ಹಾಲು ಉತ್ಪಾದನೆ: ಕೆಎಂಎಫ್ ಇತಿಹಾಸದಲ್ಲಿಯೇ ಇದೊಂದು ಮೈಲಿಗಲ್ಲು- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜುಲೈ,2,2024 (www.justkannada.in):  ಕೆಎಂಎಫ್ ವತಿಯಿಂದ  ಪ್ರತಿದಿನ  1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕೆಎಂಎಫ್ ಇತಿಹಾಸದಲ್ಲಿಯೇ ಇದೊಂದು ಮೈಲಿಗಲ್ಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದರು.

ಇಂದು ಕೆಎಂಎಫ್  ವತಿಯಿಂದ ಒಂದು ಕೋಟಿ ಲೀಟರ್ ಹಾಲಿನ ಸಂಗ್ರಹದ ಸಂಭ್ರಮಾಚರಣೆಯ ಅಂಗವಾಗಿ ಗೋ ಮಾತೆಗೆ ಪೂಜೆ ಸಲ್ಲಿಸಿ ನಂತರ  ಕಾರ್ಯಕ್ರಮವನ್ನು ಉದ್ದೇಶಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಕಳೆದ ವರ್ಷ ಜೂನ್ ಮಾಹೆಯಲ್ಲಿ ದಿನವೊಂದಕ್ಕೆ 90 ಲಕ್ಷ ಲೀ. ಇತ್ತು ಎಂದರು.

ಹಾಲಿನ ಸೊಸೈಟಿಗಳು ರೈತರ ಸಂಘಟನೆ

ಹಿಂದೆ ಅವರು  ಪಶುಸಂಗೋಪನಾ ಇಲಾಖೆ ಸಚಿವರಾಗಿದ್ದ ಸಂದರ್ಭದಲ್ಲಿ ಹಾಲು ಒಕ್ಕೂಟಗಳಿಗೆ ಡೈರಿಯನ್ನು ಹಸ್ತಾಂತರ ಮಾಡಿಕೊಟ್ಟಿದ್ದನ್ನು ಸ್ಮರಿಸಿದ  ಸಿಎಂ ಸಿದ್ದರಾಮಯ್ಯ, ಅಲ್ಲಿಯವರೆಗೂ ಡೈರಿಗಳು ಹಾಗೂ ಹಾಲು ಒಕ್ಕೂಟಗಳು ಪ್ರತ್ಯೇಕವಾಗಿದ್ದವು. ಹಾಲಿನ ಸೊಸೈಟಿಗಳೂ ಕೂಡ  ರೈತರ ಸಂಘಟನೆಗಳೇ ಆಗಿವೆ ಎಂದರು.

ರೈತರಿಗೆ ನೆರವು

ರಾಜ್ಯದಲ್ಲಿ ಸುಮಾರು 16000 ಸೊಸೈಟಿಗಳಿದ್ದು, 15 ಹಾಲು ಒಕ್ಕೂಟಗಳಿವೆ. ಕೆಲವೆಡೆ ಎರಡು ಮೂರು ಜಿಲ್ಲೆ ಸೇರಿ ಒಕ್ಕೂಟ ಮಾಡಿಕೊಂಡಿದ್ದಾರೆ. 15 ಮದರ್ ಡೈರಿಗಳಿವೆ. ಒಂದು ಕೋಟಿ ಹಾಲು ಉತ್ಪಾದನೆಯಾಗುತ್ತಿರುವುದರಿಂದ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ನಲ್ಲಿ 50 ಮೀ.ಲೀ ಹಾಲು ಹೆಚ್ಚು ಮಾಡಲಾಗಿದೆ. ಇಷ್ಟು ಹಾಲನ್ನು ಮಾರಾಟ ಮಾಡಬೇಕಿದೆ. ನಾವು ರೈತರಿಗೆ ಹಾಗೂ ಸೊಸೈಟಿಗಳಿಗೆ ಹಾಲು ಬೇಡ ಎನ್ನಲಾಗುವುದಿಲ್ಲ.  ರೈತರಿಗೆ ಸಹಾಯ ಮಾಡಲು  ನಂದಿನಿ ಹಾಲಿನ  ಪ್ರಮಾಣವನ್ನು ಹೆಚ್ಚಿಸಲಾಗಿದೆ. ಹೆಚ್ಚಾಗಿರುವ ಪ್ರಮಾಣಕ್ಕೆ 2.00 ರೂಪಾಯಿ ಹೆಚ್ಚಿಸಲಾಗಿದೆ ಎಂದರು.

ವಿಪಕ್ಷದ ಅಪಪ್ರಚಾರ

ವಿರೋಧ ಪಕ್ಷದವರು ಇದನ್ನು ಅರ್ಥ ಮಾಡಿಕೊಳ್ಳದೆ ಹಾಲಿನ ಬೆಲೆ ಜಾಸ್ತಿ ಮಾಡಿದ್ದಾರೆ ಎಂದು ಹೇಳಿ ಅಪಪ್ರಚಾರ ಮಾಡುತ್ತಿದ್ದಾರೆ. ರೈತರ  ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂದು ಅನಿಸುತ್ತಿದೆ. ಹಾಲು ಉತ್ಪಾದನೆ ಹೆಚ್ಚಾದರೆ ಹೆಚ್ಚು ಆದಾಯ ಬರಲಿದೆ. ಒಂದು ಕೋಟಿ ಲೀಟರ್. ಉತ್ಪಾದನೆಯಾದರೆ ಒಂದು ದಿನಕ್ಕೆ 5 ಕೋಟಿ  ಪ್ರೋತ್ಸಾಹ ಧನವನ್ನು ಸರ್ಕಾರ ಕೊಡುತ್ತದೆ. ಒಂದು ತಿಂಗಳಿಗೆ 150 ಕೋಟಿ, ವರ್ಷಕ್ಕೆ 1800ಕೋಟಿ ರೂ.ಗಳನ್ನು ನೀಡಿ  ರೈತರಿಗೆ ಸಹಾಯ ಮಾಡಲಾಗುತ್ತಿದೆ ಎಂದರು.

2.00 ರೂ.ಇದ್ದ ಪ್ರೋತ್ಸಾಹಧನವನ್ನು 5 ರೂ. ಮಾಡಿದವನು ನಾನು. ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಈ ಬಗ್ಗೆ ತಿಳಿಯದೆ ಮಾತನಾಡುತ್ತಾರೆ ಎಂದರು.

ಹಾಲಿನ ದರ ಹೆಚ್ಚಳವಾಗಿಲ್ಲ

ಒಂದು ವೇಳೆ ಹಾಲಿನ ಬೆಲೆ ಹೆಚ್ಚಾದರೂ ಕೊಳ್ಳುವವರಿಗೆ ಅದು ಭಾರವಾಗುತ್ತದೆ. ರೈತರಿಗೆ ಭಾರವಾಗುವುದಿಲ್ಲ, ಸಹಾಯವಾಗುತ್ತದೆ. ಹಾಲಿನ ಬೆಲೆ ಹೆಚ್ಚು ಮಾಡಿಲ್ಲ ಎಂದು ಪುನರುಚ್ಚರಿಸಿದ ಮುಖ್ಯಮಂತ್ರಿಗಳು  .

ಗ್ರಾಹಕರಿಗೆ   ಪ್ರಮಾಣ ಹೆಚ್ಚು ಮಾಡಿ ಬೆಲೆ ನಿಗದಿ ಮಾಡಿದ್ದರೂ ಕೂಡ ನೆರೆಯ ರಾಜ್ಯಗಳಿಗೆ ಹೋಲಿಸಿದರೆ  ಕರ್ನಾಟಕದ ಹಾಲಿನ ಬೆಲೆ ಕಡಿಮೆ ಇದೆ. ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಗ್ರಾಹಕರಿಗೆ ಕಡಿಮೆ ದರದಲ್ಲಿ ಹಾಲು ಕೊಡುತ್ತಿರುವುದು ಕರ್ನಾಟಕ ಮಾತ್ರ ಎಂದರು.

Key words: Milk, production, KMF, CM Siddaramaiah