ಹಿರಿಯ ನಾಗರಿಕರ ಸಾಧನೆಗಳು ಯುವಜನರಿಗೆ ಸ್ಪೂರ್ತಿದಾಯಕ- ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅಕ್ಟೋಬರ್,1, 2024 (www.justkannada.in): ಹಿರಿಯ ನಾಗರಿಕರ ಸಾಧನೆಗಳು ಯುವಜನರಿಗೆ ಸ್ಪೂರ್ತಿ. ಹಿರಿಯರ ಬದುಕು ಕೇವಲ ಆದರ್ಶವಾಗಿಸದೇ, ಸಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ-2024 ಯನ್ನು ಉದ್ಘಾಟನೆ ಮಾಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಬಾರಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು, ‘ಘನತೆಯ ಬಾಳಿನೊಂದಿಗೆ ವಯೋಪಕ್ವತೆ: ವಿಶ್ವದಾದ್ಯಂತ ಹಿರಿಯ ಜೀವಿಗಳಿಗೆ ಆರೈಕೆ ಮತ್ತು ಬೆಂಬಲ ವ್ಯವಸ್ಥೆಗಳನ್ನು ಸದೃಢಗೊಳಿಸುವುದರ ಮಹತ್ವ’ಎಂಬ ವಿಶ್ವಸಂಸ್ಥೆಯ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದರು.

ವಿಶ್ವಮಾನವರಾಗಲು ಹಿರಿಯರ ಅನುಭವ ದಾರಿದೀಪ

ಹಿರಿಯರನ್ನು ಗೌರವದಿಂದ ಕಾಣಬೇಕು. ಅವರ ಅನುಭವಗಳನ್ನು ಗೌರವಿಸಿ ಪಾಲಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಹಿರಿಯರ ಕೊಡುಗೆಗಳು ಹಾಗೂ ಅವರ ಮಾರ್ಗದರ್ಶನದಿಂದ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು. ಬಾಲ್ಯ , ಯೌವ್ವನ, ವೃದ್ಧಾಪ್ಯ, ಮಾನವನ ಜೀವನದ ಸಹಜ ಘಟ್ಟಗಳು. ಹಿರಿಯ ನಾಗರಿಕರ ಸಾಧನೆಗಳು ಯುವಜನರಿಗೆ ಸ್ಪೂರ್ತಿ ನೀಡಲೆಂಬ ಸದುದ್ಧೇಶದಿಂದ ಹಿರಿಯ ನಾಗರಿಕನ್ನು ಗೌರವಿಸಿ ಸನ್ಮಾನಿಸಲಾಗುತ್ತದೆ. ನಮ್ಮ ಆತ್ಮಸಾಕ್ಷಿಯೇ ನ್ಯಾಯಾಲಯವಿದ್ದಂತೆ ಎಂದು ಮಹಾತ್ಮಾಗಾಂಧೀಜಿಯವರು ಹೇಳಿದ್ದರು. ಸಮಾಜದಲ್ಲಿ ಇಂದೂ ಮೌಢ್ಯಗಳು, ಕಂದಾಚಾರಗಳಿವೆ. ಇವುಗಳಿಗೆ ಜೋತುಬೀಳದೇ ವೈಚಾರಿಕತೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ರಾಷ್ಟ್ರಕವಿ ಕುವೆಂಪುರವರು ತಿಳಿಸಿದಂತೆ ಮಾನವ , ಅಲ್ಪಮಾನವನಾದೇ , ವಿಶ್ವಮಾನವನಾಗಲು ಪ್ರಯತ್ನಿಸಬೇಕು. ಇದಕ್ಕಾಗಿ ಹಿರಿಯರ ಅನುಭವಗಳು ನಮಗೆ ದಾರಿದೀಪವಾಗಿದೆ ಎಂದರು.

ಮಾಸಾಶನ ಹೆಚ್ಚಳದ ಬಗ್ಗೆ ಪರಿಶೀಲಿಸಿ ತೀರ್ಮಾನ

2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಸುಮಾರು 57.91ಲಕ್ಷದಷ್ಟು ಹಿರಿಯ ನಾಗರಿಕರಿದ್ದಾರೆ. ಇತ್ತೀಚಿನ ದಿನಮಾನದಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಇದಕ್ಕೆ ಕಾರಣ, ಮಕ್ಕಳು ವಿದೇಶದಲ್ಲಿ ನೆಲೆಸಿ, ತಂದೆತಾಯಿಯನ್ನು ಪೋಷಿಸಲು ಸಾಧ್ಯವಾಗದೆ ವೃದ್ಧಾಶ್ರಮಗಳಿಗೆ ಸೇರಿಸುತ್ತಾರೆ. ಸುಮಾರು 50 ಲಕ್ಷ ಹಿರಿಯ ನಾಗರಿಕರಿಗೆ ಮಾಸಾಶನ ನೀಡಲಾಗುತ್ತಿದೆ. ಈ ಮಾಸಾಶನದ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಪ್ರಶಸ್ತಿ ವಿಜೇತರಿಗೆ ಅಭಿನಂದನೆ

ಹಿರಿಯ ನಾಗರಿಕರ ನೆಮ್ಮದಿಗೆ ಹಾಗೂ ಆರೋಗ್ಯವನ್ನು ಖಾತ್ರಿಪಡಿಸುವುದು ಸರ್ಕಾರದ ಕರ್ತವ್ಯ. ತಾಲ್ಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ಸಮಸಮಾಜ ನಿರ್ಮಿಸುವ ನಮ್ಮ ಗುರಿಯನ್ನು ಈಡೇರಿಸಲು ಆರ್ಥಿಕವಾಗಿ, ಸಾಮಾಜಿಕವಾಗಿ ಆಶಕ್ತರಾಗಿರುವ ಜನರಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹಿರಿಯ ನಾಗರಿಕರು, ವಿಕಲಚೇತನರ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಸಿಎಂ ಸಿದ್ದರಾಮಯ್ಯ, ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಪ್ರಶಸ್ತಿ ಪುರಸ್ಕೃತರ ಸಾಧನೆಗಳು ಯುವಜನರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.

Key words: Achievements, senior citizens, inspiring, youth, CM Siddaramaiah