ಇನ್ಶೂರೆನ್ಸ್ ಹಣಕ್ಕಾಗಿ  ಸಿನಿಮೀಯ ರೀತಿ ಅಮಾಯಕನ ಹತ್ಯೆ: ದಂಪತಿ ಅಂದರ್

ಹಾಸನ, ಆಗಸ್ಟ್​.24, 2024 (www.justkannada.in):  ಮಾಡಿದ ಸಾಲ ತೀರಿಸುವುದಕ್ಕಾಗಿ ಕೋಟಿ ಕೋಟಿ ಇನ್ಶೂರೆನ್ಸ್ ಹಣ  ಪಡೆಯಲು ಅಮಾಯಕನನ್ನು ಕೊಲೆ  ಮಾಡಿ ಬಳಿಕ  ಅಪಘಾತವೆಂದು ಬಿಂಬಿಸಿ ನಾಟಕವಾಡಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ಹೊಸಕೋಟೆ ಮೂಲದ ಶಿಲ್ಪರಾಣಿ ಈಕೆಯ ಪತಿ ಮುನಿಸ್ವಾಮಿಗೌಡ ಬಂಧಿತ ಆರೋಪಿಗಳು.  ಆಗಸ್ಟ್​ 12ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ, ಗೊಲ್ಲರಹೊಸಳ್ಳಿ ಗೇಟ್ ಬಳಿ ಲಾರಿ ಡಿಕ್ಕಿಯಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಈ ಮಧ್ಯೆ  ಬೆಂಗಳೂರು ಹೊಸಕೋಟೆ ಮೂಲದ ಶಿಲ್ಪರಾಣಿ ಎಂಬುವವರು ಜಿಲ್ಲಾಸ್ಪತ್ರೆಗೆ ಬಂದು ಶವದ ಗುರುತು ಪತ್ತೆ ಹಚ್ಚಿದ್ದರು. ಈ ಮೃತದೇಹ ನನ್ನ ಪತಿ ಮುನಿಸ್ವಾಮಿಗೌಡರದ್ದು ಎಂದು ಕಣ್ಣೀರು ಹಾಕಿದ್ದರು. ಆ.13 ರಂದು ಹೊಸಕೋಟೆ ತಾಲೂಕಿನ, ಚಿಕ್ಕಕೋಲಿಗ ಗ್ರಾಮದಲ್ಲಿ ಅಂತ್ಯಸಂಸ್ಕಾರ ಕೂಡ ನಡೆಸಲಾಗಿತ್ತು.

ಇದಾದ ಬಳಿಕ ಮೃತ ವ್ಯಕ್ತಿಯ ಕುತ್ತಿಗೆಯಲ್ಲಿದ್ದ ಗಾಯದ ಗುರುತು ಕಂಡು ಅನುಮಾನಗೊಂಡ ಪೊಲೀಸರು ತೀವ್ರ ತನಿಖೆಗೆ ಮುಂದಾಗಿದ್ದು ಗಂಡಸಿ ಠಾಣೆಯ ಪಿಎಸ್​ಐ ಹಾಗೂ ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷರರು ನಡೆಸಿದ ತನಿಖೆ ವೇಳೆ ಆಘಾತಕಾರಿ ಅಂಶ  ಬಯಲಾಗಿದೆ.

ಹೊಸಕೋಟೆಯಲ್ಲಿ ಎಮ್‌ಆರ್​ಎಫ್ ಟೈರ್ ಅಂಗಡಿ ಇಟ್ಟುಕೊಂಡಿದ್ದ ಮುನಿಸ್ವಾಮಿ ಗೌಡ, ಸಾಕಷ್ಟು ಸಾಲ ಮಾಡಿಕೊಂಡಿದ್ದ. ಈ ಸಾಲ ತೀರಿಸಲು ಹಣಕ್ಕಾಗಿ ಪತ್ನಿ ಶಿಲ್ಪರಾಣಿ ಮತ್ತು ಪತಿ ಮುನಿಸ್ವಾಮಿಗೌಡ ಇಬ್ಬರು ಸೇರಿ ಅಮಾಯಕನನ್ನ ಹತ್ಯೆ ಮಾಡಿದ್ದಾರೆ. ಪತಿ ಮುನಿಸ್ವಾಮಿಗೌಡನನ್ನೇ ಹೋಲುವ ವ್ಯಕ್ತಿಯನ್ನ ಕಾರಿನಲ್ಲಿ ಕರೆತಂದು ಅರಸೀಕೆರೆ ತಾಲೂಕಿನ ಗೊಲ್ಲರಹೊಸಳ್ಳಿ ಬಳಿ ಲಾರಿ ಡಿಕ್ಕಿ ಹೊಡೆಸಿ  ಹತ್ಯೆ ಮಾಡಿದ್ದಾರೆ. ಬಳಿಕ ಇದು ಅಪಘಾತವೆಂದು ಬಿಂಬಿಸಿದ್ದಾರೆ.

ಈ ಘಟನೆ ಬಳಿಕ ಮುನಿಸ್ವಾಮಿಗೌಡ ತಲೆಮರಿಸಿಕೊಂಡಿದ್ದ.  ಇತ್ತ ಪತಿ ಕಳೆದುಕೊಂಡ ನೋವಿನಲ್ಲಿ ಇದ್ದಂತೆ ಪತ್ನಿ ಶಿಲ್ಪರಾಣಿ ಕೂಡ ಡ್ರಾಮಾ ಮಾಡಿದ್ದಳು. ಇದೆಲ್ಲದರ ನಡುವೆ ಮುನಿಸ್ವಾಮಿಗೌಡ  ಮುಂದೆ ಏನು ಮಾಡಬೇಕೆಂದು ತಿಳಿಯದೆ ತನ್ನ ಸಂಬಂಧಿ ಇನ್ಸ್ ಪೆಕ್ಟರ್ ಒಬ್ಬರ ಮುಂದೆ ನಡೆದ ಘಟನೆಯನ್ನ ವಿವರಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದ. ಇವರ ಪ್ಲಾನ್ ನೋಡಿ ಬೆಚ್ಚಿಬಿದ್ದ ಆ ಇನ್‍ ಪೆಕ್ಟರ್ ಕೂಡಲೇ ಈ ವಿಚಾರವನ್ನ ಗಂಡಸಿ ಪೊಲೀಸರಿಗೆ ತಿಳಿಸಿದ್ದಾರೆ. ಇದೀಗ ಆರೋಪಿ ಪತಿ ಮುನಿಸ್ವಾಮಿಗೌಡ ಮತ್ತು ಪತ್ನಿ ಶಿಲ್ಪರಾಣಿಯನ್ನ  ಬಂಧಿಸಲಾಗಿದೆ.

Key words: murder, innocent, insurance money, arrest