ಮೈಸೂರು, ಮೇ : ( www.justkannada.in news ) ವಿಶ್ವವಿಖ್ಯಾತ ಪಾರಂಪರಿಕ ಕಟ್ಟಡವೊಂದನ್ನು ʼ ಎಂ-ಸ್ಯಾಂಡ್ ʼ ಬಳಸಿ ಸಂರಕ್ಷಣೆ ಮಾಡಲು ಮುಂದಾಗಿದೆ ರಾಜ್ಯ ಪುರಾತತ್ವ ಇಲಾಖೆ.
ಹೌದು, ಇದೇನು ಹೊಸ ತಂತ್ರಜ್ಞಾನ ಬಂದಿದೆಯೇ.? ಎಂದು ಅಚ್ಚರಿ ಪಡಬೇಡಿ. ಇದು ಅವೈಜ್ಞಾನಿಕವಾಗಿ ಸರಕಾರಿ ಕಾಮಗಾರಿಗಳನ್ನು ನಡೆಸುವ ಸಂಪ್ರದಾಯಕ್ಕೆ ಮತ್ತೊಂದು ಸೇರ್ಪಡೆ ಅಷ್ಟೆ.
‘ಕ್ಲಾಕ್ ಟವರ್’ ಎಂದೇ ಕರೆಯುವ ʼದೊಡ್ಡ ಗಡಿಯಾರʼ ( Dufferin Clock Tower is a historic relic and heritage structure of Mysore city) ಮೈಸೂರು ನಗರದ ಹೃದಯಭಾಗದಲ್ಲಿರುವ ಅರಮನೆ ಮತ್ತು ಪುರಭವನದ ಸಮೀಪದಲ್ಲಿದೆ. ದುಸ್ಥಿತಿಯಲ್ಲಿರುವ ಈ ಗಡಿಯಾರವನ್ನು ಸಂರಕ್ಷಿಸಿಲು ನಗರ ಪಾಲಿಕೆ ಕೆಲ ವರ್ಷಗಳ ಹಿಂದೆಯೇ ಆರ್ಥಿಕ ನೆರವು ನೀಡಿತ್ತು.
ಈ ಹಿಂದೆಯೇ ಡ್ರೋಣ್ ಮೂಲಕ ಪುರಾತತ್ವ ಹಾಗೂ ಪರಂಪರೆ ಇಲಾಖೆ ಮ್ಯಾಪಿಂಗ್ ನಡೆಸಿ ಅಂದಾಜು 35 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲು ಪಾಲಿಕೆಗೆ ಅಂದಾಜು ಪಟ್ಟಿ ಸಲ್ಲಿಸಿತ್ತು. ಪಾಲಿಕೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಆದರೆ, ಅನುಮೋದನೆ ದೊರೆತು ಎರಡು-ಮೂರು ವರ್ಷಗಳೇ ಕಳೆದರು ಕೆಲಸ ಮಾತ್ರ ಆರಂಭವಾಗಿರಲಿಲ್ಲ. ಇದೀಗ ದುರಸ್ತಿ ಕೆಲಸ ಆರಂಭವಾಗಿದೆ.
ಕಡೆಗೂ ಈಗ ಕಾಮಗಾರಿ ಪ್ರಾರಂಭಗೊಂಡಿದೆ. ಆದರೆ ವಿಪರ್ಯಾಸವೆಂದರೆ, ಕಾಮಗಾರಿ ಮಾತ್ರ ಯಾವುದೋ ಕಟ್ಟಡ ನವೀಕರಣ ಮಾಡುವಂತೆ ಅವೈಜ್ಞಾನಿಕವಾಗಿ ನಡೆಯುತ್ತಿರುವುದು. ತಜ್ಞರ ಸಲಹೆಯಂತೆ ಗಾರೆ ಬಳಸಿ ಗಡಿಯಾರದ ಗೋಪುರ ಸಂರಕ್ಷಣೆ ಕಾರ್ಯ ನಡೆಯಬೇಕಾಗಿತ್ತು. ಆದರೆ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಬಗ್ಗೆ ಯಾವುದೇ ತಿಳುವಳಿಕೆ ಇಲ್ಲದ ವ್ಯಕ್ತಿಗೆ ಸಂರಕ್ಷಣೆ ಕಾಮಗಾರಿ ಜವಾಬ್ದಾರಿ ನೀಡಿರುವುದೇ ಎಡವಟ್ಟಿಗೆ ಕಾರಣ.
ಈ ಬಗ್ಗೆ ಮೈಸೂರಿನ ಪಾರಂಪರಿಕ ತಜ್ಞ ಪ್ರೊ.ರಂಗರಾಜು ಅವರು ʼಜಸ್ಟ್ ಕನ್ನಡʼ ಜತೆ ಮಾತನಾಡಿದರು.
ಗಡಿಯಾರದ ಮೇಲ್ಭಾಗದಲ್ಲಿ ಬಿರುಕು, ಒಳ ಭಾಗದಲ್ಲಿ ಶಿಥಿಲಾವಸ್ಥೆ ತಲುಪಿದೆ. ಗಂಟೆಯಲ್ಲಿ ನಿರಂತರವಾಗಿ ಬಿರುಕು ಮೂಡುತ್ತಲೇ ಇದೆ. ಗಡಿಯಾರದ ಕೆಳಗಡೆ ಹೆಗ್ಗಣಗಳು ಬಿಲ ತೋಡಿವೆ. ಸಿಡಿಲಿನಿಂದ ರಕ್ಷಣೆಗೆ ಕಾಪರ್ ವೈರ್ ಹಾಕಿದ್ದು, ಇದೀಗ ಆ ವೈರ್ ಕೂಡ ಕಟ್ ಆಗಿದೆ. ಗಂಟೆ ಮೇಲಿರುವ ಆರ್ಚ್ ಬಿರುಕು ಮೂಡಿದೆ. ಮೇಲಿನ ಗುಮ್ಮಟವೂ ಬಿದ್ದು ಹೋಗಿದೆ. ಕಬ್ಬಿಣ ತುಕ್ಕು ಹಿಡಿಯುತ್ತಿದೆ.
ಪಾರಂಪರಿಕ ತಜ್ಞರು ಹಾಗೂ ಪುರಾತತ್ವ ಇಲಾಖೆ ದೊಡ್ಡ ಗಡಿಯಾರದ ಬಗ್ಗೆ ಡ್ರೋಣ್ ಮ್ಯಾಪಿಂಗ್ ಹಾಗೂ ಮೈಕ್ರೋ ಸ್ಟಡಿ ಮಾಡಿ ವರದಿ ಪ್ರಕಾರ ತಕ್ಷಣ ದುರಸ್ತಿ ಕಾರ‍್ಯ ಕೈಗೆತ್ತಿಕೊಳ್ಳಲು ಸಲಹೆ ನೀಡಲಾಗಿತ್ತು. ಈ ಹಿಂದೆ ನಗರ ಪಾಲಿಕೆ ಆಯುಕ್ತರಾಗಿದ್ದ ಶಿಲ್ಪನಾಗ್ ಅವರ ಅವಧಿಯಲ್ಲೇ ದುರಸ್ತಿಗೆ ಅನುದಾನ ಮಂಜೂರಾಗಿತ್ತು. ಆದರೆ, ವರ್ಷಗಳು ಕಳೆದರು ಕಾಮಗಾರಿ ಪ್ರಾರಂಭವಾಗಲೇ ಇಲ್ಲ.
ಇದೀಗ ದುರಸ್ತಿ ಕಾರ್ಯ ಆರಂಭಗೊಂಡಿದೆ. ಕೆಲಸ ಶುರುವಾಯ್ತಲ್ಲ ಎಂದು ಸಂತೋಷ ಪಡುವುದೋ ಅಥವಾ ಹೀಗೆ ಅವೈಜ್ಞಾನಿಕವಾಗಿ ನಡೆಯುತ್ತಿದೆಯಲ್ಲಾ ಎಂದು ದುಖಿಃಸುವೋದು ತಿಳಿಯುತ್ತಿಲ್ಲ.
ಪಾರಂಪರಿಕ ಇಲಾಖೆ ಟೆಂಡರ್ ಮೂಲಕ ಗುತ್ತಿಗೆದಾರರಿಗೆ ದುರಸ್ತಿ ಕಾರ್ಯ ನಡೆಸಲು ಅನುಮತಿ ನೀಡಿದೆ. ಆದರೆ ತಜ್ಞರ ಸಲಹೆಯನ್ನು ಕಡೆಗಣಿಸಿ ಕಾಮಗಾರಿ ನಡೆಸಲಾಗುತ್ತಿದೆ. ಗೋಪುರವನ್ನು ಗಾರೆ ಬಳಸಿ ದುರಸ್ತಿ ಮಾಡಬೇಕು. ಆದರೆ, ಗುತ್ತಿಗೆ ಪಡೆದ ಕಾಂಟ್ರ್ಯಾಕ್ಟರ್ ಎಂ-ಸ್ಯಾಂಡ್ ಬಳಸಿ ರಿಪೇರಿ ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಹೇಳಿದರು ಆತ ನಮ್ಮ ಮಾತನ್ನು ಕೇಳುವ ಸ್ಥತಿಯಲ್ಲಿ ಇಲ್ಲ ಎಂದು ಪ್ರೊ.ರಂಗರಾಜು ಅಸಮಧಾನ ವ್ಯಕ್ತಪಡಿಸಿದರು.
ಗಡಿಯಾರದ ವಿಶೇಷತೆ?:
ದೊಡ್ಡ ಗಡಿಯಾರ ನೆಲದಿಂದ ಸುಮಾರು 75 ಅಡಿ ಎತ್ತರದಲ್ಲಿದೆ. 1927ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅರಮನೆಯಲ್ಲಿದ್ದ ನೌಕರರು ಮತ್ತು ಅಧಿಕಾರಿಗಳು ಹಣವನ್ನು ಸಂಗ್ರಹಿಸಿ ಈ ಸ್ಮಾರಕವನ್ನು ನಿರ್ಮಿಸಿದ್ದರು.
1990ರವರೆಗೂ ಇದರ ಘಂಟಾನಾದ ಐದು ಕಿ.ಮೀ.ವರೆಗೂ ಗಂಟೆಗೊಮ್ಮೆ ಕೇಳಿಸುತ್ತಿತ್ತು. ಆದರೆ, ಕಟ್ಟಡದ ಸುರಕ್ಷತೆ ದೃಷ್ಟಿಯಿಂದ 1990ರಲ್ಲಿ ಗಡಿಯಾರದ ಗಂಟೆ ಬಾರಿಸುವುದನ್ನು ನಿಲ್ಲಿಸಲಾಯಿತು
KEY WORDS: Mysore City, Clock Tower, Use of M-SAND, for tower repair, Heritage experts strongly object
summary:
The heritage department has given permission to the contractors to carry out the repair work through a tender. But the work is being carried out ignoring the advice of experts. The tower should be repaired using mortar. However, the contractor who got the contract is carrying out repairs using M-Sand. He is not in a position to listen to us,” said Prof. Rangaraju.
The big clock is about 75 feet above the ground. The memorial was built in 1927 to mark the 25th anniversary of the reign of Nalwadi Krishnaraja Wodeyar IV by collecting funds from the employees and officials of the palace.