ನಿಮಗೆ ತಾಕತ್ತು ಇದ್ರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋಣಾ ಬನ್ನಿ- ಮಾಜಿ ಸಿಎಂ ಬಿಎಸ್ ವೈ ಸವಾಲು

ಮೈಸೂರು,ಆಗಸ್ಟ್,10,2024 (www.justkannada.in): ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದರೋಡೆ, ಲೂಟಿಗೆ ಇಳಿದಿದ್ದಾರೆ. ಇವರ ಪಾಪದ ಕೊಡಗಳು ತುಂಬಿವೆ. ನಿಮಗೆ ತಾಖತ್ ಇದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋಣಾ ಬನ್ನಿ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸವಾಲು ಹಾಕಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮೈಸೂರು ಚಲೋ ಪಾದಯಾತ್ರೆ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಹೇಳಿದ್ದಾರೆ ನನ್ನನ್ನು ರಾಜಕೀಯ ನಿವೃತ್ತಿ ಆಗಲಿ ಅಂತಾ.  ನಾನು ಕೊನೇ ಉಸಿರು ಇರುವವರೆಗೂ ರಾಜಕೀಯ ಮಾಡುತ್ತೇನೆ. ನಿಮ್ಮನ್ನು ಮನೆಗ ಕಳಿಸುವವರೆಗೆ ಹೋರಾಟ ಮಾಡುತ್ತೇನೆ.  ನಿಮ್ಮ ಸರಕಾರ ದಿವಾಳಿಯಾಗಿದೆ. ನೀವು ಮನಬಂದಂತೆ ಮಾತಾಡುತ್ತೀರಾ? ಎಂದು ವಾಗ್ದಾಳಿ ನಡೆಸಿದರು.

ಹೇ  ವಿಜಯೇಂದ್ರ, ಹೇ ಅಶೋಕ್ ಅಂತೀರಾ ಡಿ.ಕೆ.‌ ಶಿವಕುಮಾರ್ ಅವರೇ.  ನಿಮ್ಮ‌ ಪಾಪದ ಕೊಡ ತುಂಬಿ ತುಳುಕುತ್ತಿದೆ. ನಿಮ್ಮ ಯೋಗ್ಯತೆ ಗೆ ಒಂದು ಅಭಿವೃದ್ಧಿ ಕಾರ್ಯ ತೋರಿಸಿ. ನಿವೇಶನದ ಬದಲು 62 ಕೋಟಿ ರೂ. ಕೊಡಿ ಅಂತೀರಾ ಸಿದ್ದರಾಮಯ್ಯ ಅವರೇ. ಯಾರಪ್ಪನ‌ ದುಡ್ಡು ಅಂತಾ ನಿಮಗೆ ಹಣ ಕೊಡಬೇಕು. ಇದು ಹಗಲು ದರೋಡೆಯ ಭ್ರಷ್ಟ ಸರಕಾರ.  ಈಗ ಚುನಾವಣೆ ನಡೆದರೂ ಬಿಜೆಪಿ, ಜೆಡಿಎಸ್ 130 ಸ್ಥಾನ ಬರುತ್ತವೆ ಎಂದು ಬಿಎಸ್ ವೈ ಟಾಂಗ್ ಕೊಟ್ಟರು.

ಸಿದ್ದರಾಮಯ್ಯ ಅವರೇ ಈ ಯಡಿಯೂರಪ್ಪನ‌ ಕೈ ಕಾಲು ಗಟ್ಟಿಯಾಗಿವೆ.‌  ನನಗೆ 82 ವಯಸ್ಸಾಗಿರ ಬಹುದು ಹೋರಾಟದ ಶಕ್ತಿ ಕಡಮೆ ಆಗಿಲ್ಲ. ನಿಮ್ಮನ್ನು ಮನೆಗೆ ಕಳುಹಿಸುವವರೆಗೂ ಹೋರಾಟ ಮಾಡುತ್ತೇನೆ. ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಮಾತಾಡುವುದು ಬಿಡಲಿ ಎಂದು ಕಿಡಿಕಾರಿದರು.

Key words:  former CM, BS Yeddyurappa, BJP,JDS, Mysore chalo