಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ. ಮೆ 22 ರಿಂದ 24 ರವರಗೆ ಮತ್ತಷ್ಟು ಜೋರಾಗುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಮೈಸೂರು, ಚಾಮರಾಜನಗರ, ಕೊಡುಗು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮೇ 31ಕ್ಕೆ ಮುಂಗಾರು ಮಳೆ ಕೇರಳ ಪ್ರವೇಶಿಸಲಿದ್ದು, ಜೂನ್ 4 ಕ್ಕೆ ಮಾನ್ಸೂನ್ ಮಾರುತ ಕರ್ನಾಟಕ ಪ್ರವೇಶ ಮಾಡಲಿದೆ. ಈ ಮೂಲಕ ಬಿರು ಬೇಸಿಗೆಯಿಂದ ಬೆಂದಿದ್ದ ಜನತೆಗೆ ಮಳೆರಾಯ ನೆಮ್ಮದಿ ನೀಡಿದ್ದಾನೆ. ನೆಮ್ಮದಿಯ ಜೊತೆ ಕೆಲ ಅವಾಂತರ ತಂದೊಡ್ಡಿದ್ದಾನೆ. ಹೌದು ಬಿರುಗಾಳಿ ಸಹಿತ ಮಳೆಗೆ ರಾಜ್ಯಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶದ ಬಾಳೆ ಬೆಳೆ ನಾಶವಾಗಿದ್ದು, ಮಳೆ ರಭಸಕ್ಕೆ ಬಿತ್ತನೆ ಮಾಡಿದ ಬಿತ್ತನೆ ಬೀಜಗಳು ಕೊಚ್ಚಿಹೋಗಿವೆ. ಇನ್ನು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದ್ದು, ಬಿತ್ತನೆ ಮಾಡಿದ ಜೋಳ,ಸೂರ್ಯಕಾಂತಿ, ಶುಂಟಿ,ತಂಬಾಕು ಬಹುತೇಕ ಬೆಳೆಗಳು ನಾಶವಾಗಿದೆ. ಇದರಿಂದಾಗಿ ಮೈಸೂರು, ಚಾಮರಾಜನಗರ ಭಾಗದ ರೈತರು ಕಂಗಾಲಾಗಿದ್ದಾರೆ.
ಕೆಆರ್ ಎಸ್ ಮತ್ತು ಕಬಿನಿ ಜಲಾಶಯಗಳ ಒಳ ಹರಿವಿನಲ್ಲಿ ಹೆಚ್ಚಳ
ನಿರಂತರ ಮಳೆಯಿಂದಾಗಿ ಕಾವೇರಿ ಕಪಿಲಾ ನದಿಗಳು ಮೈದುಂಬುತ್ತಿದ್ದು, ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳ ಒಳ ಹರಿವಿನಲ್ಲಿ ಹೆಚ್ಚಳವಾಗಿದೆ. ಕೇರಳದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಕಬಿನಿ ಜಲಾಶಯಕ್ಕೆ 841 ಕ್ಯೂಸೆಕ್ ನೀರು ಒಳ ಹರಿವು ಬರುತ್ತಿದೆ. ರಾಜ್ಯದಲ್ಲೇ ಎರೆಡು ಭಾರಿ ತುಂಬುವ ಏಕೈಕ ಜಲಾಶಯ ಇದಾಗಿದ್ದು 84 ಅಡಿ ಸಾಮರ್ಥ್ಯ ಹೊಂದಿದೆ. ಸದ್ಯ ಜಲಾಶಯದಲ್ಲಿ 56.96 ಅಡಿ ನೀರು ಸಂಗ್ರಹವಾಗಿದ್ದು ಕಬಿನಿ ಜಲಾಶಯದಲ್ಲಿ 6.23 ಟಿಎಂಸಿ ನೀರಿದೆ. ಜಲಾಶಯದಿಂದ ಮೈಸೂರು, ಬೆಂಗಳೂರು ಹಾಗೂ ಚಾಮರಾಜನಗರ ಜಿಲ್ಲೆಗೆ ಕುಡಿಯುವ ನೀರಿಗೆ 300 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.
Key words: rain, state, increase, inflow