MYSORE RTO : ಟೆಸ್ಟ್‌ ಟ್ರ್ಯಾಕ್‌ ನಲ್ಲಿ ಸರ್ವರ್‌ ರಗಳೆ, ಸಿಬ್ಬಂದಿ ಹೇಳೋದೆಲ್ಲ ಬರೀ ಬೊಗಳೆ.!

Mysore RTO server problem public protest against officials

 

ಮೈಸೂರು, ಜು,15,2024: (www.justkannada.in news) ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಗಳಲ್ಲಿ ಚಾಲನಾ ಪರವಾನಗಿ (ಡಿಎಲ್)  ಮಾಡಿಸಲು ಹರ ಸಾಹಸ ಪಡೆಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇದು ಕೇವಲ ಮೈಸೂರು ನಗರದ ಪೂರ್ವ (RTO EAST) ಕಚೇರಿಯಲ್ಲಿ ಕಂಡು ಬಂದ ಸಮಸ್ಯೆ. ಆನ್‌ಲೈನ್‌ ವ್ಯವಸ್ಥೆ ಜಾರಿಗೊಳಿಸದ ನಂತರ ಸಮಸ್ಯೆ ಹೆಚ್ಚಾಗಿದ್ದು ಜನತೆಗೆ ಅನುಕೂಲದ ಬದಲು ಅನಾನುಕೂಲವೇ ಹೆಚ್ಚಾಗುತ್ತಿದೆ.

ಸರ್ವರ್ ಸಮಸ್ಯೆ ಮಾಮೂಲಿ:

ಆನ್‌ಲೈನ್ ಸೇವೆ ಆರಂಭಗೊಂಡ ಬಳಿಕ, ಪರಿಸ್ಥಿತಿ ಸುಧಾರಣೆಯಾಗುವ ಬದಲು ಸಮಸ್ಯೆ ಬಿಗಡಾಯಿಸುತ್ತಿದೆ. ದಿನದಲ್ಲಿ ಕೆಲ ಗಂಟೆಗಳು ಮಾತ್ರ ಸರ್ವರ್ ಕೆಲಸ ಮಾಡುತ್ತಿದ್ದರೆ. ಉಳಿದ ಸಮ ಯದಲ್ಲಿ ಸರ್ವರ್ ಸರಿಯಿಲ್ಲ ಎಂದು ಅರ್ಜಿದಾರರನ್ನು ಕಾಯಿಸುವ ಪರಿಸ್ಥಿತಿ ಇದೆ.

ಈ ಬಗ್ಗ  ʼ ಜಸ್ಟ್‌ ಕನ್ನಡ  ʼ ಜತೆ ಮಾತನಾಡಿದ ಮೈಸೂರಿನ ರಾಮಕೃಷ್ಣನಗರ ನಿವಾಸಿ ಉಮಾಶಂಕರ್‌ ಅವರು ಹೇಳಿದಿಷ್ಟು,

ಸರ್ವರ್‌ ಡೌನ್‌ ಎಂಬುದು ಮಾಮೂಲಿಯಾಗಿದೆ. ಚೆನ್ನೈನ ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸೀಟು ಲಭಿಸಿರುವ ಮಗನನ್ನು ವ್ಯಾಸಂಗಕ್ಕೆ ಕಳುಹಿಸಬೇಕಾಗಿದ್ದು, ಅಷ್ಟರಲ್ಲಿ ಆತನಿಗೆ ಡಿಎಲ್‌ ಕೊಡಿಸಿ ಕಳುಹಿಸಬೇಕು ಎಂಬ ತರಾತುರಿಯಲ್ಲಿರುವೆ. ಕಳೆದ ಒಂದು ವಾರದಿಂದ ಇದಕ್ಕಾಗಿ ಅಲೆಯುತ್ತಿರುವೆ, ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಿತ್ಯ ಒಂದಲ್ಲ ಒಂದು ಸಬೂಬು ಹೇಳುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

 ಬೀಗ ಹಾಕಿ ತೆರಳಿದ ಸಿಬ್ಬಂದಿ:

ಸರ್ವರ್‌ ಸಮಸ್ಯೆ ನೆಪ ಒಡ್ಡಿ ಟ್ರ್ಯಾಕ್‌ ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಕಚೇರಿಗೆ ಬೀಗ ಹಾಕಿ ತೆರಳಿದ ಘಟನೆ ನಡೆದಿದೆ. ಇದಕ್ಕೆ ಸ್ಥಳದಲ್ಲಿದ್ದ ಸಾರ್ವಜನಿಕರು ಪ್ರತಿರೋಧ ವ್ಯಕ್ತಪಡಿಸಿದರು ಕ್ಯಾರೆ ಎನ್ನದೆ ಸಿಬ್ಬಂದಿ ತೆರಳಿದ್ದು ಟೆಸ್ಟ್‌ ಡ್ರೈವ್‌ ಗೆ ಬಂದಿದ್ದವರ ಆಕ್ರೋಶಕ್ಕೆ  ಕಾರಣವಾಗಿದೆ.

ಈ ಮೊದಲು ಅಲ್ಲಿನ ಸಿಬ್ಬಂದಿ ಸರ್ವರ್‌ ಸಮಸ್ಯೆ ಎಂದಾಗ ಸ್ಥಳದಲ್ಲಿದ್ದ ಟೆಕ್ಕಿಯೊಬ್ಬರು ಅದನ್ನು ಪರಿಶೀಲಿಸಲು ಮುಂದಾದಾಗ ಇಂಟರ್‌ ನೆಟ್‌ ಸಮಸ್ಯೆ ಎಂದರು. ನಂತರ ಎನ್.ಐ.ಸಿ ಸಮಸ್ಯೆ ಎಂದರು. ಕೂಡಲೇ ಆ ಟೆಕ್ಕಿ ಎನ್.ಐ.ಸಿ ಅಧಿಕಾರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಎನ್.ಐ.ಸಿ. ಕಡೆಯಿಂದ ಯಾವುದೇ ಸಮಸ್ಯೆ ಇಲ್ಲ ಎಂಬುದು ಖಚಿತವಾಯಿತು. ಆನಂತರ ಅವರೇ ಬಿ.ಎಸ್.ಎನ್. ಎಲ್‌ ಅವರನ್ನು ಸಂಪರ್ಕಿಸಿ ಅನಾನುಕೂಲದ ಬಗ್ಗೆ ಮಾಹಿತಿ ನೀಡಿದರು. ಆಗ ಬಿಎಸ್‌ ಎನ್‌ ಎಲ್‌ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸುವ ಭರವಸೆ ನೀಡಿದರು. ಆದರೆ ಆರ್.ಟಿ.ಒ ಕಚೇರಿಯ ಟೆಸ್ಟ್‌ ಟ್ರ್ಯಾಕ್‌ ಕಚೇರಿ ಸಿಬ್ಬಂದಿ ಮಾತ್ರ ಇದ್ಯಾವುದಕ್ಕೂ ಕಾಯದೇ ಕಚೇರಿ ಬಾಗಿಲು ಹಾಕಿ ತೆರಳಿದರು. ಈ ವರ್ತನೆಗೆ ಸ್ಥಳದಲ್ಲಿದ್ದ ಸಾರ್ವಜನಿಕರು ಹಿಡಿಶಾಪ ಹಾಕಿದರು.

key words: Mysore, RTO, server problem, public protest, against, officials