ನಾನೇನು ಟೆರರಿಸ್ಟ್ ಅಲ್ಲ: ವಿಸಾ ನಿರಾಕರಿಸಿದಕ್ಕೆ ಅರುಣ್ ಯೋಗಿರಾಜ್ ಬೇಸರ

ಮೈಸೂರು,ಆಗಸ್ಟ್,14,2024 (www.justkannada.in): ವಿಸಾ ನೀಡಲು ಅಮೆರಿಕಾಗೆ ನಿರಾಕರಿಸಿದ ಹಿನ್ನೆಲೆಯಲ್ಲಿ  ಕನ್ನಡಿಗ ಶಿಲ್ಪಿ ಅರುಣ್ ಯೋಗಿರಾಜ್  ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಿಲ್ಪಿ ಅರುಣ್ ಯೋಗಿರಾಜ್, ನಾನೇನೂ ಟೆರರಿಸ್ಟ್ ಅಲ್ಲ. ಎಂತೆಂಥವರಿಗೋ ವೀಸಾ ಕೊಡ್ತಾರೆ. ನಮ್ಮಂತಹ ಕಲಾವಿದರಿಗೆ ಯಾಕೆ ಕೊಡಲ್ಲ. ಇದು ಕಲಾವಿದರಿಗೆ ಮಾಡಿದ ಅಪಮಾನ. ಯಾವ ಕಾರಣಕ್ಕೆ ರಿಜೆಕ್ಟ್ ಮಾಡಿದರು ಗೊತ್ತಿಲ್ಲ. ನಾನು, ನನ್ನ ಪತ್ನಿ ಹಾಗು ಮಕ್ಕಳು ಎಲ್ಲರದ್ದು ರಿಜೆಕ್ಟ್ ಮಾಡಿದ್ದಾರೆ. ಇದರಿಂದ ನನ್ನ ಮಗಳು ತುಂಬಾ ನೊಂದು ಕೊಂಡಿದ್ದಾಳೆ. ನಾನು ನನ್ನ ಬಗ್ಗೆ ಎಲ್ಲವನ್ನೂ ಹೇಳಿಕೊಂಡೆ. ಅವರು ಕೇಳಿದ್ದನ್ನೆಲ್ಲ ನಾನು ಫಿಲ್ ಮಾಡಿದೆ ಆದರೆ, ಒಂದು ಚೀಟಿ ಕೊಟ್ಟು ರಿಜೆಕ್ಟ್ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿ ಗಮನಿಸಿದ ಸಂಸದ ಯದುವೀರ್ ನನಗೆ ಕರೆ ಮಾಡಿದ್ರು. ನನ್ನನ್ನ ಸಂಪರ್ಕಿಸಿದರು. ಅವರು ಅವಕಾಶ ಮಾಡಿಸಿಕೊಟ್ಟರೆ ನಾನು ಹೋಗುವೆ. ಹೊಸದಾಗಿ ನಾನು ಅರ್ಜಿ ಹಾಕಿ ಹೋಗಲ್ಲ ಎಂದು ಅರುಣ್ ಯೋಗಿರಾಜ್ ತಿಳಿಸಿದ್ದಾರೆ.

ಯಾವ ಕಾರಣಕ್ಕೆ ವೀಸಾ ರಿಜೆಕ್ಟ್ ಆಗಿದೆ ಎಂಬುದು ಗೊತ್ತಿಲ್ಲ- ಸಂಸದ ಯದುವೀರ್

ಈ ಕುರಿತು ಮಾತನಾಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಈಗಾಗಲೇ ಅರುಣ್ ಜೊತೆ ಮಾತನಾಡಿದ್ದೇನೆ. ಯಾವ ಕಾರಣಕ್ಕೆ ವೀಸಾ ರಿಜೆಕ್ಟ್ ಆಗಿದೆ ಎಂಬುದು ಗೊತ್ತಿಲ್ಲ. ಅರುಣ್ ಯೋಗಿರಾಜ್ ನಮ್ಮ ದೇಶದ ಆಸ್ತಿ. ಶಂಕರಾಚಾರ್ಯ, ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಿ ಇಡೀ ದೇಶಕ್ಕೆ ಕೀರ್ತಿ ತಂದಿದ್ದಾರೆ. ಹಿಂದೂ ಎನ್ನುವ ಕಾರಣಕ್ಕೆ ವೀಸಾ ರಿಜೆಕ್ಟ್ ಆಗಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ. ಕೇಂದ್ರ ಸಚಿವರ ಜೊತೆಯೂ ಮಾತನಾಡುತ್ತೇನೆ ಎಂದರು.

ಕಾರಣವಿಲ್ಲದೆ ಹಲವು ಬಾರಿ ರಿಜೆಕ್ಟ್ ಆಗೋದು ಸಹಜ- ಸಾ.ರಾ ಮಹೇಶ್

ಅರುಣ್ ಯೋಗಿರಾಜ್ ಗೆ ವೀಸಾ ಕೈ ತಪ್ಪಿದ್ದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, ಹಲವು ಸಂದರ್ಭದಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಕಾರಣವಿಲ್ಲದೆ ಹಲವು ಬಾರಿ ರಿಜೆಕ್ಟ್ ಆಗೋದು ಸಹಜ. ಅದೇ ರೀತಿ ಆಗಿರಬಹುದು. ಈ ಕುರಿತು ಮಾಹಿತಿ ಪಡೆದುಕೊಳ್ಳುತ್ತೇನೆ ಎಂದರು.

ಈ ಹಿಂದೆ ನಾನು ನಮ್ಮ ಚಡ್ಡಿ ಫ್ರೆಂಡ್ ಜಮೀರ್ ಅಹಮದ್ ಖಾನ್, ಚಲುವರಾಯಸ್ವಾಮಿ ಅಮೆರಿಕಕ್ಕೆ ಹೋಗಲು ಮುಂದಾಗಿದ್ದೇವು. ಆ ಸಂದರ್ಭದಲ್ಲಿ ಜಮೀರ್ ಅಹಮದ್ ಸಚಿವರು ಆಗಿದ್ದರು ಸಚಿವರಾಗಿದ್ದ ಸಂದರ್ಭದಲ್ಲಿ ಅವರ ವೀಸಾ ರಿಜೆಕ್ಟ್ ಆಗಿತ್ತು. ಈ ಸಂಬಂಧ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದರು ಸಾಧ್ಯವಾಗಿರಲಿಲ್ಲ ಯಾವ ಕಾರಣಕ್ಕೆ ಅರುಣ್ ಯೋಗಿರಾಜ್ ಗೆ ಈ ರೀತಿಯಾಗಿದೆ ಗೊತ್ತಿಲ್ಲ ಎಂದರು.

Key words:  America, visa, artist, Arun Yogiraj