ಕೆಪಿಎಸ್ ಸಿ ಪ್ರಶ್ನೆಪತ್ರಿಕೆಯಲ್ಲಿ ಲೋಪದೋಷ: ಆಯೋಗ ಎಷ್ಟು ಅಸಮರ್ಥ ಎಂಬುದು ಮತ್ತೆ ಜಗಜ್ಜಾಹೀರು- ಆರ್.ಅಶೋಕ್

ಬೆಂಗಳೂರು,ಆಗಸ್ಟ್,31,2024 (www.justkannada.in): ಕೆಪಿಎಸ್ ಸಿ ಪ್ರಶ್ನೆಪತ್ರಿಕೆಯ ತುಂಬಾ ಕಣ್ಣಿಗೆ ಕುಕ್ಕುವ ಹಾಗೆ ಕಾಣುತ್ತಿರುವ ಲೋಪದೋಷಗಳು ಕಂಡು ಬಂದಿದ್ದು,  ಆಯೋಗ ಎಷ್ಟು ಅಸಮರ್ಥವಾಗಿದೆ ಎಂಬುದನ್ನ ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ ಎಂದು  ರಾಜ್ಯ ಸರ್ಕಾರದ ವಿರುದ್ದ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಆರ್.ಅಶೋಕ್, “ಅಂಗೈ ಹುಣ್ಣಿಗೆ ಕನ್ನಡಿ ಬೇಕೆ” ಎಂಬಂತೆ ಕೆಪಿಎಸ್ ಸಿ ಪ್ರಶ್ನೆಪತ್ರಿಕೆಯ ತುಂಬಾ ಕಣ್ಣಿಗೆ ಕುಕ್ಕುವ ಹಾಗೆ ಕಾಣುತ್ತಿರುವ ಲೋಪದೋಷಗಳು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳು ಈಗಾಗಲೇ ಹರಿದಾಡುತ್ತಿದ್ದರೂ, ದೋಷಗಳಿಗೆ, ಭಾಷಾಂತರ ತಪ್ಪುಗಳಿಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ಹೊರಡಿಸಿರುವ ಪ್ರಕಟಣೆ ಅತ್ಯಂತ ಹಾಸ್ಯಾಸ್ಪದ ಮತ್ತು ಅಸಂಬದ್ಧವಾಗಿದೆ ಎಂದು ಟೀಕಿಸಿದ್ದಾರೆ.

ಪ್ರಶ್ನೆ ಪತ್ರಿಕೆ ತಯಾರಾದ ನಂತರ ನುರಿತ ಸಂಪನ್ಮೂಲ ವ್ಯಕ್ತಿಗಳ ಕೈಯಲ್ಲಿ Proof Read ಮಾಡಿಸಿ, ಪ್ರಶ್ನೆಗಳ ರಚನೆ, ನಿಖರತೆ, ತರ್ಜುಮೆ ಮುಂತಾದವುಗಳಲ್ಲಿ ಯಾವುದಾದರೂ ಲೋಪದೋಷಗಳು ಇದ್ದಲ್ಲಿ ಅದನ್ನು ತಿದ್ದುಪಡಿ ಮಾಡಿದ ನಂತರ ಪ್ರಶ್ನೆ ಪತ್ರಿಕೆ ಅಂತಿಮಗೊಳಿಸಿ ಪರೀಕ್ಷೆ ನಡೆಸಿದ್ದರೆ ಇವತ್ತು ಇಡೀ ವ್ಯವಸ್ಥೆ ನಗೆಪಾಟಲಿಗೀಡಾಗುವ ಪರಿಸ್ಥಿತಿ ಬರುತ್ತಿರಲಿಲ್ಲ.

ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಈಗಾಗಲೇ ಬಹಿರಂಗ ಚರ್ಚೆಯಾಗುತ್ತಿರುವಾಗ ಆಕ್ಷೇಪಣೆ ಸಲ್ಲಿಸಬೇಕು ಎಂದು ಪ್ರಕಟಣೆ ಹೊರಡಿಸಿರುವುದು ಆಯೋಗ ಎಷ್ಟು ಅಸಮರ್ಥವಾಗಿದೆ ಎಂಬುದನ್ನ ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಜವಾಬ್ದಾರರಾದ ಅಧಿಕಾರಿಗಳನ್ನು ಈ ಕೊಡಲೇ ಅಮಾನತ್ತು ಮಾಡಿ ತನಿಖೆಗೆ ಆದೇಶ ನೀಡಬೇಕು. ಸುದ್ಧಿಗೋಷ್ಠಿ ನಡೆಸಿ ಪರೀಕ್ಷಾರ್ಥಿಗಳಿಗೆ ಸ್ಪಷ್ಟನೆ ನೀಡಿ, ಮುಂದಿನ ನಡೆಯ ಬಗ್ಗೆ ಮಾಹಿತಿ ನೀಡಬೇಕು. ಕೆಪಿಎಸ್ ಸಿ ವ್ಯವಸ್ಥೆಗೆ ಆಮೂಲಾಗ್ರ ಸುಧಾರಣೆ ತರುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆರ್ ಅಶೋಕ್ ಆಗ್ರಹಿಸಿದ್ದಾರೆ.

Key words: KPSC, question paper, Errors , R.Ashok