ಮೈಸೂರು,ಜುಲೈ,10,2024 (www.justkannada.in): ಮುಡಾ ಹಗರಣವನ್ನ ಸಿಬಿಐ ತನಿಖೆಗೆ ವಹಿಸಲು ಸ್ಪಷ್ಟವಾಗಿ ನಿರಾಕರಿಸಿರುವ ಸಿಎಂ ಸಿದ್ದರಾಮಯ್ಯ, ನಮ್ಮ ಪೊಲೀಸರು ತನಿಖೆ ವಿಚಾರದಲ್ಲಿ ಸಮರ್ಥರಿದ್ದಾರೆ. ತನಿಖೆಯಲ್ಲಿ ತಪ್ಪಾಗಿದೆ ಎಂಬುದು ಗೊತ್ತಾದರೇ ಎಲ್ಲರೂ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿ, ಮುಡಾ ಹೆಸರು ಹೇಳುತ್ತಿದ್ದಂತೆ ಗರಂ ಆದ ಸಿಎಂ ಸಿದ್ದರಾಮಯ್ಯ, ಎಷ್ಟು ಸಲ ಇದರ ಬಗ್ಗೆ ಹೇಳುವುದು. ಮುಡಾದಲ್ಲಿ 50:50 ರದ್ದಾಗಿದೆ. ನನ್ನ ಹೆಂಡತಿಯ ವಿಚಾರವನ್ನ ವಿವಾದ ಮಾಡುತ್ತಿದ್ದಾರೆ. ನಾನು ವಿಜಯನಗರದಲ್ಲಿ ಸೈಟ್ ಕೊಡಿ ಎಂದು ಕೇಳಿಲ್ಲ. ನಮ್ಮ ಜಮೀನಿನನ್ನ ನಿಯಮಬಾಹಿರವಾಗಿ ಭೂಸ್ವಾಧೀನ ಮಾಡಿಕೊಂಡಿದ್ದಾರೆ. ಅದಕ್ಕೆ ಅವರೇ ತಪ್ಪಾಯಿತು ಎಂದು ಹೇಳಿ ಸೈಟ್ ಕೊಟ್ಟಿದ್ದಾರೆ. ಇದರಲ್ಲಿ ಯಾವ ವಿವಾದ ಇದೆ ಹೇಳಿ ಸುಮ್ಮನೇ ಪ್ರತಿಭಟನೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ. ಮುಡಾ ಅಕ್ರಮದ ಬಗ್ಗೆ ಇಬ್ಬರು ಐಎಎಸ್ ಅಧಿಕಾರಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ತಪ್ಪಾಗಿದೆ ಎಂಬುದು ಗೊತ್ತಾದರೇ ಎಲ್ಲರೂ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಮುಡಾ ಪ್ರಕರಣ ಸಿಬಿಐಗೆ ವಹಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಮ್ಮ ಪೊಲೀಸರನೇ ಸಮರ್ಥರಿಲ್ಲವಾ. ಎಲ್ಲದಕ್ಕೂ ಸಿಬಿಐ ಸಿಬಿಐ ಅನ್ನುವ ಬಿಜೆಪಿ ತಮ್ಮ ಅವಧಿಯಲ್ಲಿ ಎಷ್ಟು ಕೇಸ್ ನ್ನ ಸಿಬಿಐಗೆ ಕೊಟ್ಟಿದ್ದಾರೆ ಹೇಳಿ. ಈಗೀನ ಸಿಬಿಐ ಮುಖ್ಯಸ್ಥ ಕೂಡ ಕರ್ನಾಟಕದಲ್ಲಿ ಕೆಲಸ ಮಾಡಿದವರು. ನಮ್ಮ ಪೊಲೀಸರು ತನಿಖೆ ವಿಚಾರದಲ್ಲಿ ಸಮರ್ಥರಿದ್ದಾರೆ ಎಂದರು.
ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ವಿಚಾರ, ರಾಮನಗರ ಜಿಲ್ಲೆಯ ಎಲ್ಲಾ ಮುಖಂಡರು ಬಂದಿದ್ರಾ? ಮೊದಲಿನಿಂದಲೂ ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾಗಬೇಕು ಎಂಬುದು ಅವರ ಇಚ್ಚೇ. ಆ ಬಗ್ಗೆ ಮನವಿ ಕೊಟ್ಟಿದ್ದಾರೆ. ಕ್ಯಾಬಿನೆಟ್ ನಲ್ಲಿಟ್ಟು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಅವರು ಅಧಿಕಾರಕ್ಕೆ ಬಂದರೆ ತಾನೇ ಹೆಸರು ಕಿತ್ತು ಹಾಕುವುದು
ನಾವು ಬಂದರೇ ಹೆಸರು ಕಿತ್ತಾಕುತ್ತೇವೆ ಎಂಬ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಅವರು ಅಧಿಕಾರಕ್ಕೆ ಬಂದರೆ ತಾನೇ ಕಿತ್ತು ಹಾಕುವುದು. ಜನರು ಆಶೀರ್ವಾದ ಮಾಡಿದ ಕಾರಣ ನಾನು ಸಿಎಂ ಆಗಿದ್ದೇನೆ. ಇವರಿಗೆ ಜನರೇ ಆಶೀರ್ವಾದ ಮಾಡುವುದಿಲ್ಲ. ಇವರು ಇನ್ನೇಲ್ಲಿ ಸಿಎಂ ಆಗುತ್ತಾರೆ. ಹೆಸರು ಬದಲಾವಣೆ ಮಾಡುವುದು ಭ್ರಮೆ ಎಂದು ಟಾಂಗ್ ಕೊಟ್ಟರು.
ಮಾಜಿ ಸಚಿವ ನಾಗೇಂದ್ರ ಮನೆ ಮೇಲೆ ಇಡಿ ದಾಳಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಇಡಿ ಅವರ ಕೆಲಸವನ್ನ ಅವರು ಮಾಡುತ್ತಾರೆ. ಇದರ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ. ದಾಳಿ ಮಾಡಲಿ ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದರು.
Keyw words: Muda scam, CBI, CM, Siddaramaiah