ಸಿಎಂ ಸಿದ್ದರಾಮಯ್ಯ ʼಕನ್ನಡ ಪರ ʼ ಹೇಳಿಕೆ ತಿರುಚಿ ಇಂಗ್ಲಿಷ್‌ ಪತ್ರಿಕೆಯ ಕಿತಾಪತಿ..!

chief minister Siddaramaiah Kannada language in Karnataka

 

ಬೆಂಗಳೂರು, ಜೂ.21,2024: (www.justkannada.in news) ಕರ್ನಾಟಕದಲ್ಲಿ ಕನ್ನಡ ವಾತಾವರಣ ನಿರ್ಮಾಣ ಮಾಡಬೇಕು ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ತಿರುಚಿ ಆಂಗ್ಲ ಮಾಧ್ಯಮ ವರದಿ  ಮಾಡಿದೆ. ಆ ಮೂಲಕ ಕರ್ನಾಟಕದಲ್ಲಿ ನೆಲಸಿರುವ ಕನ್ನಡೇತರರನ್ನು ಪ್ರಚೋದನೆ ಮಾಡುವ ಕಾರ್ಯಕ್ಕೆ ಮುಂದಾಗಿದೆ.

ಕನ್ನಡ  ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಅಂಗವಾಗಿ ವಿಧಾನಸೌಧದ ಪಶ್ಚಿಮದ್ವಾರದ ಬಳಿ ನಾಡದೇವಿ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆ ನಿರ್ಮಿಸಲು ಗುರುವಾರ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ, ನಂತರ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು.

ಈ ವೇಳೆ, ಕನ್ನಡ ಭಾಷೆ, ನೆಲ, ಜಲವನ್ನು ಸಂರಕ್ಷಣೆ ಮಾಡಿಕೊಂಡು ಹೋಗುವ ಕೆಲಸ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ. ಕರ್ನಾಟಕದಲ್ಲಿ ಕನ್ನಡ ವಾತಾವರಣವನ್ನು ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕ ಎಂದು ಮುಖ್ಯಮಂತ್ರಿ ಸಿದ್ದಾಮಯ್ಯ ಕರೆ ನೀಡಿದರು. ಮಾತೃಭಾಷೆಯಲ್ಲಿ ಮಾತನಾಡುವುದು ಹೆಮ್ಮೆಯ ಸಂಗತಿಯಾಗಬೇಕು. ಪ್ರತಿಯೊಬ್ಬರೂ ಕೂಡ  ಕರ್ನಾಟಕದಲ್ಲಿ ಬಾಳಿ ಬದುಕುವವರೊಂದಿಗೆ ಕನ್ನಡದಲ್ಲಿಯೇ ಮಾತನಾಡುತ್ತೇನೆ. ಕನ್ನಡ ಬಿಟ್ಟು ಬೇರೆ ಭಾಷೆ  ಮಾತನಾಡುವುದಿಲ್ಲ ಎಂದು ತೀರ್ಮಾನ ಮಾಡಬೇಕು.

ಕನ್ನಡಿಗರು ಉದಾರಿಗಳು. ಹಾಗಾಗಿಯೇ ಬೇರೆ ಭಾಷೆ ಮಾತನಾಡುವವರೂ ಕೂಡ ಕನ್ನಡ ಕಲಿಯದೆ ಬದುಕುವ ವಾತಾವರಣ ಕರ್ಣಾಟಕದಲ್ಲಿದೆ. ತಮಿಳುನಾಡು , ಆಂಧ್ರ, ಕೇರಳಕ್ಕೆ ಹೋದರೆ ಅವರ ಮಾತೃಭಾಷೆಯಲ್ಲಿಯೇ ಮಾತನಾಡುತ್ತಾರೆ. ನಾವೂ ಕೂಡ ನಮ್ಮ ಮಾತೃಭಾಷೆಯಲ್ಲಿಯೇ ವ್ಯವಹರಿಸಬೇಕು. ಅದು ನಮಗೆ ಹೆಮ್ಮೆಯ ವಿಷಯವಾಗಬೇಕು. ಅದರಲ್ಲಿ ಕೀಳರಿಮೆ ಅಗತ್ಯವಿಲ್ಲ. ಕರ್ನಾಟಕದಲ್ಲಿ ವಾಸ ಮಾಡುವವರು ಕನ್ನಡ ಕಲಿಯಬೇಕು.  ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ.ಅದಕ್ಕಾಗಿ ಇಲ್ಲಿ ವಾಸ ಮಾಡುವವರೆಲ್ಲಾರೂ ಕನ್ನಡವನ್ನು ಕಲಿಯಲೇಬೇಕು. ಹಾಗೆಂದು ನಾವು ಸುಮ್ಮನಿರುವಂತಿಲ್ಲ. ಕನ್ನಡಿಗರು ದುರಭಿಮಾನಿಗಳಲ್ಲ. ಆದರೆ ಕನ್ನಡದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಬೇರೆ ರಾಜ್ಯಗಳಲ್ಲಿ ದುರಭಿಮಾನಿಗಳಂತೆ ನಾವು ಆಗಬೇಕಿಲ್ಲ. ಆದರೆ ನಮ್ಮ ಭಾಷೆ, ನೆಲ, ನಾಡಿನ ಬಗೆ ಗೌರವ, ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ಭಾಷಣವನ್ನೂ ತಿರುಚಿ ಆಂಗ್ಲ ಮಾಧ್ಯಮ ವರದಿ ಮಾಡಿದೆ. ಈ ವರದಿಯಲ್ಲಿ, ʼ  ಕರ್ನಾಟಕದಲ್ಲಿ ಕನ್ನಡ ಭಾಷೆ ಹೊರತು ಪಡಿಸಿ ಬೇರೆ ಯಾವುದೇ ಭಾಷೆ ಮಾತನಾಡುವಂತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆʼ ಎಂಬ ಹೆಡ್‌ ಲೈನ್ಸ್‌ ನೊಂದಿಗೆ ಸುದ್ಧಿ ಪ್ರಕಟಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಭಾಷಣಕ್ಕೂ ಈ ಇಂಗ್ಲಿಷ್‌ ಪತ್ರಿಕೆಯ ತಲೆ ಬರಹಕ್ಕೂ ಸಂಬಂಧವೇ ಇಲ್ಲ. ಇದು ಉದ್ದೇಶ ಪೂರ್ವಕವಾಗಿ ಕರ್ನಾಟಕದಲ್ಲಿ ನೆಲೆಸಿರುವ ಅನ್ಯ ಭಾಷಿಕರನ್ನು ರಾಜ್ಯ ಸರಕಾರದ ಹಾಗೂ ಕನ್ನಡಿಗರ ವಿರುದ್ಧ ಎತ್ತಿಕಟ್ಟುವ ಕೃತ್ಯ ಎಂಬುದು ಮೇಲ್ನೊಟ್ಟಕ್ಕೆ ಕಂಡು ಬರುತ್ತಿದೆ.

ಮುಂದುವರಿದು, ನಾಮಫಲಕಗಳಲ್ಲಿ ಶೇ.೬೦ ರಷ್ಟು ಕನ್ನಡ ಭಾಷೆ ಇರಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂಬ ಆದೇಶ ಜಾರಿಗೊಳಿಸಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ ಎಂಬರ್ಥದ ವರದಿ ಮಾಡಿದೆ.

key words: chief minister, Siddaramaiah, Kannada language, in Karnataka