ಸಿಎಂ ಆಗಲು ಸಾವಿರಾರು ಕೋಟಿ ಇಟ್ಟುಕೊಂಡಿದ್ದಾರೆಂಬ ಯತ್ನಾಳ್ ಆರೋಪ: ಐಟಿ ತನಿಖೆಯಾಗಲಿ  ಎಂದ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು, ಸೆಪ್ಟೆಂಬರ್ 30,2024 (www.justkannada.in): ಕೆಲವರು ಸಿಎಂ ಆಗಲು ಸಾವಿರಾರು ಕೋಟಿ ಇಟ್ಟುಕೊಂಡು ಕಾಯುತ್ತಿದ್ದಾರೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಯತ್ನಾಳ್​ ಹೇಳಿಕೆ ಬಗ್ಗೆ ನಮಗೂ ಮಾಹಿತಿ ಇದೆ. ಈ ಸಂಬಂಧ ಆದಾಯ ತೆರಿಗೆ ಇಲಾಖೆಯಿಂದ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.

ನಮ್ಮ ಸರ್ಕಾರವನ್ನು ಬೀಳಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ. ಅಷ್ಟೊಂದು ಹಣ ಎಲ್ಲಿಂದ ಬಂತು? ಎಲ್ಲದರ ಬಗ್ಗೆ ಆದಾಯ ತೆರಿಗೆ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಿ. ಈ ಬಗ್ಗೆ ನಾವು ಕೂಡ ನಮ್ಮ ಲೀಗಲ್ ಟೀಂ ಜೊತೆ ಚರ್ಚೆ ನಡೆಸಿ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಯತ್ನಾಳ್ ಹೇಳಿಕೆ ಕುರಿತು ಚರ್ಚಿಸಲು ​ಕಾಂಗ್ರೆಸ್ ಕಾನೂನು ತಂಡದ ಸಭೆ ಕರೆದಿದ್ದೇನೆ. 1,200 ಕೋಟಿ ರೂಪಾಯಿ ರೆಡಿಯಾಗಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಬಿಜೆಪಿ ಕಡೆಯಿಂದ ಈ ಹಣ ರೆಡಿಯಾಗಿದೆ ಎಂಬ ಮಾಹಿತಿ ಇದೆ. ಇದು ತೆರಿಗೆ ಇಲಾಖೆ ಹಾಗೂ ಇಡಿ (ಜಾರಿ ನಿರ್ದೇಶನಾಲಯ) ತನಿಖೆಯ ವ್ಯಾಪ್ತಿಗೆ ಬರುವ ವಿಚಾರ. ದೂರು ನೀಡುವ ಸಂಬಂಧ ಇಂದು ಚರ್ಚೆ  ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

Key words: Basanagowda patil Yatnal, DCM DK Shivakumar, IT