ಬಿಜೆಪಿ, ಜೆಡಿಎಸ್ ನಿಂದ ಹಿಂದುಳಿದ ವರ್ಗದ ನಾಯಕರನ್ನು ತುಳಿಯುವ ಕೆಲಸ- ಸಚಿವ ಮಧು ಬಂಗಾರಪ್ಪ ಕಿಡಿ

ಶಿವಮೊಗ್ಗ,ಆಗಸ್ಟ್,3,2024 (www.justkannada.in): ಮುಡಾ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ, ಜೆಡಿಎಸ್ ನಿಂದ ನಡೆಯುತ್ತಿರುವ ಪಾದಯಾತ್ರೆಗೆ ತಿರುಗೇಟು ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಿಜೆಪಿ ಜೆಡಿಎಸ್ ನವರು ಹಿಂದುಳಿದ ವರ್ಗದ ನಾಯಕರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಶಿವಮೊಗ್ಗದಲ್ಲಿ ಇಂದು ಮಾತನಾಡಿದ ಸಚಿವ ಮಧು ಬಂಗಾರಪ್ಪ,  ದೆಹಲಿ ಸಿಎಂ ವಿರುದ್ದವೂ ಪ್ರಾಸಿಕ್ಯೂಷನ್ ಕೊಟ್ಟಿದ್ದರು.  ಈಗ ಅರವಿಂದ ಕೇಜ್ರಿವಾಲ್ ಜೈಲನಲ್ಲಿದ್ದಾರೆ.  ಒಳ್ಳೆಯ ಆಡಳಿತ ನಡೆಯುತ್ತಿದೆ. ಇದೀಗ ಸಿದ್ದರಾಮಯ್ಯ ವಿರುದ್ದವೂ ಪ್ರಾಸಿಕ್ಯೂಷನ್ ಗೆ  ಮುಂದಾಗಿದ್ದಾರೆ. ಈ ಮೂಲಕ ಹಿಂದುಳಿದ ವರ್ಗದ ನಾಯಕರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮುಡಾ ಹಗರಣ ಆರೋಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಅವರ ಪಕ್ಷದವರೇ. ವಿಜಯೇಂದ್ರ ಬಗ್ಗೆ  ಯತ್ನಾಳ್ ಮಾತನಾಡ್ತಿದ್ದಾರೆ. ಯತ್ನಾಳ್ ವಿಜಯೇಂದ್ರ ನಾಯಕತ್ವ ಒಪ್ಪಿಲ್ಲ. ಇದರ ಬಗ್ಗೆ ವಿಜಯೇಂದ್ರ ಪ್ರತಿಕ್ರಿಯಿಸಲ್ಲ. ಡಿಕೆ ಶಿವಕುಮಾರ್ ಬಗ್ಗೆ ಮಾತನಾಡಲು ಏನು ಯೋಗ್ಯತೆ ಇದೆ? ಎಂದು ಪ್ರಶ್ನಿಸಿದರು.

ಡಿಕೆ ಶಿವಕುಮಾರ್ ತಪ್ಪು ಮಾಡದಿದ್ದರೂ ಜೈಲಿಗೆ ಹೋಗಿದ್ದರು. ಅವರು ಜೈಲಿಗೆ ಹೋಗಲು ಯಡಿಯೂರಪ್ಪ, ವಿಜಯೇಂದ್ರ ‌ಕಾರಣ. ಡಿಕೆಶಿ ಬೆಳೆಯಬಾರದು, ಅವರನ್ನು ತುಳಿಯಬೇಕು ಎಂದು ಹಾಗೆ ಮಾಡಿದರು ಎಂದು ಮಧು ಬಂಗಾರಪ್ಪ ಹರಿಹಾಯ್ದರು.

Key words: Minister, Madhu Bangarappa, BJP, JDS , mysore chalo