ಮೈಸೂರು,ಸೆಪ್ಟಂಬರ್,30,2024 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಮೀಪಿಸುತ್ತಿದ್ದು ಎಲ್ಲಾ ಸಿದ್ದತಾ ಕಾರ್ಯಗಳು ಅಂತಿಮ ಹಂತಕ್ಕೆ ಬಂದಿವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.
ಮೈಸೂರು ದಸರಾ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಮಹದೇವಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಒ ಗಾಯತ್ರಿ ಭಾಗಿಯಾಗಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ದಸರಾ ಆಚರಣೆಗೆ ಎಲ್ಲಾ ಸಿದ್ದತಾ ಕಾರ್ಯಗಳು ಅಂತಿಮ ಹಂತಕ್ಕೆ ಬಂದಿವೆ. ಅಕ್ಟೋಬರ್ 3ರಂದು 9.15ರಿಂದ 9.40 ರ ವೃಶ್ಚಿಕ ಲಗ್ನದಲ್ಲಿ ದಸರಾ ಉದ್ಘಾಟನೆಯಾಗಲಿದೆ. ಅಂದೇ ಎಲ್ಲಾ ಕಾರ್ಯಕ್ರಮಗಳು ಉದ್ಘಾಟನೆಗೊಳ್ಳಲಿದೆ. ಅಕ್ಟೋಬರ್ 3ರಂದು ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಆಗುತ್ತದೆ. ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನ ಸಿಎಂ ನೀಡಲಿದ್ದಾರೆ. 11ವೇದಿಕೆಗಳಲ್ಲಿ 508 ಕಲಾ ತಂಡಗಳು ಟೌನ್ ಹಾಲ್ ನಲ್ಲಿ ನಾಟಕ ಪ್ರದರ್ಶನ ಮಾಡಲಿದ್ದಾರೆ. ಅ 5ರಂದು ಪ್ರಭುತ್ವ ಮತ್ತು ಸಂವಿಧಾನ ಆಶಯದಲ್ಲಿ ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ ಎಂದು ತಿಳಿಸಿದರು.
ಈ ಬಾರಿ ಏರ್ ಶೋ ಅನುಮಾನ.
ದಸರಾ ವೇಳೆ ಏರ್ ಶೋ ಆಯೋಜನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಹೆಚ್.ಸಿ ಮಹದೇವಪ್ಪ, ಈ ಬಾರಿ ಏರ್ ಶೋ ಅನುಮಾನ. ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಏರ್ ಶೋ ಇರೋದಿಲ್ಲ. ಇತರೆ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದರು.
ಯುವದಸರಾಕ್ಕೆ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಖ್ಯಾತ ಸಂಗೀತ ನಿರ್ದೇಶಕರು ಭಾಗಿಯಾಗುತ್ತಿದ್ದಾರೆ. ಮಹರಾಜ ಕಾಲೇಜು ಮೈದಾನದಲ್ಲಿ ಟ್ರಾಫಿಕ್ ಸಮಸ್ಯೆ, ಲಾ ಅಂಡ್ ಆರ್ಡರ್ ಗೆ ತೊಂದರೆಯಾಗಬಹುದು. ಹಾಗಾಗಿ ನಗರದ ಹೊರ ವಲಯದಲ್ಲಿ ಯುವ ದಸರಾ ಆಯೋಜನೆ ಮಾಡಲಾಗಿದೆ. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಲೈಟ್ ವ್ಯವಸ್ಥೆ ಮಾಡಲಾಗಿದೆ. ಯುವ ದಸರಾಕ್ಕೆ ಆಗಮಿಸುವ ಜನರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಯುವ ದಸರಾ ಕಾರ್ಯಕ್ರಮ ಸುತ್ತಮುತ್ತ ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಮಾಡಲಾಗುತ್ತದೆ. ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನ ನೇಮಕ ಮಾಡುತ್ತೇವೆ ಎಂದು ತಿಳಿಸಿದರು.
ದಸರಾ ಗೋಲ್ಡ್ ಪಾಸ್ ಮಾರಾಟ: ಸಾರ್ವಜನಿಕರ ಸ್ಪಂದನೆ ಉತ್ತಮವಾಗಿದೆ-ಡಿಸಿ ಲಕ್ಷ್ಮಿಕಾಂತ ರೆಡ್ಡಿ
ಸೆಪ್ಟೆಂಬರ್ 26ರಿಂದಲು ದಸರಾ ಗೋಲ್ಡ್ ಪಾಸ್ ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರ ಸ್ಪಂದನೆ ಉತ್ತಮವಾಗಿದೆ. ಈಗಲೂ ಕೂಡ ಆನ್ ಲೈನ್ ನಲ್ಲಿ ಗೋಲ್ಡ್ ಪಾಸ್ ಮಾರಾಟಕ್ಕೆ ಇದೆ. ಪರಿಸ್ಥಿತಿ ನೋಡಿ ದಸರಾ ಗೋಲ್ಡ್ ಪಾಸ್ ವಿತರಣೆ ಮಾಡಲಾಗುತ್ತದೆ. ಸಮಸ್ಯೆ ಬಾರದ ರೀತಿ ಗೋಲ್ಡ್ ಪಾಸ್ ವಿತರಣೆ ಮಾಡಲಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾಹಿತಿ ನೀಡಿದರು.
Key words: Mysore Dasara, inauguration, Minister, HC Mahadevappa