ದೋಸ್ತಿಗಳಿಗೆ ಠಕ್ಕರ್ ಕೊಡಲು ಸಿಎಂ ಪ್ಲಾನ್: ನಾಳೆ ಮೈಸೂರಿನಲ್ಲಿ ಜನಾಂದೋಲನ ಸಮಾವೇಶ ಯಶಸ್ವಿಗೆ ತಯಾರಿ

ಮೈಸೂರು,ಆಗಸ್ಟ್,8,2024 (www.justkannada.in):  ಮುಡಾ ಹಗರಣ ವಿರೋಧಿಸಿ ಬಿಜೆಪಿ-ಜೆಡಿಎಸ್ ದೋಸ್ತಿ ನಾಯಕರು ನಡೆಸುತ್ತಿರುವ ಪಾದಯಾತ್ರೆಗೆ ಠಕ್ಕರ್ ಕೊಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದು ನಾಳೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ನಡೆಯಲಿದೆ.

ನಾಳೆ ಕಾಂಗ್ರೆಸ್ ಜನಾಂದೋಲನ ಸಮಾವೇಶ  ಹಿನ್ನಲೆ, ಮೈಸೂರಿನ ಮಹಾರಾಜ ಗ್ರೌಂಡ್ ನಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ. ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಜರ್ಮನ್ ಟೆಂಟ್ ಮಾದರಿಯ ವೇದಿಕೆ ನಿರ್ಮಿಸಲಾಗಿದೆ. ಮಳೆ ಬಂದರೂ ನೆನೆಯದ ರೀತಿ ಬೃಹತ್ ವೇದಿಕೆ ಸಿದ್ದಗೊಂಡಿದೆ.  ಸುಮಾರು 50 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು,  ಕಾರ್ಯಕ್ರಮ ವೀಕ್ಷಣೆಗೆ ಎಲ್. ಇ.ಡಿ ಟಿವಿ ವ್ಯವಸ್ಥೆ ಮಾಡಲಾಗಿದೆ.

ಭದ್ರತೆಗಾಗಿ ಈಗಾಗಲೇ ಸಾವಿರಕ್ಕೂ ಹೆಚ್ಚು  ಪೊಲೀಸರು ಸ್ಥಳದಲ್ಲೇ ಬೀಡು  ಬಿಟ್ಟಿದ್ದು,  ಸಮಾವೇಶದ ಸ್ಥಳದಲ್ಲಿ ಕೆ.ಎಸ್.ಆರ್.ಪಿ ಸ್ಥಳೀಯ ಪೊಲೀಸ್, ಹೋಂ ಗಾರ್ಡ್ಸ್ ಬಳಸಿಕೊಂಡು ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ನಾಳೆ ಕಾಂಗ್ರೆಸ್ ಸಮಾವೇಶ ಮತ್ತು ನಾಳಿದ್ದು ಬಿಜೆಪಿ ಜೆಡಿಎಸ್ ಸಮಾವೇಶ ನಡೆಯಲಿದ್ದು ಕಾರ್ಯಕ್ರಮಕ್ಕೆ ಸುಮಾರು4 ಸಾವಿರಕ್ಕೂ ಹೆಚ್ಚು ಪೋಲಿಸರ ನಿಯೋಜನೆ ಮಾಡಲಾಗಿದೆ.  ಬೃಹತ್ ಜನಾಂದೋಲನ ಸಮಾವೇಶ ಯಶಸ್ವಿಗೆ ತಯಾರಿ ನಡೆಸಿದ್ದು, ನಾಳಿನ ಸಮಾವೇಶಕ್ಕೆ ಇಂದೇ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸುತ್ತಿದ್ದಾರೆ.

ಇಂದು ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನಿಂದ ಮೈಸೂರಿಗೆ  ಆಗಮಿಸಲಿದ್ದು, ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ನಂತರ ಇಂದು ಮೈಸೂರಿನಲ್ಲೇ ವಾಸ್ತವ್ಯ ಹೂಡಲಿರುವ ಸಿಎಂ ಸಿದ್ದರಾಮಯ್ಯ ಪೂರ್ವಭಾವಿ ಸಭೆ, ಆಪ್ತರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಈ ಮಧ್ಯೆ  ಲಕ್ಷ ಲಕ್ಷ ಜನ ಸೇರಿಸಿ  ನಾಳಿನ ಸಮಾವೇಶದ ಯಶಸ್ವಿಗೊಳಿಸಲು ಸೂಚನೆ ನೀಡಿದ್ದಾರೆ. ಹಾಗೆಯೇ  ಎದುರಾಳಿಗಳ ಹಲವು ಭ್ರಷ್ಟಾಚಾರದ ಬಗ್ಗೆ ವೇದಿಕೆಯಲ್ಲೇ ಬಿಚ್ಚಿಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ  ನಾಳಿನ ಮೈಸೂರಿನ‌ ಜನಾಂದೋಲನ ಸಮಾವೇಶ ಭಾರಿ ಸಮರಕ್ಕೆ ವೇದಿಕೆಯಾಗಲಿದೆ.

Key words: mysore, congress ,Janandolana, CM Siddaramaiah