ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಪುನರ್ ರಚನೆ: ಸದಸ್ಯರ ನೇಮಕ

ಬೆಂಗಳೂರು,ಜುಲೈ,27,2024 (www.justkannada.in): ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯನ್ನು 3 ವರ್ಷಗಳ ಅವಧಿಗೆ ಪುನರ್ ರಚನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ವನ್ಯಜೀವಿ ಮಂಡಳಿಗೆ  ಮುಖ್ಯಮಂತ್ರಿಗಳು ಅಧ್ಯಕ್ಷರಾಗಿದ್ದು ಅರಣ್ಯ ಸಚಿವರು  ಉಪಾಧ್ಯಕ್ಷರಾಗಿರುತ್ತಾರೆ. ಸದ್ಯ ಈಗ ಶಾಸಕರ ಕೋಟಾದಡಿ 10 ಸದಸ್ಯರನ್ನ ನೇಮಕ ಮಾಡಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ರಾಮದುರ್ಗ ಶಾಸಕ ಅಶೋಕ್ ಎಂ. ಪಟ್ಟಣ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅವರನ್ನು  ಸದಸ್ಯರಾಗಿ ನೇಮಕ ಮಾಡಲಾಗಿದೆ.

ಹಾಗೆಯೇ ಸರ್ಕಾರೇತರ ಸಂಸ್ಥೆಗಳ ಕೋಟಾದಡಿ ವೈಲ್ಡ್‌ ಲೈಫ್‌ ಅಸೋಸಿಯೇಷನ್‌ ಆಫ್ ಸೌತ್ ಇಂಡಿಯಾ ವನ್ಯಜೀವಿ ಸಂಘದಿಂದ ಸುಶೀಲ ಗ್ಯಾನಚಂದ್, ಟೈಗರ್ಸ್‌ ಅನ್‌ ಲಿಮಿಟೆಡ್ ವನ್ಯಜೀವಿ ಸಮಾಜದಿಂದ ಸೀಮಾ ಬೇಗಂ ಖಲೀಲ್, ಬೆಂಗಳೂರು ಪರಿಸರ ಟ್ರಸ್ಟ್‌ನಿಂದ ಡಾ.ಆರ್.ವಿ.ದಿನೇಶ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಸಂರಕ್ಷಣಾ ವಿಶೇಷ ತಜ್ಞರು, ಜೀವಿಶಾಸ್ತ್ರ ತಜ್ಞರು ಹಾಗೂ ಪರಿಸರವಾದಿಗಳ ಕೋಟಾದಿಂದ ಬೆಂಗಳೂರಿನ ರವೀಂದ್ರ ರಘುನಾಥ, ಚಿಕ್ಕಣ್ಣ ಬಿನ್ ಸಣ್ಣದೇವಯ್ಯ,  ಡಾ.ರಾಜಕುಮಾರ್ ಎಸ್ ಅಲ್ಲೆ, ಅಜಿತ್ ಕರಿಗುಡ್ಡಯ್ಯ, ಧ್ರುವ ಎಂ ಪಾಟೀಲ್, ಮಲ್ಲಪ್ಪ ಎಸ್ ಅಂಗಡಿ, ವಿರಾಜಪೇಟೆಯಿಂದ ಸಂಕೇತ ಪೂವಯ್ಯ, ಧಾರವಾಡದ ವೈಶಾಲಿ ಕುಲಕರ್ಣಿ, ಬೀದರ್‌ನ ವಿನಯ್ ಕುಮಾರ್ ಮಾಳಿಗೆ, ಮೈಸೂರಿನ ಡಾ.ಸಂತೃಪ್ತ ಅವರನ್ನು ನೇಮಕ ಮಾಡಲಾಗಿದೆ.

ಮಂಡಳಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು, ಸಂಸ್ಥೆಗಳ ಹತ್ತು ಅಧಿಕಾರಿಗಳು ಪದನಿಮಿತ್ತ ಸದಸ್ಯರು ರಾಜ್ಯದ ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

Key words: Restructuring, Karnataka State Wildlife Board, members