ಕೆಂಪಣ್ಣ ಆಯೋಗದ ವರದಿ ಬಗ್ಗೆಯೂ ಸಂಪುಟದಲ್ಲಿ ಚರ್ಚೆಯಾಗಲಿ- ಕೇಂದ್ರ ಸಚಿವ ಹೆಚ್.ಡಿಕೆ

ಶಿವಮೊಗ್ಗ,ಸೆಪ್ಟಂಬರ್,5,2024 (www.justkannada.in): ಕೋವಿಡ್ ಹಗರಣದ ತನಿಖಾ ವರದಿಯಲ್ಲಿ ಏನಿದೆ  ಎಂದು ಗೊತ್ತಿಲ್ಲ. ಸಂಪುಟದಲ್ಲಿ ಈ ಬಗ್ಗೆ ಚರ್ಚೆ ಆಗುತ್ತೆ ಎಂಬ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ. ಕೆಂಪಣ್ಣ ಆಯೋಗ ವರದಿ ಬಗ್ಗೆಯೂ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಲಿ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕೆಂಪಣ್ಣ ಆಯೋಗ ವರದಿ ಏಕೆ ಕ್ಯಾಬಿನೆಟ್ ಮುಂದೆ ತರದೆ ಬಿಟ್ಟಿದ್ದಾರೆ. ಅದನ್ನೂ ಸಂಪುಟದ ಮುಂದೆ ತಂದು ಚರ್ಚೆ ಮಾಡಲಿ ಎಂದು ಹೇಳಿದರು.

ಮುಡಾ ಹಗರಣದಲ್ಲಿ ಹಿಂದಿನ ಆಯುಕ್ತ ದಿನೇಶ್ ಕುಮಾರ್ ಅಮಾನತು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಡಿಕೆ, ಈಗಾಗಲೇ ಹೈಕೋರ್ಟ್ ನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದವಾಗಿದೆ. ಸಿದ್ದರಾಮಯ್ಯ ಅವರ ಪರ ವಕೀಲರು ವಾದ ಮಾಡಲು ಇನ್ನೂ ಸಮಯ ಕೇಳುತ್ತಿದ್ದಾರೆ ಎಂದರು.

ವಿಐಎಸ್‌ಎಲ್ ನಿರ್ವಹಣೆಗೆ 10-15 ಸಾವಿರ ಕೋಟಿ ಬೇಕು. ವಿಐಎಸ್‌ಎಲ್ ಹಾಗು ವೈಜಾಕ್ ಬಗ್ಗೆ ನಮಗೆ ಬದ್ಧತೆಯಿದೆ. ಆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಯುತ್ತಿದೆ. 10-15 ಸಾವಿರ ಕೋಟಿ ಬೇಕಾಗಿರುವುದರಿಂದ ಸಮಯ ಹಿಡಿಯುತ್ತದೆ ಎಂದು ಹೆಚ್ ಡಿಕೆ ತಿಳಿಸಿದರು.

Key words: discussion, Kempanna commission, report, HDK