ಸರ್ಕಾರಿ ಕಚೇರಿಗಳಲ್ಲಿ ಗ್ಯಾರೆಂಟಿ ಯೋಜನೆಗಳ ಫಲಕ ಹಾಕುವುದು ಕಡ್ಡಾಯ- ಡಾ. ಪುಷ್ಪಾ ಅಮರನಾಥ್

ಮೈಸೂರು,ಸೆಪ್ಟಂಬರ್,24,2024 (www.justkannada.in): ಜನರಿಗಾಗಿಯೇ ಜಾರಿಮಾಡಲಾಗಿರುವ  ಪಂಚ ಗ್ಯಾರೆಂಟಿ ಯೋಜನೆಗಳನ್ನು ರಾಜ್ಯದ ಪ್ರತಿಯೊಬ್ಬರಿಗೂ ತಲುಪುವಂತೆ ಮಾಡುವುದು ಎಲ್ಲಾ ಅಧಿಕಾರಿಗಳ ಜವಾಬ್ದಾರಿ. ಸರ್ಕಾರಿ ಕಚೇರಿಗಳಲ್ಲಿ ಗ್ಯಾರೆಂಟಿ ಯೋಜನೆಗಳ ಫಲಕ ಹಾಕುವುದು ಕಡ್ಡಾಯ ಎಂದು  ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರ್ ನಾಥ್ ಹೇಳಿದರು.

ಇಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತಂತೆ ಮೈಸೂರು ಜಿಲ್ಲೆಗೆ ಸಂಬಂಧಪಟ್ಟಂತೆ ಪ್ರಗತಿ ಪರಿಶೀಲನ ಸಭೆ ನಡೆಯಿತು. ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರ್ ನಾಥ್ ಅವರು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಜನರಿಗಾಗಿಯೇ ಜಾರಿಮಾಡಲಾಗಿರುವ  ಪಂಚ ಗ್ಯಾರೆಂಟಿ ಯೋಜನೆಗಳನ್ನು  ರಾಜ್ಯದ ಪ್ರತಿಯೊಬ್ಬರಿಗೂ ತಲುಪುವಂತೆ ಮಾಡುವುದು ಎಲ್ಲಾ ಅಧಿಕಾರಿಗಳ ಜವಾಬ್ದಾರಿ. ಪ್ರಸ್ತುತ ಗ್ಯಾರೆಂಟಿ ಯೋಜನೆಗಳ ಅನುಷ್ಠಾನದಲ್ಲಿ ಮೈಸೂರು 5 ನೇ ಸ್ಥಾನದಲ್ಲಿದ್ದು, ಮುಂಬರುವ ದಿನಗಳಲ್ಲಿ ಮೊದಲನೇ ಸ್ಥಾನಕ್ಕೆ ಬರುವಂತೆ ಮಾಡಬೇಕು. ಮುಖ್ಯಮಂತ್ರಿಗಳ ಜಿಲ್ಲೆಯಾದ್ದರಿಂದ  ಜವಾಬ್ದಾರಿ ಹಾಗೂ ನಿರೀಕ್ಷೆ  ಹೆಚ್ಚಾಗಿರಿತ್ತದೆ ಅದನ್ನು ಅರಿತು ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.

ಜಿಲ್ಲಾ ಮಟ್ಟ, ತಾಲ್ಲೂಕು ಮಟ್ಟದ ಹಾಗೂ ಗ್ರಾಮಪಂಚಾಯಿತಿಯ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಸ್ಥಳಗಳಿಗೆ ಭೇಟಿ  ನೀಡಿ ಗ್ಯಾರೆಂಟಿ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿದೆಯೇ ಎಂಬುದರ ಮಾಹಿತಿ ಕಲೆಹಾಕಬೇಕು. ಒಂದು  ವೇಳೆ ಜನರಿಗೆ ತಲುಪುತ್ತಿಲ್ಲವಾದರೆ ಅದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಯಾರೊಬ್ಬರೂ ವಂಚಿತರಾಗದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದಾಗ ಮಾತ್ರ ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.

ಅನ್ನಭಾಗ್ಯ ಎಂಬುದು ಒಂದು ಮಹತ್ವದ ಯೋಜನೆಯಗಿದ್ದು, ಇದರಿಂದ ಎಷ್ಟೋ ಬಡಜನರಿಗೆ ಆಹಾರ ದೊರಕುತ್ತಿದೆ. ಆದರೇ ಇತ್ತೀಚಿನ ದಿನಗಳಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಅಲ್ಲಿನ ಅಧಿಕಾರಿಗಳು ಸಾರ್ವಜನಿಕರಿಗೆ ಪಡಿತರ ತೂಕದಲ್ಲಿ ಮೋಸ ಮಾಡುತ್ತಿರುವುದು ಹಾಗೂ ಸಾರ್ವಜನಿಕರಿಗೆ ಪಡಿತರ ವಿತರಿಸಲು ನಿರ್ದಿಷ್ಟ ಸಮಯ ನಿಗಧಿ ಮಾಡದೆ ತಮ್ಮ ಬಿಡುವಿನ ವೇಳೆಯಲ್ಲಿ ವಿತರಿಸುವಂತೆ ಹೇಳುತ್ತಿರುವುದು ಕಂಡು ಬರುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಮೇಲಾಧಿಕಾರಿಗಳು ಕ್ರಮ ಕೈಗೊಂಡು ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕು. ಪಡಿತರಕ್ಕೆ ಸಂಬಂಧಿಸಿದಂತೆ ಫಲಾನುಭವಿಗಳ  ಬಯೋ ಮೆಟ್ರಿಕ್ ನಲ್ಲಿ ತೊಂದರೆ ಉಂಟಾದರೆ ಅದಕ್ಕೆ ಪರ್ಯಾಯ ಮಾರ್ಗವನ್ನು ನೀಡಿ ಪ್ರತಿಯೊಬ್ಬರಿಗೂ ಪಡಿತರ ದೊರಕುವಂತೆ ಮಾಡಬೇಕು ಎಂದು ಸೂಚಿಸಿದರು.

ಮಹಿಳೆಯರಿಗೆ ಬಹಳ ಉಪಯುಕ್ತವಾಗಿರುವಂತಹ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಇನ್ನು ಹೆಚ್ಚಿನ ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗುವಂತೆ ಮಾಡಬೇಕು. ಕೆಲವು ತಾಂತ್ರಿಕ ದೋಷಗಳಿಂದ ಕಳೆದ 2 ತಿಂಗಳಿನಿಂದ  ಗೃಹಲಕ್ಷ್ಮಿ ಹಣ ಖಾತೆಗೆ ಜಮೆ ಮಾಡಲಾಗಿಲ್ಲ. ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿ ಶೀಘ್ರದಲ್ಲೇ 2000 ರೂ. ಗಳನ್ನು ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ರಾಜ್ಯ ಸರ್ಕಾರದ ಮಹತ್ವದ ಪಂಚ ಗ್ಯಾರೆಂಟಿ ಯೋಜನೆಗಳ ಬಗ್ಗೆ ಜನರಿಗೆ ಇನ್ನೂ ಹೆಚ್ಚಿನ ಪ್ರಚಾರದ ಅವ್ಯಕತೆ ಇದ್ದು, ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಬೇಕು. ಈ ಹಿನ್ನೆಲೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ, ವಿದ್ಯಾಸಂಸ್ಥೆಗಳಲ್ಲಿ, ಆಸ್ಪತ್ರೆಗಳಲ್ಲಿ, ಬಸ್ ಹಾಗೂ ರೈಲ್ವೆ ನಿಲ್ದಾಣ ಸೇರಿದಂತೆ ಸಾರ್ವಜನಿಕರು ಹೆಚ್ಚಾಗಿ ಸಂಚಾರಿಸುವ ಇತ್ಯಾದಿ ಸ್ಥಳಗಳಲ್ಲಿ ಹೊರ್ಡಿಂಗ್, ಪೋಸ್ಟರ್ಸ್ ಗಳನ್ನು ಹಾಕುವ ಮೂಲಕ ಅಲ್ಲದೆ ಶಾಲಾ -ಕಾಲೇಜುಗಳಲ್ಲಿ ಸಂವಾದಗಳನ್ನು ಏರ್ಪಡಿಸಿ ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರದ ಯಾವುದೇ ಯೋಜನೆಯಾದರೂ ಸಹ ಯಶಸ್ವಿಯಾಗಬೇಕೆಂದರೆ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಗಳ ಸಹಕಾರ ಬಹಳ ಮುಖ್ಯವಾಗಿದ್ದು, ಈ ಸಂಬಂಧ ಎಲ್ಲರೂ ಸರ್ಕಾರದೊಂದಿಗೆ ಸಹಕರಿಸಿ, ಬಡಜನರ ಕಷ್ಟಗಳನ್ನು ಪರಿಹರಿಸಲು ಮುಂದಾಗಬೇಕು. ಇಲ್ಲವಾದರೆ ಅಭಿವೃದ್ಧಿ ಆಗಲು, ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಹಾಗಾಗಿ ಎಲ್ಲರೂ ಒಗ್ಗಟ್ಟಾಗಿ ಯೋಜನೆಗಳ ಯಶಸ್ವಿಗೆ ಕೆಲಸ ಮಾಡಬೇಕು ಎಂದು ಹೇಳಿದರು.

ಪಂಚ ಗ್ಯಾರೆಂಟಿ ಯೋಜನೆಗಳಿಗೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿ, ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಹಣ ಜಮೆ ಮಾಡಲಾಗುತ್ತಿದ್ದು, ಸರಿಯಾದ ದಾಖಲೆಗಳ ಕೊರತೆಯಿಂದಾಗಿ ಕೆಲವು ಫಲನುಭವಿಗಳು ಯೋಜನೆಯಿಂದ ವಂಚಿತರಾಗಿದ್ದಾರೆ. ಇದನ್ನು ಆದಷ್ಟುಬೇಗ ಪರಿಹರಿಸಿ ಅರ್ಹರಿಗೆ ತಲುಪುವಂತೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಅರ್ಹ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದು, ಕೆಲವು ದಾಖಲೆ ಪರಿಶೀಲನೆಯ ಹಂತದಲ್ಲಿರುತ್ತವೆ ಅವುಗಳನ್ನು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಿ ಯೋಜನೆಯನ್ನು ತಲುಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಗೃಹಲಕ್ಷ್ಮಿ ಹಣದಿಂದ ಸ್ವ-ಉದ್ಯೋಗ ಪ್ರಾರಂಭಿಸಿ ಬದುಕು ಕಟ್ಟಿಕೊಂಡೆ- ಫಲಾನುಭವಿ ಮಹಿಳೆ

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಯಾದ ಲಕ್ಷ್ಮೀ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.  ನನಗೆ ಬಂದಂತಹ 5 ತಿಂಗಳ ಗೃಹಲಕ್ಷ್ಮಿ ಹಣವನ್ನು  ಸಂಗ್ರಹಿಸಿ, ಅದರಲ್ಲಿ ಇಂದು ವಿವಿಧ ರೀತಿಯ ಬಟ್ಟೆ ಬ್ಯಾಗ್ ಗಳನ್ನು ತಯಾರಿಸುವ ಮೂಲಕ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಬದುಕನ್ನು ಕಟ್ಟಿಕೊಂಡೆ. ಇದರಿಂದ ದಿನಕ್ಕೆ ಸುಮಾರು 350 ರೂ. ಲಾಭ ಗಳಿಸುತ್ತಿದ್ದೇನೆ. ಒಟ್ಟಾರೆಯಾಗಿ ನಮ್ಮ ಕುಟುಂಬಕ್ಕೆ ಗೃಹಲಕ್ಷ್ಮಿ ಹಾಗೂ ಸರ್ಕಾರದ ಎಲ್ಲಾ ಗ್ಯಾರೆಂಟಿ ಯೋಜನೆಗಳು ಬಹಳ ಉಪಯುಕ್ತವಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಗ್ಯಾರೆಂಟಿ ಯೋಜನೆಗಳ ಮತ್ತೊಬ್ಬ ಫಲಾನುಭವಿಯಾದ  ನಜ್ಮಾ ಕೌಸರ್  ಅವರು ಮಾತನಾಡಿ,ಮೂಲತಃ ಗೃಹಿಣಿಯಾಗಿರುವ ನಾನು ಮನೆಯ ದಿನನಿತ್ಯದ ಖರ್ಚು ಹಾಗೂ ವೈಯಕ್ತಿಕ ಖರ್ಚಿನ ಹಣಕ್ಕಾಗಿ ನನ್ನ ಪತಿಯನ್ನೇ ಅವಲಂಬಿಸಿದ್ದೆ. ಆದರೇ ಗೃಹಲಕ್ಷ್ಮಿ ಯೋಜನೆ ಬಂದಾಗಿನಿಂದ ನನ್ನ ಗೃಹಲಕ್ಷ್ಮಿ ಹಣವನ್ನು ಉಳಿತಾಯ ಮಾಡಿ ಹೊಲಿಗೆ ಯಂತ್ರವನ್ನು ಖರೀದಿಸಿ, ಪ್ರಸ್ತುತ ನನ್ನ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿದ್ದೇನೆ. ಅಲ್ಲದೆ ನನ್ನ ತಂದೆ ಮರಣ ಹೊಂದಿದಾಗ ನನ್ನ ಅಮ್ಮನ ಯೋಗಕ್ಷೇಮ ವಿಚಾರಿಸಲು ಶಕ್ತಿ ಯೋಜನೆಯ ಮೂಲಕ 4 ತಿಂಗಳು ಸುಮಾರು 30-40 ಕಿ ಮೀ ಉಚಿತ ಬಸ್ ಪ್ರಯಾಣ ಮಾಡಿದ್ದೇನೆ ಇದರಿಂದ 25 ಸಾವಿರ ಹಣವನ್ನು ಉಳಿಸಿದ್ದೇನೆ. ಪ್ರಸ್ತುತ ನಾನು ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಯಲ್ಲಿ 4 ಗ್ಯಾರೆಂಟಿಗಳ ಉಪಯೋಗವನ್ನು ಪಡೆಯುತ್ತಿದ್ದೇನೆ. ಈ ಗ್ಯಾರಂಟಿಗಳು ಪ್ರತಿಯೊಬ್ಬ ಬಡಜನರ ಜೀವನಕ್ಕೆ ಆಧಾರ ಸ್ತಂಭವಾಗಿವೆ ಎಂದು ಹೇಳಿದರು.

ಹೊಟ್ಟೆ ತುಂಬಿದವರಿಗೆ ಹಸಿವಿನ ಅರಿವು ಆಗಲ್ಲ: ನಮ್ಮನೆಯ ಯಜಮಾನ ಗೃಹಲಕ್ಷ್ಮಿ – ಫಲಾನುಭವಿ ಮಹಿಳೆ

ಸರ್ಕಾರದ ಗ್ಯಾರಂಟಿ ಯೋಜನೆಗಳನ್ನ ಟೀಕಿಸುವವರು ಹೊಟ್ಟೆ ತುಂಬಿದವರು. ಹೊಟ್ಟೆ ತುಂಬಿದವರಿಗೆ ಹಸಿವಿನ ಅರಿವು ಆಗುವುದಿಲ್ಲ ಎಂಬುದು ಗ್ಯಾರಂಟಿ ಯೋಜನೆಗಳ ಫಲಾನುಭವಿ ಮಹಿಳೆ ಕ್ಯಾತಮಾರನಹಳ್ಳಿಯ ನಂದಿನಿಯವರ ಖಡಕ್ ಮಾತು. ಸಂವಾದದಲ್ಲಿ ತನ್ನ ಅನಿಸಿಕೆಗಳನ್ನ ವ್ಯಕ್ತಪಡಿಸಿ ಇಂತಹ ಯೋಜನೆಗಳು ಈ ಮುಂಚೆಯೇ ಇದ್ದಿದ್ದರೆ ನಾವು ಬಾಲ್ಯದಲ್ಲಿ ಹಸಿವಿನಿಂದ ನರಳುವುದು ತಪ್ಪುತಿತ್ತು ಎಂದರು.

ಗೃಹಲಕ್ಷ್ಮಿ ಯೋಜನೆಯ ಹಣ ನನ್ನ ತಾಯಿಗೆ ಅಂದೇ ಸಿಕ್ಕಿದ್ದಿದ್ದರೆ ನಾವು ನಾಲ್ಕು ಜನ ಹೆಣ್ಣು ಮಕ್ಕಳು ವಿದ್ಯಾವಂತೆಯರಾಗುತಿದ್ದೆವು. ಆದರೆ ಗೃಹಲಕ್ಷ್ಮಿಯ  ಭಾಗ್ಯ ನನ್ನ ತಾಯಿಗೆ ಸಿಕ್ಕಿರಲಿಲ್ಲ ಎಂದು ವಿಷಾದಿಸಿದರು.

ಸಭೆಯಲ್ಲಿ  ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ ಎಂ ಗಾಯತ್ರಿ, ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜು, ಕರ್ನಾಟಕ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಪ್ರಧಿಕಾರದ ಜಿಲ್ಲಾಧ್ಯಕ್ಷರಾದ ಅರುಣ್ ಕುಮಾರ್ ಸೇರಿದಂತೆ ಕರ್ನಾಟಕ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಸದಸ್ಯರು ಹಾಗೂ ಮೈಸೂರು ಜಿಲ್ಲಾ ಫಲನುಭವಿಗಳು ಉಪಸ್ಥಿತರಿದ್ದರು.

Key words: mysore, guarantee schemes, meeting, Dr. Pushpa Amarnath