ದೈಹಿಕ ಸಂಪರ್ಕಕ್ಕೆ ಒಪ್ಪದ ಪತ್ನಿಯನ್ನು ಹತ್ಯೆಗೈದಿದ್ದ ಪತಿಗೆ ಜೀವಾವಧಿ ಶಿಕ್ಷೆ ಪ್ರಕಟ

ಮೈಸೂರು,ಸೆಪ್ಟಂಬರ್,26,2024 (www.justkannada.in):  ದೈಹಿಕ ಸಂಪರ್ಕಕ್ಕೆ ಒಪ್ಪದ ಪತ್ನಿಯನ್ನ ಹತ್ಯೆಗೈದಿದ್ದ ಪತಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಜವರಾಜು @ ದೇವರಾಜು ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿ. ದೇವರಾಜು  ಪ್ರಕರಣದಲ್ಲಿ ಆರೋಪಿ ಜವರಾಜು @ ದೇವರಾಜು ಸುಮಾರು 30 ವರ್ಷಗಳ ಹಿಂದೆ ಲಲಿತಾದ್ರಿಪುರದ ಜಯಮ್ಮ ರವರನ್ನು ಮದುವೆಯಾಗಿದ್ದನು. ಆಕೆಗೂ ಸಹ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿದ್ದರಿಂದ ಆಕೆ ಆರೋಪಿಯನ್ನು ಬಿಟ್ಟು ತವರು ಮನೆಗೆ  ಸೇರಿಕೊಂಡಿದ್ದರು.  ನಂತರ ಆರೋಪಿಯು ದಿ:01-11-1998 ರಂದು ಚಟ್ನಹಳ್ಳಿ ಗ್ರಾಮದ ಮೃತ ಪುಟ್ಟಮ್ಮನನ್ನು ಮದುವೆಯಾಗಿದ್ದು, ‘ಇವರ ಸಂಬಂಧದಿಂದ ಒಬ್ಬ ಮಗಳಿದ್ದಾಳೆ.

ಈ ಮಧ್ಯೆ ಆರೋಪಿ ದೇವರಾಜು ಮದುವೆಯಾದಾಗಿನಿಂದಲೂ ತನ್ನ ಹೆಂಡತಿ ಪುಟ್ಟಮ್ಮಳಿಗೆ ಸಣ್ಣಪುಟ್ಟ ವಿಚಾರಕ್ಕೆ ಬೈಯುವುದು, ಹಲ್ಲೆ ಮಾಡುವುದು, ಆಕೆಯ ನಡತೆಯ ಮೇಲೆ ಸಂಶಯಪಡುವುದು ಮತ್ತು ಪುಟ್ಟಮ್ಮಳಿಗೆ ಮನೆಯಲ್ಲಿ ಮಗಳು ಇದ್ದ ಸಮಯದಲ್ಲಿ ಯಾವಾಗ ಬೇಕೆಂದರೆ ಆವಾಗ ದೈಹಿಕ ಸಂಪರ್ಕಕ್ಕೆ ಬಲವಂತ ಮಾಡುತ್ತಿದ್ದು, ಪುಟ್ಟಮ್ಮ ಇದಕ್ಕೆ ಒಪ್ಪದೇ ಇದ್ದಾಗ ಆಕೆಯ ಮೇಲೆ ಹಲ್ಲೆ ಮಾಡಿ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ನೀಡಿದ ಆರೋಪ ಕೇಳಿ ಬಂದಿತ್ತು.

ಈ ಮಧ್ಯೆ ದಿ:27-06-2022 ರಂದು ಮಧ್ಯಾಹ್ನದ ವೇಳೆ ಮೃತ ಪುಟ್ಟಮ್ಮ ಮಲಗಿರುವಾಗ ಆರೋಪಿಯು ತನ್ನೊಂದಿಗೆ ದೈಹಿಕ ಸಂಪರ್ಕಕ್ಕೆ ಒಪ್ಪದೇ ಇದ್ದ ಕಾರಣ ಕಬ್ಬಿಣದ ಮಚ್ಚಿನಿಂದ ಪುಟ್ಟಮ್ಮರನ್ನು ಹತ್ಯೆಗೈದು ನಂತರ ಮನೆಯ ಬಾಗಿಲನ್ನು ಹಾಕಿಕೊಂಡು ತನ್ನ ಮೋಟಾ‌ರ್ ಸೈಕಲ್‌ ನಲ್ಲಿ ಪರಾರಿಯಾಗಿದ್ದನು.  ದೇವರಾಜು ವಿರುದ್ದದ ಆರೋಪ ತನಿಖೆಯಿಂದ ದೃಢಪಟ್ಟಿದ್ದು, ತನಿಖೆಯನ್ನು ಅಂದಿನ ತನಿಖಾಧಿಕಾರಿಯಾದ ಸ್ವರ್ಣ.ಜಿ.ಎಸ್  ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳವರ್  ಅವರು ಅಭಿಯೋಜನೆಯು ಹಾಜರುಪಡಿಸಿದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಆರೋಪಿಯು ಅಪರಾಧ ಎಸಗಿರುವುದು ಸಾಬೀತಾಗಿದ್ದರಿಂದ ಆರೋಪಿಗೆ ಕಲಂ 498(ಎ) ಐಪಿಸಿ ಅಡಿಯ ಅಪರಾಧಕ್ಕೆ 3 ವರ್ಷ ಕಠಿಣ ಶಿಕ್ಷೆ ಮತ್ತು ರೂ.5,000/- ದಂಡವನ್ನು ವಿಧಿಸಿದ್ದು ಮತ್ತು ಕಲಂ 302 ಐಪಿಸಿ ಅಡಿಯ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು ರೂ.10,000/- ದಂಡವನ್ನು ವಿಧಿಸಿ ತೀರ್ಪು  ನೀಡಿದೆ.

ಸದರಿ ಪ್ರಕರಣದಲ್ಲಿ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಬಿ.ಈ.ಯೋಗೇಶ್ವರ ರವರು ಸರ್ಕಾರದ ಪರ ವಾದ ಮಂಡಿಸಿದ್ದರು. ವರುಣಾ ಪೊಲೀಸ್ ಠಾಣೆ ಸಿಬ್ಬಂದಿ ಸ್ಮಿತಾ ಅವರು ಸಾಕ್ಷಿಗಳನ್ನು ಸಕಾಲಕ್ಕೆ ಹಾಜರುಪಡಿಸಿದ್ದರು.

Key words: mysore, husband, murder, wife, life imprisonment