ಜೆಡಿಎಸ್- ಬಿಜೆಪಿ ಅಭ್ಯರ್ಥಿ ಗೆದ್ದರೆ ಶಿಕ್ಷಕರ ಪರವಾಗಿ ನಾನು ಕೆಲಸ ಮಾಡುವೆ ಎಂಬ ಜಿ.ಟಿ ದೇವೇಗೌಡರ ಹೇಳಿಕೆ ಹಾಸ್ಯಸ್ಪದ- ಹೆಚ್.ಎ ವೆಂಕಟೇಶ್.

ಮೈಸೂರು,ಮೇ,30,2024 (www.justkannada.in): ದಕ್ಷಿಣ ಶಿಕ್ಷಕರ ಚುನಾವಣಾ ಅಂಗವಾಗಿ ಏರ್ಪಡಿಸಿದ್ದ ಶಿಕ್ಷಕರ ಸಭೆಯಲ್ಲಿ ಎನ್ ಡಿಎ ಅಭ್ಯರ್ಥಿ ಗೆದ್ದರೆ ಶಿಕ್ಷಕರ ಪರವಾಗಿ ನಾನು ಕಾರ್ಯನಿರ್ವಹಿಸುವೆ ಎಂಬ  ಶಾಸಕ ಜಿ.ಟಿ ದೇವೇಗೌಡರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಕೆ.ಪಿ.ಸಿ.ಸಿ. ವಕ್ತಾರ ಎಚ್. ಎ  ವೆಂಕಟೇಶ್ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್.ಎ ವೆಂಕಟೇಶ್,  2018 ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ನೇಮಿಸಿದಾಗ ಅಧಿಕಾರ ಸ್ವೀಕರಿಸಲು ಇಷ್ಟವಿಲ್ಲದೆ ಬಹಳ ದಿನ ಅಸಮಾಧಾನಗೊಂಡಿದ್ದ ಜಿ.ಟಿ ದೇವೇಗೌಡರಿಗೆ ಶಿಕ್ಷಕರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಚುನಾವಣೆ ಗೋಸ್ಕರ ಹೇಳಿಕೆ ನೀಡುವುದು ಜಿ. ಟಿ ದೇವೇಗೌಡರ ಚಾಳಿ. ತಮ್ಮ ಕ್ಷೇತ್ರದಲ್ಲಿ ಶಾಸಕರಾಗಿ ಮಾಡಬೇಕಾಗಿರುವ ಹಲವಾರು ಕೆಲಸಗಳಿವೆ. ಜಿ.ಟಿ ದೇವೇಗೌಡರ ಈ ಹೇಳಿಕೆ ಎನ್ ಡಿಎ ಅಭ್ಯರ್ಥಿಗೆ ವಿಧಾನಪರಿಷತ್ ಸದಸ್ಯರಾಗುವ ಸಾಮರ್ಥ್ಯವಿಲ್ಲ ಎಂಬುದು ಸ್ಪಷ್ಟವಾದಂತಿದೆ. ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಅರಿವಿಲ್ಲದ ವ್ಯಕ್ತಿ ಶಿಕ್ಷಕರ ಕ್ಷೇತ್ರದಿಂದ ಅಭ್ಯರ್ಥಿಯಾಗಿರುವುದು ಜೆಡಿಎಸ್ ಮತ್ತು ಬಿಜೆಪಿಯ ರಾಜಕೀಯ ದಿವಾಳಿತನ ತೋರಿಸುತ್ತದೆ. ವಿಧಾನಪರಿಷತ್ತಿನಲ್ಲಿ ಶಿಕ್ಷಣ ಕ್ಷೇತ್ರದ ಕಲ್ಪನೆಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಶಿಕ್ಷಕರಿಗೆ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರವಿದ್ದಾಗ ಯಾವುದೇ ರೀತಿಯ ಉಪಯೋಗವಾಗಿಲ್ಲ. ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ವ್ಯಕ್ತಿಗಳೇ ಕಾಂಗ್ರೆಸ್ ಸರ್ಕಾರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮಹತ್ವ ನೀಡಿಲ್ಲ ಎಂದು ಹೇಳುತ್ತಿರುವುದು ಸರಿಯಲ್ಲ. ಸ್ವತಃ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನು ಕಾಲೇಜಿನ ಉಪನ್ಯಾಸಕರಾಗಿದ್ದವರು. ತಾವು ಮಂಡಿಸಿದ ಪ್ರತಿ ಬಜೆಟ್ ಗಳಲ್ಲಿ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಿದ್ದಾರೆ ಎಂದು ವೆಂಕಟೇಶ್ ತಿಳಿಸಿದರು.

ಪ್ರತಿಷ್ಠಿತ ಮೈಸೂರಿನ ಮಹಾರಾಣಿ ಕಾಲೇಜಿಗೆ ಹೊಸ ಕಾಯಕಲ್ಪವನ್ನು ನೀಡಿದ್ದಾರೆ. ಸಾವಿರಾರು ವಿದ್ಯಾರ್ಥಿನಿಯರ ವಿದ್ಯಾರ್ಜನೆಗೆ ಅವಕಾಶ ನೀಡಿದ್ದಾರೆ. ಸಾವಿರಾರು ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಿದ್ದಾರೆ. ರಾಜ್ಯದಲ್ಲೆ ಮೈಸೂರನ್ನು ಮುಂಚೂಣಿಯಲ್ಲಿರಿಸಿದ್ದಾರೆ ಎಂದು ಹೆಚ್.ಎ ವೆಂಕಟೇಶ್ ತಿಳಿಸಿದರು.

ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೈಸೂರಿನಲ್ಲಿ ಒಂದೇ ಒಂದು ಸಾರ್ವಜನಿಕರು ಗುರುತಿಸುವ ಕೆಲಸ ಮಾಡಿಲ್ಲ. ಇವರಿಂದ ನಿರೀಕ್ಷಿಸಲು ಸಾಧ್ಯವಿಲ್ಲ. 80ರ ದಶಕದಲ್ಲಿ ಅನುದಾನ ರಹಿತ ಶಾಲಾ ಕಾಲೇಜುಗಳನ್ನು ಮಂಜೂರು ಮಾಡಿದ್ದೆ ಜನತಾ ಪಕ್ಷ. ಶಿಕ್ಷಕರಿಗೆ ಸಂಬಳವಿಲ್ಲದಂತೆ ಮಾಡಿದ್ದೆ ಇವರ ಕೆಲಸ. ಶಿಕ್ಷಣ ಕ್ಷೇತ್ರವನ್ನು ಶೋಷಣೆಗೆ ಒಳಪಡಿಸಿದವರು ಇಂದು ಶಿಕ್ಷಣ ಕ್ಷೇತ್ರದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದರು.

ವೀರಪ್ಪ ಮೊಯ್ಲಿರವರ ಕಾಂಗ್ರೆಸ್ ಸರ್ಕಾರ ಸಿಇಟಿ ಮೂಲಕ  ಬಡ ರೈತರ ಮಕ್ಕಳು ಕೂಡ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ನೀಟ್ ಮೂಲಕ ರಾಜ್ಯದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದಿಂದ ದೂರ ಇರುವಂತೆ ಮಾಡಿದ್ದು ಬಿಜೆಪಿ ಅಲ್ಲವೇ? ಎಂದು ಹೆಚ್.ಎ ವೆಂಕಟೇಶ್ ಪ್ರಶ್ನಿಸಿದರು.

ತಮ್ಮ ಪ್ರತಿಷ್ಠೆಗಾಗಿ ಜೆಡಿಎಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಶಿಕ್ಷಕರ ಗಮನ ಸೆಳೆಯಲು ಸುಳ್ಳುಗಳ ಸರಮಾಲೆಯನ್ನೇ ಜೆಡಿಎಸ್ ಮತ್ತು ಬಿಜೆಪಿ ಬಿಚ್ಚಿಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಕ್ಷೇತ್ರದ ಪವಿತ್ರತೆ ದೃಷ್ಟಿಯಿಂದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರ ಆಯ್ಕೆ ಖಚಿತ ಎಂದು ವೆಂಕಟೇಶ್ ವಿಶ್ವಾಸ ವ್ಯಕ್ತಪಡಿಸಿದರು.

Key words: GT Deve Gowda, statement, JDS-BJP, HA Venkatesh