ಮೈಸೂರು ದಸರಾ: ಈ ಬಾರಿ 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ

ಮೈಸೂರು,ಸೆಪ್ಟಂಬರ್,23,2024 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಈ ಬಾರಿ 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ಇರಲಿದೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಮೈಸೂರಿನ‌ ವಿಜಯನಗರದಲ್ಲಿರುವ ಚೆಸ್ಕಾಂನ ಪ್ರಧಾನ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರು ಮೈಸೂರು ದಸರಾ ದೀಪಾಲಂಕಾರ ಹಾಗೂ ಡ್ರೋನ್ ಪ್ರದರ್ಶನದ ಪೋಸ್ಟರ್ ಬಿಡುಗಡೆ ಮಾಡಿದರು. ಈ ವೇಳೆ ಚೆಸ್ಕಾಂನ ಅಧ್ಯಕ್ಷ ಶಾಸಕ ರಮೇಶ್ ಬಂಡೀಸಿದ್ದೇಗೌಡ, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಚೆಸ್ಕಾಂ ಎಂ.ಡಿ ಶೀಲಾ, ತಾಂತ್ರಿಕ ವಿಭಾಗದ ನಿರ್ದೇಶಕ ಮುನಿಗೋಪಾಲ್ ರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪೋಸ್ಟರ್ ಬಿಡುಗಡೆ ಬಳಿಕ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಈ ಬಾರಿ 21ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ಇರಲಿದೆ. ದಸರಾ ಮುಗಿದ ಬಳಿಕವೂ ಹತ್ತು ದಿನಗಳ ಕಾಲ ದೀಪಾಲಂಕಾರ ವಿಸ್ತರಣೆ ಮಾಡಲಾಗುತ್ತದೆ. ನಗರದ ಸುತ್ತಮುತ್ತ 130 ಕಿ.ಮೀ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ ಎಂದು ತಿಳಿಸಿದರು.

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅಕ್ಟೊಬರ್ 6, 7, 11, 12 ರಂದು ಡ್ರೋನ್ ಶೋ ಆಯೋಜಿಸಲಾಗಿದೆ. ಜಂಬುಸವಾರಿ ಮೆರವಣಿಗೆಯಲ್ಲಿ  ವಿದ್ಯುತ್ ರಥ ಸ್ಥಬ್ದಚಿತ್ರ ಮೆರವಣಿಗೆ ಇರಲಿದೆ. ನಗರದ ಪ್ರಮುಖ ವೃತ್ತಗಳಲ್ಲಿ ಪ್ರಜಾಪ್ರಭುತ್ವ ಸಾಗಿ ಬಂದ ಹಾದಿ, ತಾಯಿ ಭುವನೇಶ್ವರಿ, ಸೋಮನಾಥೆಶ್ವರ ದೇವಾಲಯ, ಸಂವಿಧಾನ ಪ್ರಸ್ತಾವನೆ, ಮೈಸೂರು ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ರಾಣಿ ಕೆಂಪನಂಜಮ್ಮಣಿ, ಜಯಚಾಮರಾಜೇಂದ್ರ ಒಡೆಯರ್, ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಪ್ರತಿಕೃತಿಗಳ ನಿರ್ಮಾಣ ಮಾಡಲಾಗುತ್ತದೆ. ಈ ಬಾರಿಯ ದಸರಾಗೆ ವಿದ್ಯುತ್ ದೀಪಾಲಂಕಾರ ಮೆರಗು ನೀಡಲಿದೆ ಎಂದು ತಿಳಿಸಿದರು.

Key words: Mysore dasara, electric lighting, 21 days, Minister, HC Mahadevappa