ಕೇಂದ್ರ ಮಂಜೂರಾತಿ ಕೊಟ್ಟರೆ ಖಂಡಿತ ಮೇಕೆದಾಟು ಯೋಜನೆ ಜಾರಿ- ಸಿಎಂ ಸಿದ್ದರಾಮಯ್ಯ

ಮಂಡ್ಯ,ಜುಲೈ,29,2024 (www.justkannada.in): ಕೇಂದ್ರ ಸರ್ಕಾರ ಮಂಜೂರಾತಿ ಕೊಟ್ಟರೆ ಖಂಡಿತ ಮೇಕೆದಾಟು ಯೋಜನೆ ಜಾರಿ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಕೆಆರ್ ಎಸ್ ಜಲಾಶಯಕ್ಕೆ ಬಾಗಿನ ಅರ್ಪಣೆ ಬಳಿಕ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾವೇರಿ ನದಿ ನಮ್ಮೆಲ್ಲರ ಜೀವನದಿ ಇಂದು ತುಂಬಿ ಹರಿಯುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹೋಗ್ತಾ ಇದೆ. ಕನ್ನಾಂಬಾಡಿ ಕಟ್ಟೆ ಅದರ ಸಾಮಾರ್ಥ್ಯ ಇರುವುದು 49.452 ಟಿಎಂಸಿ. ಈಗ ಪೂರ್ಣ ತುಂಬಿದೆ, ಕಳೆದ ವರ್ಷ ತುಂಬಿರಲಿಲ್ಲ. ಇಂದು ನಾನು ಅತ್ಯಂತ ಸಂತೋಷದಿಂದ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ‌ ಅರ್ಪಣೆ ಮಾಡಿದ್ದೀವೆ. ಪ್ರತಿ ವರ್ಷವು ಕೂಡ ಇದೇ ರೀತಿ ತುಂಬಲಿ ಎಂದು ಪ್ರಾರ್ಥನೆಯನ್ನೂ ಮಾಡಿದ್ದೇವೆ. ಕೆಲವು ವರ್ಷ ಪ್ರಕೃತಿಯ ವೈಪರೀತ್ಯದಿಂದ ಜಲಾಶಯಗಳು ತುಂಬಿಲ್ಲ. ನಾನು 3 ನೇ ಬಾರಿ ಬಾಗಿನ ಅರ್ಪಣೆ ಮಾಡಿದ್ದೇನೆ. ಕೆಲವು ಸಾರಿ ನಮ್ಮ ನಿರೀಕ್ಷೆಯಷ್ಟು ಮಳೆ ಬಾರದಿದ್ದಾಗ ಜಲಾಶಯ ತುಂಬಿಲ್ಲ. ಈ ಬಾರಿ ರೈತರು ಬಹಳ ಹರ್ಷದಿಂದ ಇದ್ದಾರೆ. ಜುಲೈ ತಿಂಗಳಲ್ಲೇ ನಮ್ಮ ರಾಜ್ಯದ ಎಲ್ಲಾ ಜಲಾಶಯ ತುಂಬಿವೆ. ಕಾವೇರಿ ಜಲಾನಯನ ಪ್ರದೇಶದ 4 ಜಲಾಶಯಗಳಲ್ಲಿ 114 ಟಿಎಂಸಿ ನೀರು ಸಂಗ್ರಹ ಆಗಿದೆ. ವಿಸಿ ನಾಲೆಗೆ ನಾನು ಮೊದಲು ಸಿಎಂ ಆಗಿದ್ದಾಗ 250 ಕೋಟಿ ರೂಗಳ ವೆಚ್ಚದಲ್ಲಿ ಆಧುನೀಕರಣ ಮಾಡಿದ್ದೆವು. ಈಗ ಮುಂದೆ ಉಳಿದಿರುವ ಅಭಿವೃದ್ಧಿ ಕೆಲಸವನ್ನ ಮಾಡುತ್ತೇವೆ ಎಂದು ತಿಳಿಸಿದರು.

ತಮಿಳುನಾಡು ಪ್ರತಿ ಬಾರಿಯೂ ಕಾವೇರಿ ನೀರಿಗೆ ಕ್ಯಾತೆ ತೆಗೆಯುತ್ತದೆ. ನಾವು ತಮಿಳುನಾಡಿಗೆ ವಾರ್ಷಿಕ 177 ಟಿಎಂಸಿ ನೀರನ್ನು ಕೊಡಬೇಕು. ಈಗಾಗಲೇ 83 ಟಿಎಂಸಿಗೂ ಹೆಚ್ಚು ನೀರು ಹೋಗಿದೆ. ಸಂಕಷ್ಟದ ಸಮಯದಲ್ಲಿ ಅಷ್ಟು ನೀರು ಕೊಡಲಿಕ್ಕೆ ಆಗಲ್ಲ. ಈಗಾಗಲೇ ಮೆಟ್ಟೂರು ಜಲಾಶಯ ಕೂಡ ತುಂಬಿದೆ. ಹೆಚ್ಚುವರಿ ನೀರು ಸಂಗ್ರಹ ಮಾಡಲು ಮೇಕೆದಾಟು ಕಟ್ಟಲು ತಮಿಳುನಾಡು ಅಡ್ಡಗಾಲು ಹಾಕುತ್ತಿದೆ. ಕೇಂದ್ರ ಸರ್ಕಾರ ಮಂಜೂರಾತಿ ಕೊಟ್ಟರೆ ಖಂಡಿತ ಮೇಕೆದಾಟು ಯೋಜನೆ ಜಾರಿ ಮಾಡುತ್ತೇವೆ. ಮೇಕೆದಾಟು ಯೋಜನೆ ಮಂಜೂರು ಮಾಡುವ ಕೆಲಸವನ್ನ ಇಲ್ಲಿನ ಸಂಸದರು ಮಾಡಬೇಕು. ಮೇಕೆದಾಟು ಯೋಜನೆ ಜಾರಿಯಾದರೆ ಸುಮಾರು 65 ಟಿಎಂಸಿ ನೀರು ಸಂಗ್ರಹಿಸಬಹುದು. ಇದರಿಂದ ಎರಡು ರಾಜ್ಯಗಳಿಗೂ ಅನುಕೂಲ ಆಗುತ್ತದೆ. ಇದನ್ನು ಕೇಳಿದ್ರೆ ವಿಪಕ್ಷಗಳು ಮೈ ಮೇಲೆ ಗಾಳಿ ಬಂದ ಹಾಗೆ ಆಡ್ತಾರೆ. ಸಂಕಷ್ಟದ ಸಮಯದಲ್ಲಿ ಸೂಕ್ತ ಹಂಚಿಕೆಗೆ ಅನುಕೂಲ ಆಗುತ್ತದೆ.

ಇದರ ಬಗ್ಗೆ ನಮ್ಮ ಸಂಸದರು ಕೇಂದ್ರದಲ್ಲಿ ಕೇಳುವ ಬದಲು ಅನವಶ್ಯಕವಾಗಿ ಮಾತನಾಡುತ್ತಾರೆ. ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಾರೆ. ಅಧಿವೇಶನದಲ್ಲೂ ಇದೇ ರೀತಿ ಸಮಯ ವ್ಯರ್ಥ ಮಾಡಿದರು.  ರಾಜ್ಯಕ್ಕೆ ಬರುವ ಅನುದಾನದ ಬಗ್ಗೆ ಒಂದು ದಿನವೂ ಮಾತನಾಡಲಿಲ್ಲ. ಯಾರು ಸುಳ್ಳು ಹೇಳ್ತಾರೆ ಯಾರು ನಿಜ ಹೇಳ್ತಾರೆ ಎಂದು ರಾಜ್ಯದ ಜನರಿಗೆ ಗೊತ್ತಿದೆ ಎಂದು  ಪರೋಕ್ಷವಾಗಿ ಬಿಜೆಪಿ ಜೆಡಿಎಸ್ ಸಂಸದರು,ಶಾಸಕರ ವಿರುದ್ದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸರ್ಕಾರವನ್ನ ದುರ್ಬಲಗೊಳಿಸುವ ಕೆಲಸವನ್ನ ವರ್ಷದ ಪಕ್ಷಗಳು ಮಾಡುತ್ತಿವೆ. ಜನರು ಇದಕ್ಕೆ ಸೊಪ್ಪು ಹಾಕಲ್ಲ ಅಂತ ಗೊತ್ತಿದೆ. ನಮ್ಮ ಸರ್ಕಾರ ಬಂದ ಮೇಲೆ ರೈತರಿಗೆ ಒಂದೂ ಸಮಸ್ಯೆ ಆಗಿಲ್ಲ. ಈ ಹಿಂದೆ ಗೋಲಿಬಾರ್ ಆಯಿತು. ರೈತರಿಗೆ ಸಕಾಲಕ್ಕೆ ಗೊಬ್ಬರ, ಬಿತ್ತನೆ ಬೀಜ ದೊರಕುವಂತೆ ನೋಡಿಕೊಳ್ಳಲು ಕೃಷಿ ಸಚಿವರಿಗೆ ಸೂಚಿಸಿದ್ದೇನೆ. ಕೇಂದ್ರದ ಅನುದಾನಕ್ಕಾಗಿ ಸುಪ್ರೀಂಕೋರ್ಟ್ ಮೊರೆ ಹೋಗಿ ಪಡೆದುಕೊಂಡಿದ್ದೇವೆ. ಆದರೆ ವಿಪಕ್ಷದವರು ಸುಮ್ಮನೆ ಅಪ ಪ್ರಚಾರ ಮಾಡುತ್ತಾರೆ. ಅಭಿವೃದ್ಧಿಗೆ ಹಣ ಇಲ್ಲ ಎಂದು ಅಪ ಪ್ರಚಾರ ಮಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸ ಎಲ್ಲೂ ನಿಂತಿಲ್ಲ ಎಲ್ಲಾ ನಡೆಯುತ್ತಿವೆ. ನಮ್ಮ ಯೋಜನೆಯಿಂದ ಒಂದು ತಿಂಗಳಿಗೆ 4 ರಿಂದ 5 ಸಾವಿರ ಬರುತ್ತಿದೆ. ಗ್ಯಾರಂಟಿ ಯೋಜನೆ ನಿಲ್ಲಿಸಿ ಅಂತ ನೇರವಾಗಿ ಹೇಳಿ ನೋಡೋಣ.? ಎಂದು ವಿಪಕ್ಷಗಳಿಗೆ ಸವಾಲು ಹಾಕಿದರು.

ನಿಮ್ಮ ನಿರೀಕ್ಷೆ ಹುಸಿಯಾಗದಂತೆ ನಾವು ಸರ್ಕಾರ ನಡೆಸುತ್ತೇವೆ. ನಿಮ್ಮ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇವೆ. ಬಿಜೆಪಿ ಜೆಡಿಎಸ್ ನವರು ಮನೆ ಮುರುಕರು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಹಾವು ಮುಂಗುಸಿಯಂತಿದ್ದ  ಬಿಜೆಪಿ ಜೆಡಿಎಸ್ ನವರು ಈಗ ಒಂದಾಗಿದ್ದಾರೆ. ಇವರೆಲ್ಲ ಸೇರಿ ನಮ್ಮ ಮೇಲೆ ಸುಳ್ಳು ಆರೋಪಗಳನ್ನ ಮಾಡುತ್ತಿದ್ದಾರೆ. ನಮ್ಮ ಸರ್ಕಾರವನ್ನ ಅಸ್ಥಿರಗೊಳಿಸುವ ಕೆಲಸವನ್ನ ಮಾಡುತ್ತಿದ್ದಾರೆ . ಇದಕ್ಕೆ ಜನ ತಲೆ ಕೆಡಿಸಿಕೊಳ್ಳಬಾರದು ಎಂದು ವಾಗ್ದಾಳಿ ನಡೆಸಿದರು.

Key words: mekadatu, scheme, implement, sanction, CM Siddaramaiah