ಬೆಂಗಳೂರು, ಆಗಸ್ಟ್ 13,2024 (www.justkannada.in): ಆಗಸ್ಟ್ 15 ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ಭಾರಿ ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.
ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಬಿ.ದಯಾನಂದ್, ಆಗಸ್ಟ್ 15 ರಂದು ಮಾಣೆಕ್ ಷಾ ಪರೇಡ್ ಗ್ರೌಂಡ್ನಲ್ಲಿ ನಡೆಯಲಿರುವಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಿಹರ್ಸಲ್ ಕಾರ್ಯಕ್ರಮ ಮಾಡಲಾಗಿದೆ. ಕಾರ್ಯಕ್ರಮ ಹಿನ್ನೆಲೆ 15ದಿನಗಳಿಂದ ಕಟ್ಟೆಚ್ಚರವಹಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಬಿಗಿ ಭದ್ರತೆಗಾಗಿ 10 ಡಿಸಿಪಿ, 17 ಎಸಿಪಿ, 42 ಇನ್ಸ್ಪೆಕ್ಟರ್, 112 ಪಿಎಸ್ಐ, 62 ಎಎಸ್ಐ, 511 ಕಾನ್ಸ್ಟೇಬಲ್ಗಳು, 72 ಮಹಿಳಾ ಸಿಬ್ಬಂದಿ ನೇಮಕ ಮಾಡಲಾಗಿದೆ. 129 ಮಂದಿ ಮಫ್ತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿ ದಯಾನಂದ್ ತಿಳಿಸಿದರು.
3 ಜನ ಡಿಸಿಪಿ, 6 ಜನ ಎಸಿಪಿ, 19 ಜನ ಇನ್ಸ್ ಪೆಕ್ಟರ್, 32 ಪಿಎಸ್ ಐ, 111 ಎಎಸ್ ಐ ಹಾಗೂ 430 ಕಾನ್ಸಟೇಬಲ್ ಗಳು ಸೇರಿದಂತೆ ನೂರಾರು ಸಿಬ್ಬಂದಿಯನ್ನು ಮೈದಾನದ ಸುತ್ತಮುತ್ತ ಟ್ರಾಫಿಕ್ ಕಂಟ್ರೋಲ್ ಗೆ ನೇಮಕ ಮಾಡಲಾಗಿದೆ. ಪ್ರತಿ ಗೇಟ್ ನಲ್ಲೂ ಪೊಲೀಸ್ ಅಧಿಕಾರಿಗಳು ತಪಾಸಣೆ ನಡೆಸುತ್ತಾರೆ. ಅನುಮಾನ ಬಂದರೆ ಅಂತಹ ವ್ಯಕ್ತಿಗಳನ್ನು ವಶಪಡೆಯಲಾಗುತ್ತದೆ ಎಂದು ಹೇಳಿದರು.
ಸಿಸಿಟಿವಿ ಪರಿಶೀಲನೆ ಮಾಡುವುದಕ್ಕೆಂದೇ 27 ಸಿಬ್ಬಂದಿಯ ನೇಮಕ ಮಾಡಲಾಗಿದೆ. ಹೆಚ್ಚುವರಿಯಾಗಿ ಹತ್ತು ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಸಂಚಾರ ನಿರ್ವಹಣೆ ವಿಚಾರವಾಗಿಯೂ ಪೊಲೀಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಅವರು ಹೇಳಿದರು.
ಇನ್ನು ಮೈದಾನಕ್ಕೆ ಸಿಗರೇಟ್, ಬೆಂಕಿಪೊಟ್ಟಣ, ಕಪ್ಪು ಕರ ವಸ್ತುಗಳು, ಚೂಪಾದ ವಸ್ತುಗಳು, ಕ್ಯಾಮರಾಗಳಿಗೆ ಅವಕಾಶ ಇಲ್ಲ. ಮೈದಾನದ ಒಳಗೆ ಬಿಡುವ ಮುನ್ನ ಎಲ್ಲವನ್ನೂ ಪರಿಶೀಲನೆ ಮಾಡಲಾಗುತ್ತದೆ ಎಂದು ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದರು.
Key words: police security, Independence Day, Bengaluru