ಮೈಸೂರು,ಆಗಸ್ಟ್,2,2024 (www.justkannada.in): ಬುದ್ಧಿಮಾಂದ್ಯ ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ಮೈಸೂರು 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಪಿರಿಯಾಪಟ್ಟಣ ತಾಲ್ಲೂಕು ಬೈಲಕುಪ್ಪೆ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಆವರ್ತಿ ಗ್ರಾಮದ ವಾಸಿಯಾದ ಆರೋಪಿ ಕುಮಾರ(42) ಶಿಕ್ಷೆಗೆ ಗುರಿಯಾದ ಆರೋಪಿ.
ಘಟನೆ ಹಿನ್ನೆಲೆ..
27-04- 2022 ರಂದು ಪ್ರಕರಣದ 19 ವರ್ಷದ ಸಂತ್ರಸ್ತ ಬುದ್ಧಿಮಾಂದ್ಯ ಮಹಿಳೆಯು ತನ್ನ ತಾಯಿ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿ ಒಬ್ಬಳೇ ವಾಸವಿದ್ದ ವೇಳೆ ಮನೆಗೆ ಆರೋಪಿ ಕುಮಾರ ಅತಿಕ್ರಮ ಪ್ರವೇಶ ಮಾಡಿ ಸಂತ್ರಸ್ತೆ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಬಗ್ಗೆ ಆತನ ವಿರುದ್ಧ ದೂರು ದಾಖಲಾದ ಹಿನ್ನೆಲೆಯಲ್ಲಿ ಹಿಂದಿನ ತನಿಖಾಧಿಕಾರಿಯಾಗಿದ್ದ ಪ್ರಕಾಶ್.ಬಿ.ಜಿ, ಸಿ.ಪಿ.ಐ ಬೈಲಕುಪ್ಪೆ ವೃತ್ತ ಇವರು ಆರೋಪಿ ವಿರುದ್ಧ ತನಿಖೆ ಕೈಗೊಂಡು ದೋಷಾರೋಪಣಾ ಪತ್ರವನ್ನು ಸಲ್ಲಿಸಿಕೊಂಡಿದ್ದರು.
ಈ ಪ್ರಕರಣ ಕುರಿತು ವಿಚಾರಣೆ ನಡೆಸಿದ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ನ್ಯಾಯಾಧೀಶರಾದ ಎಂ.ರಮೇಶ ಅವರು, ಅಭಿಯೋಜನೆ ಪರ ಹಾಜರುಪಡಿಸಿದ ಸಾಕ್ಷಿಗಳನ್ನು ಪರಿಗಣಿಸಿ ಮತ್ತು ಸಂತ್ರಸ್ತ ಮಹಿಳೆಯ ಸಾಕ್ಷಿಯನ್ನು ಪರಿಗಣಿಸಿ ಆರೋಪಿತನ ಮೇಲಿನ ಆರೋಪ ದೃಢಪಟ್ಟ ಮೇರೆಗೆ ಆರೋಪಿತನಿಗೆ ಕಲಂ 376(2)(ಎಲ್) ಐಪಿಸಿ ಅಡಿಯ ಅಪರಾಧಕ್ಕೆ 10 ವರ್ಷಗಳ ಕಠಿಣ ಸಜೆ ಮತ್ತು ರೂ.50,000/- ದಂಡ ವಿಧಿಸಿದ್ದು ಮತ್ತು ಕಲಂ 450 ಐಪಿಸಿ ಅಡಿಯಲ್ಲಿನ ಅಪರಾಧಕ್ಕೆ 6 ತಿಂಗಳ ಕಠಿಣ ಸೆರೆಮನೆವಾಸ ವಿಧಿಸಿ ತೀರ್ಪು ನೀಡಿದರು. ಸಂತ್ರಸ್ತ ಮಹಿಳೆಗೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಕ್ತ ಪರಿಹಾರ ನೀಡಲು ನಿರ್ದೇಶಿಸಿದರು.
ಸದರಿ ಪ್ರಕರಣದಲ್ಲಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಕೆ.ನಾಗರಾಜ ಅವರು ಸರ್ಕಾರದ ಪರ ವಾದ ಮಂಡಿಸಿದರು.
Key words: Rape case, mysore court, sentenced, accused