16ನೇ ಹಣಕಾಸು ಆಯೋಗ ರಾಜ್ಯದ ಅನುದಾನ ಕೊರತೆ ನೀಗಿಸುವ ವಿಶ್ವಾಸ- ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ,ಆಗಸ್ಟ್, 30,2024 (www.justkannada.in): 16ನೇ ಹಣಕಾಸು ಆಯೋಗ ರಾಜ್ಯದ ಅನುದಾನ ಕೊರತೆ ನೀಗಿಸುವ ವಿಶ್ವಾಸವಿದೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.

ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಿನ್ನೆ 16 ನೇ ಹಣಕಾಸು ಆಯೋಗದವರೊಂದಿಗೆ ಸಭೆ ನಡೆದಿದ್ದು, ತೆರಿಗೆ ಹಂಚಿಕೆ ಹಾಗೂ ವಿಶೇಷ ಅನುದಾನಗಳ ಬಗ್ಗೆ ರಾಜ್ಯದ ನಿಲುವನ್ನು ಅವರಿಗೆ ಸ್ಪಷ್ಟಪಡಿಸಲಾಗಿದೆ. 15 ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದರ ಬಗ್ಗೆ ನವದೆಹಲಿಯಲ್ಲಿ ಸರಕಾರ ಪ್ರತಿಭಟನೆ ನಡೆಸಿತ್ತು.  ಆಯೋಗ ಶಿಫಾರಸ್ಸು ಮಾಡಿದ್ದ 11495 ಕೋಟಿ ರೂ.ಗಳು ರಾಜ್ಯಕ್ಕೆ ಬಿಡುಗಡೆ ಆಗಿರಲಿಲ್ಲ. ರಾಜ್ಯಕ್ಕೆ  ತೆರಿಗೆ ಹಂಚಿಕೆಯಾಗುತ್ತಿದ್ದ ತೆರಿಗೆ ಪ್ರಮಾಣ 4.713 ರಿಂದ 3.647 ಗೆ ಇಳಿದಿದ್ದು , 1.66 ರಷ್ಟು  ಪ್ರಮಾಣ ಕಡಿಮೆಯಾಗಿದೆ. ಈ ಎಲ್ಲ ಕಾರಣಗಳಿಂದ ಕಳೆದ ಐದು ವರ್ಷಗಳಿಂದ ರಾಜ್ಯಕ್ಕೆ ಸುಮಾರು  80,000 ಕೋಟಿ ರೂ. ನಷ್ಟವಾಗಿದೆ. ಈ ಕೊರತೆಯನ್ನು ಸರಿದೂಗಿಸಲು ನಿನ್ನೆ ನಡೆದ ಸಭೆಯಲ್ಲಿ ಆಯೋಗದವರಿಗೆ ವಿವರಿಸಲಾಗಿದೆ. 16 ನೇ ಹಣಕಾಸಿನ ಆಯೋಗದವರು ಹಿಂದಿನ ಹಣಕಾಸಿನ ಆಯೋಗದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಅನುದಾನದ ಕೊರತೆಯನ್ನು ಸರಿದೂಗಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.

ಪರಿಸರ ತೀರುವಳಿ ಬಂದ ತಕ್ಷಣ ಮಹಾದಾಯಿಗೆ ಚಾಲನೆ ನೀಡಲಾಗುತ್ತದೆ. ಮಹಾದಾಯಿ ಯೋಜನೆಗೆ ಚಾಲನೆ ನೀಡಲು ಸರ್ಕಾರ ಸಿದ್ದವಿದೆ. ಆದರೆ ಕೇಂದ್ರದಿಂದ ಪರಿಸರ  ತೀರುವಳಿ ನೀಡುವುದು ಬಾಕಿ ಇದ್ದು, ತೀರುವಳಿ ನೀಡಿದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ವಿಜಯೇಂದ್ರ ಹೇಳಿದ ಅಂತ ನಾನು ರಾಜೀನಾಮೆ ಕೊಟ್ಟುಬಿಡಬೇಕಾ.?

ರಾಜ್ಯಕ್ಕೆ ಹೊಸ ಸಿಎಂ ಬರಲಿದ್ದಾರೆ ಎಂಬ ಬಿ.ವೈ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ,  ವಿಜಯೇಂದ್ರ ಹೇಳಿದ ಅಂತ ನಾನು ರಾಜೀನಾಮೆ ಕೊಟ್ಟುಬಿಡಬೇಕಾ.? ಯಾಕೆ ರಾಜೀನಾಮೆ ಕೊಡಬೇಕು.? ಹಾಗಾದರೆ ಅವನ ಅಧ್ಯಕ್ಷಗಿರಿಗೆ ರಾಜೀನಾಮೆ ಕೊಡು ಅಂತ ನಾನು ಹೇಳ್ತಿನಿ ಕೊಡ್ತಾರಾ.? ರಾಜೀನಾಮೆ ಕೊಡುವ ಮಾತೇ ಇಲ್ಲ ಎಂದರು.

ಮುಡಾ ಪ್ರಕರಣ ಹಗರಣದ ತನಿಖಾ ವರದಿ ಇನ್ನೂ ಬಂದೇ ಇಲ್ಲ. ಅದರ ಸತ್ಯಾಸತ್ಯತೆ ಗೊತ್ತಾಗಬೇಕಾದರೆ ವರದಿ ಬರಬೇಕಲ್ವಾ.? ನಾಳೆ ವಿಚಾರ ಇದೆ ವಿಚಾರಣೆಯಲ್ಲಿ ತೀರ್ಪು ಏನು ಬರುತ್ತೆ ನೋಡೋಣ. ಬಿಜೆಪಿಯವರು ನಮ್ಮ ಸರ್ಕಾರವನ್ನ ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ನನ್ನ ಮೇಲೆ ಟಾರ್ಗೆಟ್ ಮಾಡುತ್ತಿದ್ದಾರೆ. ಮಾಡಲಿ ಎಲ್ಲವನ್ನೂ ಕಾನೂನಾತ್ಮಕವಾಗಿ ಎದುರಿಸುತ್ತೇವೆ. ನಾಳೆ ಎಲ್ಲಾ ಶಾಸಕರು ಸಚಿವರು, ಪರಿಷತ್ ಸದಸ್ಯರು ರಾಜಭವನ ಚಲೋ ಹಮ್ಮಿಕೊಂಡಿದ್ದಾರೆ. ಅಲ್ಲಿ ಕುಮಾರಸ್ವಾಮಿ ಸೇರಿದಂತೆ ಇನ್ನೂ ಹಳೆ ಕೇಸ್ ಜಾರ್ಜ್ ಶೀಟ್ ಸಲ್ಲಿಕೆಯಾಗಿದ್ರೂ ಅವರಿಗೆ ಯಾಕೆ ಇನ್ನೂ ಪ್ರಾಸಿಕ್ಯೂಷನ್ ಜಾರಿ ಮಾಡಿಲ್ಲ. ಅವರಿಗೂ ಪ್ರಾಸಿಕ್ಯೂಷನ್ ಜಾರಿ ಮಾಡಿ ಅಂತ ಒತ್ತಾಯ ಮಾಡಲಿದ್ದಾರೆ ಎಂದರು.

ನಟ ದರ್ಶನ್ ಪ್ರಕರಣ: ತಪ್ಪೆಸಗಿರುವ ಅಧಿಕಾರಿಗಳ ಅಮಾನತು
ನಟ ದರ್ಶನ್ ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಿರುವ ಪ್ರಕರಣ ಸರ್ಕಾರಕ್ಕೆ ಮುಜುಗರ ತಂದಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ನಿಟ್ಟಿನಲ್ಲಿ ಕರ್ತವ್ಯ ಲೋಪ ಎಸಗಿದ್ದ 9 ಜನ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಜೊತೆಗೆ ಉಳಿದ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಕಳುಹಿಸಲಾಗಿದ್ದು, ಇಂತಹ ತಪ್ಪು ನಡೆದ ಜೈಲಿನ ಡಿಜಿಪಿಗೆ ನೋಟೀಸನ್ನೂ ನೀಡಲಾಗಿದೆ ಎಂದರು.

Key words: 16th Finance Commission , confident, CM Siddaramaiah